ಶಿವಮೊಗ್ಗ ತಾಲೂಕು 10ನೇ ಮಕ್ಕಳು ಕನ್ನಡ ಸಾಹಿತ್ಯ ಸಮ್ಮೇಳನ ಮತ್ತು ರಾಷ್ಟ್ರಕವಿ ಕುವೆಂಪು ಅವರ ಜನ್ಮೋತ್ಸವದ ಹಾಗೂ ವಿಶ್ವಮಾನವ ದಿನ ಆಚರಿಸಲಾಗಿದೆ.
ನಗರದ ಹೊರವಲಯದ ಗುರುಪುರದ ಬಿಜಿಎಸ್ ಶಿಕ್ಷಣ ಸಂಸ್ಥೆಯ ಸಭಾಂಗಣದಲ್ಲಿ (ಡಿ.29) ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ನೇತೃತ್ವದಲ್ಲಿ ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್, ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ ಸಹಯೋಗದಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಅರಿಕೇಸರಿ ಆಶ್ರಯ ಕೊಟ್ಟಿದ್ದರಿಂದ ಪಂಪಕವಿ ಬೆಳೆದರು. ತೈಲಪದೊರೆ ಆಶ್ರಯ ಕೊಟ್ಟಿದ್ದರಿಂದ ರನ್ನ ಕವಿ ಬೆಳೆದರು. ನಮಗೆ ಅವಕಾಶ ನೀಡಿದ್ದರಿಂದ ನಾವೆಲ್ಲರೂ ಇಲ್ಲಿ ಸೇರಿದ್ದೇವೆ. ನಮಗೆ ಮಾರ್ಗದರ್ಶನ ಮಾಡಿದರೆ ಖಂಡಿತ ಸಾಹಿತ್ಯ ಪ್ರತಿಭೆಗಳಾಗಿ ಬೆಳಗುವ ಉತ್ಸಾಹವಿದೆ.
ವಿಶ್ವಮಾನವ ಸಂದೇಶದ ಮಹತ್ವ ಕುರಿತು ಮಾತನಾಡಿದ ಸಾಹಿತಿ ಡಾ. ಎಚ್.ಟಿ. ಕೃಷ್ಣಮೂರ್ತಿ, ಜೀವನಕ್ಕೆ ಚಂದದ ಕನಸಿರಬೇಕು. ನಿರ್ದಿಷ್ಟ ಗುರಿಯೂ ಇರಬೇಕು. ನಿಷ್ಠೆ, ಶ್ರದ್ಧೆ, ಪರಿಶ್ರಮ ಇರಬೇಕು. ಬದ್ಧತೆ ಇರಬೇಕು ಎಂದರು. ಕುವೆಂಪು ಅವರ ಸಾಮರಸ್ಯ, ಸಮತೆ, ಸಮಬಾಳು ವಿಚಾರಗಳನ್ನು ವಿಸ್ತಾರವಾಗಿ ವಿವರಿಸಿದರು.
