ಕರ್ನಾಟಕ ರಕ್ಷಣಾ ವೇದಿಕೆ ಯುವಸೇನೆ ಇಂದು (ಡಿ.29) ಶಿವಮೊಗ್ಗದಲ್ಲಿ ಪ್ರತಿಭಟನೆನಡೆಸಿ ಒಂದು ವಾರದೊಳಗೆ ಕನ್ನಡ ನಾಮ ಫಲಕ ಶೇಕಡಾ 60% ಹಾಕಿಲ್ಲವಾದಲ್ಲಿ ತಾವೇ ತೆರವು ಗೊಳಿಸುವುದಾಗಿ ಜಿಲ್ಲಾಧಿಕಾರಿಗಳಿಗೆ ಮೌನ ಪ್ರತಿಭಟನೆ ಮೂಲಕ ಮನವಿ ಸಲ್ಲಿಸಿದೆ.
ಒಂದು ವಾರದೊಳಗೆ ಕನ್ನಡ ನಾಮ ಫಲಕ ಶೇಕಡಾ 60% ಹಾಕಿಲ್ಲವಾದಲ್ಲಿ ನಾವೇ ತೆರುವುಗೊಳಿಸುತ್ತೇವೆ ಮತ್ತು ಯಾವದೇ ಕಾನೂನು ಕ್ರಮ ತೆಗೆದುಕೊಂಡರೂ ಎಲ್ಲದಕ್ಕೂ ನಾವು ತಯಾರಿದ್ದಿವೆ ಎಂದು ಕರವೇ ಜಿಲ್ಲಾ ಅಧ್ಯಕ್ಷ ಕಿರಣ್ ಕುಮಾರ್ ಎಚ್.ಎಸ್ ಎಚ್ಚರಿಸಿದ್ದಾರೆ.
ಕರ್ನಾಟಕ ರಕ್ಷಣಾ ವೇದಿಕೆ ಯುವಸೇನೆ ಜನೇವರಿ 05ರ ಒಳಗಾಗಿ ಎಲ್ಲಾ ಅಂಗಡಿ ಮುಂಗಟ್ಟುಗಳ ಮುಂಭಾಗ ಹಾಗೂ ಸಾರ್ವಜನಿಕ ಸ್ಥಳದಲ್ಲಿ ನಾಮಫಲಕಗಳು ಶೇ.60% ರಷ್ಟು ಕನ್ನಡ ಭಾಷೆಯಲ್ಲಿ ಇರತಕ್ಕದ್ದು. ಒಂದು ಪಕ್ಷ ಜಿಲ್ಲಾಡಳಿತ ಯಾವುದೇ ಕ್ರಮ ಕೈಗೊಳ್ಳದೆ ಇದ್ದಲ್ಲಿ ಅಂತಹ ನಾಮಫಲಕವನ್ನು ತೆರವುಗೊಳಿಸುತ್ತೇವೆ. ಇದಕ್ಕೆ ತಾವುಗಳು ಅವಕಾಶ ಕೊಡದೆ, ಈ ಕೂಡಲೇ ಅನ್ಯ ಭಾಷೆಯಲ್ಲಿ ಇರುವ ನಾಮಫಲಕಗಳನ್ನು ತೆರವುಗೊಳಿಸುವಂತೆ ವೇದಿಕೆ ಒತ್ತಾಯಿಸಿದೆ.
ನಮ್ಮ ಕನ್ನಡ ನಾಡಿನಲ್ಲಿ ಎಲ್ಲಾ ಧರ್ಮದ, ಎಲ್ಲಾ ಜಾತಿಯ, ಎಲ್ಲಾ ಪಂಗಡಗಳ ವಿವಿಧ ಸಂಸ್ಕೃತಿಯ ಜನರಿದ್ದು ನಾವೆಲ್ಲರೂ ಕೂಡ ಅಣ್ಣ-ತಮ್ಮಂದಿರ ಹಾಗೆ ಬದುಕುತ್ತಿದ್ದು, ಹೊರಗಿನಿಂದ ಬಂದಂತಹವರಿಗೆ ನಮ್ಮ ನೆಲ, ಶಾಂತಿಯ ನೆಲೆ ಕಲ್ಪಿಸಿದ್ದು ಅವರ ವ್ಯಾಪಾರ ವಹಿವಾಟುಗಳಿಗೆ ನಮ್ಮ ಅಭ್ಯಂತರವಿರುವುದಿಲ್ಲ. ಅವರವರ ಭಾಷೆ, ಅವರವರ ಸಂಸ್ಕೃತಿ, ಅವರವರ ಮನೆಯಲ್ಲೇ ಇದ್ದರೆ ಚಂದ.
