ಸಾಹಸಸಿಂಹ ವಿಷ್ಣುವರ್ಧನ್ ಅವರ ಅಭಿಮಾನಿಗಳು ವಿಶ್ವದೆಲ್ಲಡೆಯಿದ್ದಾರೆ. ಇಂದು ವಿಷ್ಣುವರ್ಧನ್ ಅವರ 14ನೇ ವರ್ಷದ ಪುಣ್ಯಸ್ಮರಣೆ. ಅಭಿಮಾನಿಗಳು ವಿವಿಧೆಡೆ ರಸಮಂಜರಿ ಕಾರ್ಯಕ್ರಮ ಅನ್ನಸಂತರ್ಪಣೆ, ಆರೋಗ್ಯ ತಪಾಸಣೆ ಶಿಬಿರ ಸೇರಿದಂತೆ ಸಮಾಜಮುಖಿ ಕಾರ್ಯಕ್ರಮಗಳನ್ನು ಆಯೋಜಿಸಿದ್ದಾರೆ ಎಂದು ವಿಷ್ಣುವರ್ಧನ್ ಅವರ ಅಳಿಯ ಚಿತ್ರನಟ ಅನಿರುದ್ ತಿಳಿಸಿದರು.
ಮೈಸೂರು ತಾಲೂಕಿನ ಉದ್ಬೂರು ಗೇಟ್ ಬಳಿ ಇರುವ ವಿಷ್ಣುವರ್ಧನ್ ಸ್ಮಾರಕದಲ್ಲಿ ಸಾಹಸಸಿಂಹ ವಿಷ್ಣುವರ್ಧನ್ ಅವರ 14ನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ಜೀವಾಧಾರ ರಕ್ತನಿಧಿ ಕೇಂದ್ರದ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು.
ವಿಷ್ಣುಸ್ಮಾರಕದಲ್ಲಿ ಪ್ರತಿವಾರ ಲಯನ್ಸ್ ಜೀವಾಧಾರ ರಕ್ತನಿಧಿ ಕೇಂದ್ರದವರು ರಕ್ತದಾನ ಶಿಬಿರ ಮತ್ತು ರಸಮಂಜರಿ ಕಾರ್ಯಕ್ರಮ ಆಯೋಜಿಸುತ್ತಾ ಬಂದಿದ್ದು, ಶ್ಲಾಘನೀಯ ಕೆಲಸವಾಗಿದೆ. ಗ್ರಾಮೀಣ ಮತ್ತು ನಗರ ಪ್ರದೇಶ ಬಡಾವಣೆಗಳಲ್ಲಿ ವಿಷ್ಣು ಅಪ್ಪಾಜಿ ಅವರ ಭಾವಚಿತ್ರ ಹಾಕಿ ಸಮಾಜಮಖಿ ಕೆಲಸ ಮಾಡುತ್ತಿದ್ದಾರೆ. ಅವರ ಚಿತ್ರಗಳು ಕೌಟುಂಬಿಕ ಪ್ರಧಾನವಾಗಿದ್ದವು. ಸಮಾಜದಲ್ಲಿ ಶ್ರಮಜೀವಿಗಳಿಗೆ ಇಂದಿಗೂ ಪ್ರೇರಣೆಯಾಗಿದ್ದಾರೆ” ಎಂದರು.
“ಬೆಂಗಳೂರಿನಲ್ಲಿ ವಿಷ್ಣು ಸ್ಮಾರಕ ನಿರ್ಮಾಣಕ್ಕೆ ಅಭಿಮಾನಿಗಳು ಹೋರಾಟ ಮಾಡುತ್ತಿದ್ದು, ಬಾಲಣ್ಣ ಅವರ ಕುಟುಂಬಕ್ಕೆ ಮನವಿ ಮಾಡಿದ್ದು, 10 ಗುಂಟೆ ಜಾಗವನ್ನು ಕೇಳಿದ್ದೇವೆ. ಇದರ ಬಗ್ಗೆ ಸರ್ಕಾರದ ನಿರ್ಧಾರಗಳು ಬೇಗ ಸಮ್ಮತಿಸಿದರೆ ಕೋಟ್ಯಾಂತರ ಅಭಿಮಾನಿಗಳಿಗೆ ಖುಷಿಯಾಗುತ್ತದೆ” ಎಂದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಜಗತ್ತಿನಲ್ಲಿ ಮೂಢನಂಬಿಕೆ ಹೋಗಲಾಡಿಸಬೇಕು: ಸಚಿವ ಸತೀಶ್ ಜಾರಕಿಹೊಳಿ
ರಕ್ತದಾನ ಶಿಬಿರದಲ್ಲಿ 50ಕ್ಕೂ ಹೆಚ್ಚು ಮಂದಿ ಅಭಿಮಾನಿಗಳು ಸ್ವಯಂ ಪ್ರೇರಿತ ರಕ್ತದಾನ ಮಾಡಿದರು.
ಜೀವಾಧಾರ ರಕ್ತನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಕೆಪಿಸಿಸಿ ಸದಸ್ಯ ನಜರ್ಬಾದ್ ನಟರಾಜ್, ರೋಟರಿ ಕ್ಲಬ್ ಸೌತ್ ಈಸ್ಟ್ ಕಾರ್ಯದರ್ಶಿ ಎನ್ ಟಿ ಗಿರೀಶ್, ಅಜಯ್ ಶಾಸ್ತ್ರಿ, ಬೈರತಿ ಲಿಂಗರಾಜು, ವಿಷ್ಣುಸೇನಾ ಅಧ್ಯಕ್ಷ ಶ್ರೀಕಂಠೇಗೌಡ, ಮರಟಿ ಕ್ಯಾತನಹಳ್ಳಿ ಮಂಜು, ವರುಣ ಮಹದೇವ್, ಜಟ್ಟಿ ಹುಂಡಿಗೋಪಾಲ್, ರಶ್ಮಿ, ಪ್ರಭು, ಸುರೇಶ್ ಸೇರಿದಂತೆ ಇತರರು ಇದ್ದರು.