ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ಹಾಗೂ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ (ಕೆಕೆಆರ್‌ಟಿಸಿ) ಸಿಬ್ಬಂದಿ ಕರ್ತವ್ಯದ ವೇಳೆ ಮೃತಪಟ್ಟರೆ, ಅವರ ಅವಲಂಬಿತರಿಗೆ ₹1 ಕೋಟಿ ಪರಿಹಾರ ವಿಮೆ ಮಾಡಿಸಿತ್ತು. ಇದೀಗ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ(ಬಿಎಂಟಿಸಿ)ಯೂ ಕೂಡ ತನ್ನ ಸಿಬ್ಬಂದಿಗೆ ಪರಿಹಾರ ವಿಮೆ ಮಾಡಿಸಿದ್ದು, ಯೂನಿಯನ್ ಬ್ಯಾಂಕ್‌ನೊಂದಿಗೆ ಮೂರು ವರ್ಷಗಳ ಒಡಂಬಡಿಕೆ ಮಾಡಿಕೊಂಡಿದೆ. ಮೃತ ಸಿಬ್ಬಂದಿಯ ಅವಲಂಬಿತರಿಗೆ ₹50 ಲಕ್ಷ ವಿಮಾ ಪರಿಹಾರ ಮೊತ್ತ ಸೇರಲಿದೆ.
ಬಿಎಂಟಿಸಿ ಚಾಲಕ ಮಲ್ಲಿಕಾರ್ಜುನ ಅವರು 2023ರ ಸೆಪ್ಟೆಂಬರ್ 30ರಂದು ಚಿತ್ರದುರ್ಗದ ಬಳಿ ರಸ್ತೆ ದಾಟುವಾಗ ಕಾರು ಡಿಕ್ಕಿ ಹೊಡೆದು ಅಪಘಾತದಲ್ಲಿ ಮರಣ ಹೊಂದಿದ್ದರು. ಮೃತರು ಯೂನಿಯನ್ ಬ್ಯಾಂಕ್‌ನಲ್ಲಿ ವೇತನ ಖಾತೆ ಹೊಂದಿದ್ದರು. ಈ ಹಿನ್ನೆಲೆ, ಅವರ ಪತ್ನಿ ರುದ್ರಮ್ಮ ಹಿರೇಮಠ ಅವರಿಗೆ ಯೂನಿಯನ್ ಬ್ಯಾಂಕ್ ವತಿಯಿಂದ ₹50 ಲಕ್ಷ ವಿಮಾ ಪರಿಹಾರ ಮೊತ್ತವನ್ನು ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಅವರು ವಿತರಣೆ ಮಾಡಿದರು.
ದುಃಖತಪ್ತ ಕುಟುಂಬದವರಿಗೆ ಸಾಂತ್ವನ ಹೇಳಿ ಮಾತನಾಡಿದ ಸಚಿವರು, “ಯುನಿಯನ್ ಬ್ಯಾಂಕ್‌ದವರು ನೀಡಿರುವ ₹50 ಲಕ್ಷ ಮೊತ್ತವನ್ನು ಸದುಪಯೋಗ ಪಡಿಸಿಕೊಳ್ಳಿ, ಮನೆ ಕಟ್ಟಿಕೊಳ್ಳಿ, ಮಕ್ಕಳಿಗೆ ವಿದ್ಯಾಭ್ಯಾಸ ಮಾಡಿಸಿರಿ. ನಮ್ಮ ಸಂಸ್ಥೆಯಲ್ಲಿಯೂ ಕೂಡ ಅವಲಂಬಿತರಿಗೆ ಅನುಕಂಪದ ಆಧಾರದ ಮೇರೆಗೆ ಕೆಲಸವನ್ನು ವರಿಷ್ಠತೆ ಅನುಸಾರ ನೀಡುತ್ತಿದ್ದೇವೆ. ಸಂಸ್ಥೆಯಿಂದ ಬರುವ ಉಪದಾನ, ಭವಿಷ್ಯ ನಿಧಿ, ಆಂತರಿಕ ಗುಂಪು ವಿಮಾ ಮೊತ್ತ ₹3 ಲಕ್ಷ, ಗಳಿಕೆ ರಜೆ, ಡಿ.ಆರ್.ಬಿ.ಎಫ್, ಇ.ಡಿ.ಎಲ್.ಐ (ಗುಂಪು ವಿಮೆ) ಮುಂತಾದ ಧನ ಸಹಾಯವನ್ನು ಉತ್ತಮ ಕಾರ್ಯಗಳಿಗೆ ಬಳಸಿಕೊಳ್ಳಿ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಪ್ರಿಯತಮೆ ಹಿಂದೆ ಬಿದ್ದಿದ್ದ ಸ್ನೇಹಿತನ ಮೇಲೆ ಪ್ರಿಯಕರ ಹಲ್ಲೆ: ಬಂಧನ
