ವೃದ್ಧೆಯೊಬ್ಬರಿಗೆ ಮನೆ ಮಾರಾಟ ಮಾಡಿ ಕೊಡುವುದಾಗಿ ನಂಬಿಸಿ ಕೋಟ್ಯಂತರ ರೂಪಾಯಿ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ನಟ, ನಿರ್ಮಾಪಕ, ರಾಕಲೈನ್ ವೇಂಕಟೇಶ್ ಪುತ್ರ ಅಭಿಲಾಷ್ಗೆ ಸಿಸಿಬಿ ಮತ್ತೆ ನೋಟಿಸ್ ನೀಡಿದೆ.
ಈ ಹಿಂದೆ ವಿಚಾರಣೆಗೆ ಹಾಜರಾಗಿದ್ದ ಅಭಿಲಾಷ್ ಸರಿಯಾದ ಮಾಹಿತಿ ನೀಡಿರಲಿಲ್ಲ. ಈ ಹಿನ್ನೆಲೆ, ಎರಡನೇ ಬಾರಿಗೆ ವಿಚಾರಣೆಗೆ ಹಾಜರಾಗಲು ಸೂಚನೆ ನೀಡಲಾಗಿದೆ ಎಂದು ತಿಳಿದುಬಂದಿದೆ.
ಏನಿದು ಪ್ರಕರಣ?
ಬೆಂಗಳೂರಿನಲ್ಲಿರುವ ಮನೆಯೊಂದನ್ನು ಮಾರಾಟ ಮಾಡಿ ವಿದೇಶದಲ್ಲಿ ನೆಲೆಸಿರುವ ಮಗನ ಜೊತೆಗೆ ನೆಲೆಸಲು ವೃದ್ದೆಯೊಬ್ಬರು ನಿರ್ಧಾರ ಮಾಡಿ, ತಮ್ಮ ಮನೆ ಮಾರಾಟಕ್ಕೆ ಮುಂದಾಗಿದ್ದರು. ಈ ವೇಳೆ, ಮನೆ ಖರೀದಿ ಮಾಡಿಕೊಡುತ್ತೇವೆ ಎಂದು ಪರಿಚಿತರಾದವರು ನಕಲಿ ದಾಖಲೆ ಸೃಷ್ಟಿ ಮಾಡಿ ಬರೋಬ್ಬರಿ ₹3.85 ಕೋಟಿ ಬ್ಯಾಂಕ್ನಿಂದ ಸಾಲ ಪಡೆದಿದ್ದರು.
ಈ ಮೂರು ಕೋಟಿ ಪೈಕಿ ₹1 ಕೋಟಿ ಅಭಿಲಾಷ್ ಪಾಲುದಾರರಾಗಿರುವ ಕಂಪನಿಯ ಖಾತೆಗೆ ವರ್ಗಾಯಿಸಲಾಗಿದೆ ಎಂದು ಆರೋಪಿಸಲಾಗಿದೆ. ಸದ್ಯ ಈ ಬಗ್ಗೆ ಮಾಹಿತಿ ಪಡೆಯಲು ಸಿಸಿಬಿ ವಿಚಾರಣೆಗೆ ಕರೆದಿದೆ.
ಈ ಸುದ್ದಿ ಓದಿದ್ದೀರಾ? ಕನ್ನಡ ನಾಮಫಲಕ | ಕರವೇ ವಿರುದ್ದ ಮತ್ತೆ ಮೂರು ಪ್ರಕರಣ ದಾಖಲು
ಸದ್ಯ ಸಾಲ ಪಡೆದು ವಂಚಿಸಿದ್ದ ಆರೋಪದಡಿ ಭಾಸ್ಕರ್, ಮಹೇಶ, ಅಭಿಷೇಕ್ ಗೌಡ, ಡಿ.ಆರ್ ಅರುಣ್, ಟಿ.ಪಿ ಶಿವಕುಮಾರ್ ಎಂಬಾತನನ್ನು ಸಿಸಿಬಿಯ ಆರ್ಥಿಕ ಅಪರಾಧ ವಿಭಾಗದ ಪೊಲೀಸರು ಬಂಧಿಸಿದ್ದರು. ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೆ.ಪಿ ನಗರದ ನಿವಾಸಿಯಾಗಿರುವ ಅಂಬುಜಾಕ್ಷಿ(75) ಅವರು 1,350 ಅಡಿ ವಿಸ್ತೀರ್ಣದ ಬಿಡಿಎ ನಿವೇಶನದಲ್ಲಿ ಎರಡು ಅಂತಸ್ತಿನ ಸ್ವಂತ ಡೂಪ್ಲೆಕ್ಸ್ ಮನೆ ಹೊಂದಿದ್ದಾರೆ.