ಸರ್ಕಾರಿ ಪ್ರೌಢಶಾಲೆಗೆ ಮೀಸಲಿಟ್ಟಿದ್ದ ಜಾಗವನ್ನು ಅತಿಕ್ರಮಣ ಮಾಡಿರುವುದನ್ನು ಕೂಡಲೇ ತೆರವುಗೊಳಿಸಬೇಕು ಎಂದು ಆಲ್ ಇಂಡಿಯಾ ರಾಹುಲ್ ಗಾಂಧಿ ಬ್ರಿಗ್ರೇಡ್ ರಾಯಚೂರು ಜಿಲ್ಲಾ ಕಾರ್ಯದರ್ಶಿ ಅಂಬಾಜಿ ಮೈದರಕರ ಹೇಳಿದರು.
ರಾಯಚೂರು ನಗರದಲ್ಲಿ ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿ, “ನಗರದ ವಾರ್ಡ 28ರ ಸರ್ವೇ 384/1ಎ ಸಿಎ ನಿವೇಶನ ಸರ್ಕಾರಿ ಪ್ರೌಢಶಾಲೆಗೆ ಮೀಸಲಿಟ್ಟ ಜಾಗವನ್ನು ಒತ್ತುವರಿ ಮಾಡಿ ದೇವಸ್ಥಾನ ನಿರ್ಮಾಣ ಮಾಡಿದ್ದು, 15 ದಿನಗಳಲ್ಲಿ ತೆರವುಗೊಳಿಸದೇ ಹೋದಲ್ಲಿ ನಗರಸಭೆ ಮುಂದೆ ಹೋರಾಟ ನಡೆಸಲಾಗುವುದು” ಎಂದರು.
“ಎಲ್‌ಬಿಎಸ್ ನಗರದ ಸರ್ಕಾರಿ ಪ್ರೌಢಶಾಲೆಗೆ ಕಾಯ್ದಿರಿಸಿದ ಸ್ಥಳದಲ್ಲಿ ಅನಧಿಕೃತವಾಗಿ ಸಂತೋಷ ನಗರ ವಸತಿ ಬಡವಾಣೆಯ ಜಾಗದಲ್ಲಿ ದೇವಸ್ಥಾನ ನಿರ್ಮಾಣ ಮಾಡಲಾಗಿದೆ. ಈಗಾಗಲೇ ಅನೇಕ ಸಂಘಟನೆಗಳು ಶಾಸಕರು, ನಗರಸಭೆ, ಆರ್‌ಡಿಎಗೆ ಮನವಿ ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ನಗರ ಶಾಸಕರು ತೆರವುಗೊಳಿಸುವದಾಗಿ ಹೇಳಿ ಮಾತು ಮರೆತಿದ್ದಾರೆ” ಎಂದು ಆರೋಪಿಸಿದರು.
“ದೇವರ ಹೆಸರಿನಲ್ಲಿ ಸರ್ಕಾರಿ ಶಾಲೆ ಕಟ್ಟಡ ನಿರ್ಮಾಣಕ್ಕೆ ಅಡ್ಡಿ ಉಂಟು ಮಾಡಲಾಗುತ್ತಿದೆ. ಸರ್ಕಾರಿ ಶಾಲೆಗಳು ಮಕ್ಕಳ ಸಂಖ್ಯೆ ಇಲ್ಲದೇ ಮುಚ್ಚುತ್ತಿರುವಾಗ ಇರುವ ಶಾಲೆಗೆ ಕಾಯ್ದಿರಿಸಿದ ಸ್ಥಳ ಅತಿಕ್ರಮಣವಾದರೂ ನಗರಸಭೆ ಯಾವುದೇ ಕ್ರಮಕ್ಕೆ ಮುಂದಾಗುತ್ತಿಲ್ಲ. ಕೂಡಲೇ ತೆರವುಗೊಳಿಸಿ ಶಾಲೆ ನಿವೇಶನ ಸರಹದ್ದು ನಿಗದಿಪಡಿಸಬೇಕು. ಇಲ್ಲದಿದ್ದಲ್ಲಿ ತೀವ್ರ ಪ್ರತಿಭಟನೆ ನಡೆಸಲಾಗುತ್ತದೆ” ಎಂದು ಎಚ್ಚರಿಕೆ ನೀಡಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಮುಟ್ಟಿನ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸುವ ಕೆಲಸವಾಗಬೇಕು: ಸಿಇಒ
ಈ ಸಂದರ್ಭದಲ್ಲಿ ನಗರ ಅಧ್ಯಕ್ಷ ಸಿದ್ದಲಿಂಗಯ್ಯ ಇಷಾನ ಅಹ್ಮದ್, ಮೋಸಿನ್ ಖಾನ್, ಅಮೀರ್ ಇದ್ದರು.
ವರದಿ : ಹಫೀಜುಲ್ಲ