ಆಶಯ ನುಡಿಗಳನ್ನಾಡಿದ ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಡಿ. ಮಂಜುನಾಥ, ಕನ್ನಡ ಭಾಷೆಯನ್ನು ನಿರ್ಲಕ್ಷ್ಯ ಮಾಡಬಾರದು. ಕನ್ನಡ ಓದು, ಬರಹದ ಬಗ್ಗೆ ಕಾಳಜಿ ವಹಿಸಬೇಕು. ಜ್ಞಾನದ ಕಿಂಡಿಯನ್ನು ಕನ್ನಡದ ಮೂಲಕ ಕಂಡುಕೊಳ್ಳಲು ಪ್ರಯತ್ನಿಸಬೇಕು. ಆ ಮೂಲಕ ಕನ್ನಡ ಸಾಹಿತ್ಯ ಓದು, ಬರೆಯುವ ಕಡೆ ಆಸಕ್ತಿ ವಹಿಸಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ನಮ್ಮ ಭಾಷೆಯನ್ನು ಮರೆತು ಬೇರೆ ಭಾಷೆಯಕಡೆ ಮುಖ ಮಾಡುವುದು ತಪ್ಪು ಎಂದು ಸಮ್ಮೇಳನದ ಸರ್ವಾಧ್ಯಕ್ಷೆ, ಗುರುಪುರದ ಬಿಜಿಎಸ್ ವಸತಿ ಶಾಲಾ ವಿದ್ಯಾರ್ಥಿನಿ ಎಸ್.ಬಿ.ರಕ್ಷಾ ಹೇಳಿದರು. ಹೊಸ ಶಿಕ್ಷಣ ನೀತಿಯಲ್ಲಿ ಮೊದಲ ಹಂತದ ಕಲಿಕೆ ಮಾತೃಭಾಷೆಯಲ್ಲಿರಬೇಕೆಂದು ಒತ್ತು ನೀಡಲಾಗಿದೆ. ಕನ್ನಡ ನಾಡಿನಲ್ಲಿ ವಾಸಿಸುತ್ತಿರುವ ಜನರು ತಮ್ಮ ಮಕ್ಕಳಿಗೆ ಮೊದಲ ಹಂತದ ಶಿಕ್ಷಣ ಮಾತೃಭಾಷೆಯಾದ ಕನ್ನಡದಲ್ಲಿ ನೀಡಿದರೆ, ಮಕ್ಕಳಿಗೆ ಕನ್ನಡ ಭಾಷೆಯ ಶ್ರೀಮಂತಿಕೆ, ಸೊಗಡು ತಿಳಿಯುತ್ತದೆ. ಸಹಜವಾಗಿ ಮಕ್ಕಳು ಕನ್ನಡ ಭಾಷೆ ಬಳಸುತ್ತಾರೆ ಎಂದರು.
ಸಾಹಿತ್ಯ ನಿರಂತರವಾಗಿರಬೇಕು. ಪ್ರವಾಹೋಪಾದಿಯಲ್ಲಿ ಸಾಹಿತ್ಯ ಬೆಳೆದು ಬರುತ್ತಿರಬೇಕು. ಮಕ್ಕಳಲ್ಲಿ ಸಾಹಿತ್ಯದ ಕುಡಿ ಒಡೆಯಬೇಕು. ಎಲ್ಲ ಮಕ್ಕಳು ಕನ್ನಡವನ್ನು ಪ್ರೀತಿಯಿಂದ ಓದುವಂತೆ ಆಗಬೇಕು. ಆಗ ಮಾತ್ರ ಕನ್ನಡ ಬೆಳೆಯುತ್ತದೆ ಎಂದು ಡಿವಿಎಸ್ ಸಂಯುಕ್ತ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ತೇಜಸ್ವಿ ಕೃಷ್ಣ ಹೇಳಿದರು.
ಸಾಹಿತಿ ಬಿ.ಚಂದ್ರೇಗೌಡ, ಶ್ರೀ ರಾಮಕೃಷ್ಣ ವಿದ್ಯಾಸಂಸ್ಥೆ ಕಾರ್ಯದರ್ಶಿ ಶೋಭಾ ವೆಂಕಟರಮಣ, ಕಸಾಪ ತಾಲೂಕು ಅಧ್ಯಕ್ಷೆ ಮಹಾದೇವಿ, ಬಿಜಿಎಸ್ ಶಾಲಾ-ಕಾಲೇಜು ಪ್ರಾಚಾರ್ಯ ಎಸ್.ಎಚ್. ಸುರೇಶ್, ಕಥಾ ಗೋಷ್ಠಿ ಅಧ್ಯಕ್ಷೆ ವರ್ಷಾ, ಕವನ ಗೋಷ್ಠಿ ಅಧ್ಯಕ್ಷೆ ಸಹನಾ, ಪ್ರಬಂಧ ಗೋಷ್ಠಿ ಅಧ್ಯಕ್ಷೆ ಸ್ವಾತಿ, ವಿಚಾರಗೋಷ್ಠಿ ಅಧ್ಯಕ್ಷೆ ನಿತ್ಯಾ ಎಂ.ಕುಲಕರ್ಣಿ ಇತರರಿದ್ದರು.