ಮುಸ್ಲಿಂ ಸಮುದಾಯದ ವಿರುದ್ಧ ಕೋಮು ಪ್ರಚೋದಕ ಹೇಳಿಕೆ ನೀಡಿ ಸಾರ್ವಜನಿಕರ ನಡುವೆ ದ್ವೇಷ ಬಿತ್ತುವ ಯತ್ನ ನಡೆಸಿರುವ ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಶಿವಮೊಗ್ಗ ಜಿಲ್ಲಾ ಮುಸ್ಲಿಂ ಮಹಿಳಾ ವಿಭಾಗವಾದ ಈ ಹುದಾ ಆಯೇಷಾ ತಮ್ಮ ಸಂಗಡಿಗರೊಂದಿಗೆ ಇಂದು (ಡಿ.30) ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಮನವಿಯಲ್ಲಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದ ಶಿಕ್ಷಣ ಸಂಸ್ಥೆಗಳಲ್ಲಿ ವಿಧಿಸಲಾಗಿರುವ ಹಿಜಾಬ್ ನಿಷೇಧವನ್ನು ಹಿಂಪಡೆಯುವ ಕುರಿತು ಹೇಳಿಕೆ ನೀಡಿ ಮೂಲಭೂತ ಹಕ್ಕನ್ನು ಎತ್ತಿ ಹಿಡಿಯುವ ಕುರಿತು ಹೇಳಿದ್ದರು. ಈ ಹೇಳಿಕೆಯನ್ನು ಉಲ್ಲೇಖಿಸಿ ಸಂಘಪರಿವಾರದ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಇಡೀ ಮುಸ್ಲಿಂ ಸಮುದಾಯದ ವಿರುದ್ಧ ದ್ವೇಷ ಕಾರುವ ಹೇಳಿಕೆ ನೀಡಿದ್ದಾರೆ.
ಕಲ್ಲಡ್ಕ ಪ್ರಭಾಕರ್ ಭಟ್ ರಾಜ್ಯದಲ್ಲಿ ಕೋಮು ದ್ವೇಷಭಾಷಣ ಮಾಡಿ ಶಾಂತಿ ಸುವ್ಯವಸ್ಥೆ ಕದಡುವ ನಿರಂತರ ಪ್ರಯತ್ನದಲ್ಲಿದ್ದು ಈ ಮುಂಚೆಯೂ ಕೂಡ ಅವರ ಹಲವು ಭಾಷಣದಲ್ಲಿ ಮುಸ್ಲಿಂ ಸಮುದಾಯವನ್ನು ಉದ್ದೇಶಿಸಿ ದ್ವೇಷ ಭಾಷಣ ಮಾಡಿದ್ದಾರೆ. ಇದೀಗ ಮತ್ತೊಮ್ಮೆ ಸಂವಿಧಾನ ಕೊಟ್ಟ ಧಾರ್ಮಿಕ ಸ್ವಾತಂತ್ರ್ಯದ ಅನುಗುಣವಾಗಿ ವಿದ್ಯಾರ್ಥಿನಿಯರು ಧರಿಸುವ ಶಿರವಸ್ತ್ರದ ಕುರಿತು ಆಧಾರ ರಹಿತವಾಗಿ ಮಾತನಾಡುತ್ತ ಮುಸ್ಕಾನ್ ಎಂಬ ವಿದ್ಯಾರ್ಥಿನಿಯ ಕುರಿತು ಮಾನಹಾನಿಕಾರ ಹೇಳಿಕೆ ನೀಡುತ್ತ ಇಡೀ ಮುಸ್ಲಿಂ ಸಮುದಾಯ ಮತ್ತು ಮಹಿಳೆಯರ ಕುರಿತು ದ್ವೇಷಕಾರುವ, ಸಮಾಜದಲ್ಲಿ ಅಶಾಂತಿ ಸೃಷ್ಟಿಸುವ ಹೇಳಿಕೆಗಳನ್ನು ನೀಡಿರುವುದನ್ನು ಮಾಧ್ಯಮಗಳು ವರದಿ ಮಾಡಿವೆ.
ಮಾಧ್ಯಮಗಳ ವರದಿಯ ಪ್ರಕಾರ, ಮುಸ್ಕಾನ್, ನೀನು ಮನೆಯಲ್ಲಿ ಅಥವಾ ಮಸೀದಿಯಲ್ಲಿ ಅಲ್ಲಾಹು ಅಶ್ವರ್ ಎಂದು ಹೇಳಬೇಕು. ಈ ದೇಶದಲ್ಲಿ ಹೇಳಬೇಕಿರೋದು ರಾಮ ನಾಮ, ಅಲ್ಲಾಹುಲಕ್ಟರ್ ಎನ್ನಬೇಕಾದರೆ ನೀವು ಮುಸಲ್ಮಾನ ದೇಶಕ್ಕೆ ಹೋಗಿ. ಮುಸ್ಕಾನ್ಗೆ ಶಹಭಾಸ್ ಗಿರಿ ಕೊಟ್ಟಿದ್ದು ಆಲ್ ಖೈದಾ ಭಯೋತ್ಪಾದಕ ಸಂಘಟನೆಯ ಸದಸ್ಯ ಮುಸ್ಕಾನ್ಗೂ ಕೂಡ ಅಲ್ ಖೈದಾ ಜೊತೆ ಸಂಪರ್ಕ ಇದೆ, ತಾಕತ್ತಿದ್ದರೆ ಮುಸ್ಕಾನ್ ಮತ್ತ ಶಾಲೆಗೆ ಹೋಗುವ ಕೆಲಸ ಮಾಡಲಿ. ಇದನ್ನು ನೀವು ಹಿಂದೂಗಳ ದೌರ್ಬಲ್ಯ ಅಂದುಕೊಳ್ಳಬೇಡಿ. ನಾವು ಒಟ್ಟಾಗಿರಲು ಬಯಸುತ್ತೇವೆ ಎಂದು ಕೋಮು ಪ್ರಚೋದಕವಾಗಿ ಹೇಳಿಕೆ ನೀಡಿದ್ದಾನೆ.