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ನೌಕರರ ಹಿತದೃಷ್ಟಿಯಿಂದ ಯೂನಿಯನ್ ಬ್ಯಾಂಕ್‌ನೊಂದಿಗೆ 2023ರ ಆಗಸ್ಟ್ 21ರಂದು ಮೂರು ವರ್ಷಗಳ ಅವಧಿಗೆ ಒಡಂಬಡಿಕೆ ಮಾಡಿಕೊಂಡಿದ್ದು, ಈ ಒಡಂಬಡಿಕೆ ಅನ್ವಯ ಯೂನಿಯನ್ ಬ್ಯಾಂಕ್‌ನಲ್ಲಿ ಯೂನಿಯನ್ ಸೂಪರ್ ಸ್ಯಾಲರಿ ಅಕೌಂಟ್ (Union Super Salary Account) ಖಾತೆ ಹೊಂದಿದ ಸಿಬ್ಬಂದಿ ಕರ್ತವ್ಯ ನಿರತ ಅಥವಾ ವೈಯಕ್ತಿಕ ಅಪಘಾತದಿಂದ ಮರಣ ಹೊಂದಿದ್ದಲ್ಲಿ ಬ್ಯಾಂಕ್ ವತಿಯಿಂದ ಪರಿಹಾರ ವಿಮೆ ಸೇರಿದಂತೆ ಹಲವು ಸೌಲಭ್ಯಗಳನ್ನು ನೀಡಲಾಗುತ್ತದೆ ಎಂದು ಬಿಎಂಟಿಸಿ ತಿಳಿಸಿದೆ.
- ಮಾಸಿಕ ವೇತನ ₹25,000 ಕ್ಕಿಂತ ಕಡಿಮೆ ಇದ್ದಲ್ಲಿ ₹50 ಲಕ್ಷ ವಿಮಾ ಮೊತ್ತ ಮತ್ತು ಡೆಬಿಟ್ ಕಾರ್ಡ್ ಹೊಂದಿದ್ದಲ್ಲಿ ₹4 ಲಕ್ಷ ಒಟ್ಟು ₹54 ಲಕ್ಷ ಮೊತ್ತ ಪಾವತಿಸಲಾಗುವುದು.
- ಮಾಸಿಕ ವೇತನ ₹25,000 ಕ್ಕಿಂತ ಮೇಲ್ಪಟ್ಟಲ್ಲಿ ₹50 ಲಕ್ಷ ವಿಮಾ ಮೊತ್ತ ಮತ್ತು ಡೆಬಿಟ್ ಕಾರ್ಡ್ ಹೊಂದಿದ್ದಲ್ಲಿ ₹15 ಲಕ್ಷ ಒಟ್ಟು ₹65 ಲಕ್ಷ ಮೊತ್ತ ಪಾವತಿಸಲಾಗುವುದು.
- ₹25,000 ಕ್ಕಿಂತ ಹೆಚ್ಚು ವೇತನ ಇರುವ ಸಿಬ್ಬಂದಿಗೆ ವಾರ್ಷಿಕ ₹15,000 ವೈದ್ಯಕೀಯ ಮರುಪಾವತಿ ಸೌಲಭ್ಯ
ಈ ಸಂದರ್ಭದಲ್ಲಿ ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಸತ್ಯವತಿ ಜಿ, ಮುಖ್ಯ ಸಂಚಾರ ವ್ಯವಸ್ಥಾಪಕರು (ಆ) ಜಿ.ಟಿ.ಪ್ರಭಾಕರ್ ರೆಡ್ಡಿ ಹಾಗೂ ಯುನಿಯನ್ ಬ್ಯಾಂಕ್ ಪ್ರಾದೇಶಿಕ ಅಧಿಕಾರಿ ಆಸೀಮ್ ಹಾಗೂ ಸಂಸ್ಥೆಯ ಎಲ್ಲ ಇಲಾಖಾ ಮುಖ್ಯಸ್ಥರು ಉಪಸ್ಥಿತರಿದ್ದರು.