ಕನ್ನಡ ಪರ ಸಂಘಟನೆಗಳು ಹೋರಾಟ ಮಾಡುತ್ತಿರುವಾಗ ಸರ್ಕಾರವು ಪೊಲೀಸರ ಮೂಲಕ ಹೋರಾಟವನ್ನು ಹತ್ತಿಕ್ಕುತ್ತಿದೆ. ಸರ್ಕಾರದ ಈ ನಡೆಯನ್ನು ಖಂಡಿಸುತ್ತೇವೆ ಎಂದು ಮಂಜುನಾಥ ಓಲೆಕಾರ ಅಸಮಧಾನ ವ್ಯಕ್ತಪಡಿಸಿದ್ದಾರೆ.
ಹಾವೇರಿ ಪಟ್ಟಣದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಗಜಸೇನೆ ಮುಖಂಡರು, ಕನ್ನಡ ಪರ ಹೋರಾಟಗಾರರ ಮೇಲೆ ಹಾಕಿರುವ ಮೊಕದ್ದಮೆಗಳನ್ನು ತಗೆದು ಬಿಡುಗಡೆ ಮಾಡಬೇಕೆಂದು ಪ್ರತಿಭಟಿಸಿ, ಹಾವೇರಿ ತಹಸೀಲ್ದಾರರಿಗೆ ಮನವಿ ಸಲ್ಲಿಸಿದ್ದಾರೆ.
ಈ ವೇಳೆ ಕರವೇ ಗಜಸೇನೆ ಜಿಲ್ಲಾ ಅಧ್ಯಕ್ಷ ಮಂಜುನಾಥ ಓಲೆಕಾರ ಮಾತನಾಡಿ, ಸರ್ಕಾರ ಕರ್ನಾಟಕದಲ್ಲಿ ಕನ್ನಡಕ್ಕೆ ಹೆಚ್ಚಿನ ಆದ್ಯತೆ ಸೇರಿದಂತೆ ಅಂಗಡಿ ಹಾಗೂ ವ್ಯಾಪಾರ ಉದ್ದಿಮೆಯ ಮಹಲು, ಕಾರ್ಖಾನೆಗಳು ಸೇರಿದಂತೆ ಎಲ್ಲದರ ನಾಮ ಫಲಕಗಳು ಶೇ.60ರಷ್ಟು ಕನ್ನಡದಲ್ಲಿ ಹಾಕಿರಬೇಕು ಎಂದು ಆದೇಶಿದ್ದು ಸ್ವಾಗತಾರ್ಹ. ಆದರೆ, ತಮ್ಮ ಆದೇಶಕ್ಕೆ ಅನೇಕ ಪರ ಭಾಷಿಕ ವ್ಯಾಪಾರಸ್ಥರು ಮನ್ನಣೆ ನೀಡದೇ ದುರ್ನಡತೆಯನ್ನು ಮುಂದುವರೆಸಿರುವುದನ್ನು ಖಂಡಿಸಬೇಕೆ ಹೊರತು ಹೋರಾಟ ಮಾಡುತ್ತಿರುವವರನ್ನು ಹತ್ತಿಕ್ಕುವುದಲ್ಲ. ನಿಮ್ಮ ಈ ನಡೆಯನ್ನು ಕರ್ನಾಟಕ ರಕ್ಷಣಾ ವೇದಿಕೆ ಗಜಸೇನೆ ತೀವ್ರವಾಗಿ ಖಂಡಿಸುತ್ತದೆ ಎಂದರು.
ಕನ್ನಡಪರ ಹೋರಾಟಗಾರ ಟಿ.ಎ. ನಾರಾಯಣಗೌಡರನ್ನು ಬಂಧಿಸಿ ಅಮಾನವೀಯ ರೀತಿಯಲ್ಲಿ ನಡೆಸಿಕೊಂಡಿರುವುದು ಸರಿಯಲ್ಲ. ಕೂಡಲೇ ಟಿ.ಎ. ನಾರಾಯಣಗೌಡರು ಹಾಗೂ ಅವರ ಕಾರ್ಯಕರ್ತರನ್ನು ಬಿಡುಗಡೆ ಮಾಡಬೇಕು. ಅವರ ಮೇಲೆ ದಾಖಲಿಸಿರುವ ಮುಕದ್ದಮೆಯನ್ನು ಹಿಂಪಡೆಯಬೇಕು ಇಲ್ಲವಾದರೆ ರಾಜ್ಯವ್ಯಾಪ್ತಿ ಹೋರಾಟ ಮಾಡಬೇಕಾಗುತ್ತದೆ ಎಂದು ಕರವೇ ಗಜಸೇನೆ ಉಪಕಾರ್ಯದರ್ಶಿ ಯಲ್ಲಪ್ಪ ಮರತಿ ಎಚ್ಚರಿಕೆ ನೀಡಿದರು.
ಈ ಪ್ರತಿಭಟನೆಯಲ್ಲಿ ಕರವೇ ಗಜಸೇನೆ ಕಾರ್ಯಕೃತರು, ಮುಖಂಡರು ಹೋರಾಟಗಾರರು ಉಪಸ್ಥಿತರಿದ್ದರು.