ಈ ನೆಲದಲ್ಲಿ ಬದುಕುತ್ತಿರುವವರೆಲ್ಲರೂ ತಮ್ಮ ವ್ಯಾಪಾರ ವಹಿವಾಟುಗಳನ್ನು ಕನ್ನಡ ಭಾಷೆಯಲ್ಲೇ ಮಾಡಬೇಕೆಂಬುದು ನಮ್ಮ ಆಗ್ರಹವೆಂದರು.
ನೀವು ಇಲ್ಲಿ ಬದುಕಲು, ವ್ಯಾಪಾರ ಮಾಡಲು ನಮ್ಮ ಅಭ್ಯಂತರವೇನಿಲ್ಲ. ಆದರೆ, ತಾವುಗಳು ಕಡ್ಡಾಯವಾಗಿ ತಮ್ಮ ಅಂಗಡಿಗಳಿಗೆ, ಕಛೇರಿಗಳಿಗೆ ಕನ್ನಡ ನಾಮಫಲಕಗಳನ್ನು ಅಳವಡಿಸುವುದಲ್ಲದೆ ಕನ್ನಡದಲ್ಲೇ ಮಾತನಾಡುವುದು, ವ್ಯವಹಾರ ಮಾಡುವುದು ಮಾಡಬೇಕೆಂಬುದು ನಮ್ಮ ಸಂಘಟನೆಯ ಧ್ವನಿಯಾಗಿದೆ ಎಂದರು.
ಈ ನೆಲದಲ್ಲಿ ಕನ್ನಡ ಭಾಷೆಯ ಉಳಿವಿಗಾಗಿ ಕನ್ನಡವನ್ನು ನಾಮಫಲಕಗಳಲ್ಲಿ ಶೇ.60% ರಷ್ಟು ಬಳಸಬೇಕೆಂಬ ಕಾನೂನು ಇದ್ದರೂ ಸಹ ಈ ಕಾನೂನನ್ನು ಗಾಳಿಗೆ ತೂರಿ ಇಂಗ್ಲಿಷ್, ಇತರೆ ಭಾಷೆಗಳನ್ನು ಬಹಿರಂಗವಾಗಿ ನಾಮಫಲಕಗಳಲ್ಲಿ ಹಾಕಿರುತ್ತಾರೆ. ಆದರೂ ಸಹ ಯಾವುದೇ ಸಂಬಂಧಪಟ್ಟ ಅಧಿಕಾರಿಗಳು ಯಾವುದೇ ಕಾನೂನು ಕೈಗೊಳ್ಳದೇ ಇರುವುದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ ಎಂದರು.
ಅನ್ಯ ಭಾಷೆಯಿಂದ ಆಕ್ರಮಣ, ದುರ್ಬಲ ಕಾನೂನು, ಆಂಗ್ಲ ಭಾಷೆಯ ವ್ಯಾಮೋಹದಿಂದ ನಮ್ಮ ನಾಡು, ನೆಲ, ಭಾಷೆ, ಸಂಸ್ಕೃತಿ ಎಲ್ಲವೂ ಅಧೋಗತಿಗೆ ಹೋಗುತ್ತಿದ್ದು ಇದರ ರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದರು.
ಈ ಸಂದರ್ಭದಲ್ಲಿ ನಗರಾಧ್ಯಕ್ಷ ಪ್ರಫುಲ್ಚಂದ್ರ ಎಚ್, ಮಹಿಳಾ ನಗರಾಧ್ಯಕ್ಷರಾದ ಕವಿತಾ ಮತ್ತಿತರರು ಉಪಸ್ಥಿತರಿದ್ದರು.