ಇಡೀ ಮುಸ್ಲಿಂ ಸಮುದಾಯದ ವಿರುದ್ಧ ದ್ವೇಷ ಭಾಷಣ ಮಾಡಿರುವ ಕಲ್ಲಡ್ಕ ಭಟ್, ಮುಸಲ್ಮಾನ್ ಹುಡುಗರು ಅಷ್ಟೇ ಅಲ್ಲ, ಮುಸ್ಲಿಂ ಮಹಿಳೆಯರು ಮತಾಂತರ ಮಾಡುತ್ತಿದ್ದಾರೆ. ನಿಮ್ಮ ಮುಸ್ಲಿಂ ಸಮಾಜದಲ್ಲಿ ಹುಡುಗಿಯರು ಇಲ್ಲವಾ ಹಿಂದೂ ಹುಡುಗಿಯರನ್ನು ಯಾಕೆ ಟಾರ್ಗೆಟ್ ಮಾಡುತ್ತೀರಾ. ಮತಾಂತರ ಮಾಡಲು ಲವ್ ಜಿಹಾದ್ ಪ್ರಯತ್ನಗಳಾಗುತ್ತಿವೆ ಎಂದು ಎಚ್ಚರಿಸಿದರು.
ಮುಸ್ಲಿಮರಿಗೆ ಈ ಹಿಂದೆ ತಲಾಕ್ ಹೇಳುವ ಅವಕಾಶ ಇತ್ತು. ಮೋದಿ ಸರ್ಕಾರದಿಂದ ತ್ರಿವಳಿ ತಲಾಕ್ ಇಲ್ಲದಾಗಿದೆ. ಮುಸಲ್ಮಾನ್ ಹೆಣ್ಣು ಮಕ್ಕಳಿಗೆ ಪರ್ಮನೆಂಟ್ ಗಂಡ ಇರಲಿಲ್ಲ. ಅವರಿಗೆ ಪರ್ಮನೆಂಟ್ ಗಂಡ ಕೊಟ್ಟಿದ್ದು ಮೋದಿ ಸರ್ಕಾರ ಎಂದು ಹೇಳಿರುವ ಕುರಿತು ರಾಜ್ಯ ಮಾಧ್ಯಮಗಳು ವರದಿ ಮಾಡಿವೆ.
ಮುಸ್ಲಿಮರ ಸಂಖ್ಯೆ ಹೆಚ್ಚಾಗುತ್ತಿದೆ ಈ ದೇಶವನ್ನು ಉಳಿಸಿಕೊಳ್ಳವ ಮಹತ್ ಕಾರ್ಯ ಹಿಂದುಗಳಿಂದ ಮಾತ್ರ ಸಾಧ್ಯ. ಮುಸ್ಲಿಮರಿಗೆ ಹಲವು ದೇಶಗಳಿವೆ ಆದರೆ ಹಿಂದುಗಳಿಗೆ ಭಾರತ ಮಾತ್ರ ಇರೋದು. ಹಿಂದುಗಳಿಗೆ ಬೇರೆ ಕಡೆ ಜಾಗ ಇಲ್ಲ. ಅದಕ್ಕಾಗಿ ನಾವು ಹೋರಾಟ ಮಾಡಬೇಕು ನಮ್ಮ ದೇಶವನ್ನು ಉಳಿಸಬೇಕು ಎಂದು ಹೇಳಿ ಸಾರ್ವಜನಿಕರ ನಡುವೆ ಧಾರ್ಮಿಕ ಸಂಘರ್ಷ ಹುಟ್ಟು ಹಾಕಲು ಯತ್ನ ನಡೆಸಿದ್ದಾನೆ.
ಈ ಎಲ್ಲಾ ಹೇಳಿಕೆಗಳಲ್ಲಿ ಆಧಾರ ರಹಿತವಾಗಿ ಕಲ್ಲಡ್ಕ ಪ್ರಭಾಕರ್ ಭಟ್ ಇಡೀ ಮುಸ್ಲಿಂ ಸಮುದಾಯದ ವಿರುದ್ಧ ಪ್ರಮುಖವಾಗಿ ಮಹಿಳೆಯರ ವಿರುದ್ಧ ದ್ವೇಷ ಭಾಷಣ ಮಾಡುತ್ತ ಜನರಲ್ಲಿ ಆತಂಕ ಸೃಷ್ಟಿಸುವ, ಗಲಭೆ ಸೃಷ್ಟಿಸುವ ಪ್ರಯತ್ನ ನಡೆಸುತ್ತಿದ್ದೂ ಅವರ ವಿರುದ್ಧ ಕೂಡಲೇ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿ ಕಾನೂನು ರೀತಿ ಕ್ರಮ ಕೈಗೊಳ್ಳಬೇಕೆಂದು ಅಗ್ರಹಿಸುತ್ತೇವೆ ಎಂದು ಮನವಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ಆಯೇಷಾ ಖಾನ್, ಕುರ್ಶಿದ, ಉಮ್ಮಿ ಸಲ್ಮಾ ಮತ್ತಿತರರು ಉಪಸ್ಥಿತರಿದ್ದರು.