ಬೆಂಗಳೂರಿನಲ್ಲಿ ಅನ್ಯ ಭಾಷೆಯ ನಾಮಫಲಕಗಳಿಂದ ಕನ್ನಡ ನುಡಿ, ನಾಡು, ಸಂಸ್ಕೃತಿ ನಶಿಸಿಹೋಗುತ್ತಿರುವುದನ್ನು ತಡೆಯಲು ಕರವೇ ಮುಖಂಡರು ಮುಂದಾಗಿದ್ದರು. ಅವರನ್ನು ಪೊಲೀಸರು ಬಂಧಿಸಿರುವುದು ಅಕ್ಷಮ್ಯ. ಕೂಡಲೇ, ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದ್ದಾರೆ.
ಶಿವಮೊಗ್ಗದಲ್ಲಿ ಪ್ರತಿಭಟನೆ ನಡೆಸಿರುವ ಪ್ರತಿಭಟನಾಕಾರರು ಜಿಲ್ಲಾಧಿಕಾರಿಗೆ ಹಕ್ಕೊತ್ತಾಯ ಪತ್ರ ಸಲ್ಲಿಸಿದ್ದಾರೆ. ಪ್ರತಿಭಟನೆಯಲ್ಲಿ ಮಾತನಾಡಿದ ಮಂಜುನಾಥ್ ಎಸ್ ಕೋಟ್ಯಾನ್, “ಬಹುರಾಷ್ಟ್ರ ಕಂಪನಿಗಳು ಅನ್ಯ ಭಾಷೆ ವಲಸಿಗರ ಆಕ್ರಮಣದಿಂದ ಇಂದು ಕನ್ನಡ ನುಡಿ, ನಾಡು, ಸಂಸ್ಕೃತಿ ನಶಿಸಿಹೋಗುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ ಯಾವ ಅಧಿಕಾರಿಗಳು, ರಾಜಕಾರಣಿಗಳು ಕೂಡ ಯಾವುದೇ ಕ್ರಮ ಕೈಗೊಳ್ಳದೇ ಇರುವುದು ಖಂಡನೀಯ” ಎಂದರು.
“ನಾಡು, ನುಡಿ ಅದರ ಉಳಿವಿನ ಬಗ್ಗೆ ರಾಜಕಾರಣಿಗಳು ಮತ್ತು ಅಧಿಕಾರಿಗಳು ಭಾಷಣಕ್ಕೆ ಮಾತ್ರ ಸೀಮಿತವಾಗಿದ್ದಾರೆ. ವಲಸಿಗರೊಂದಿಗೆ ಶಾಮೀಲಾಗಿ ನಮ್ಮ ನಾಡು, ನುಡಿ, ಸಂಸ್ಕೃತಿಗಳ ಅಧೋಗತಿಗೆ ಅಧಿಕಾರಿಗಳೇ ಹೊಣೆಗಾರರು” ಎಂದರು.
“ಕನ್ನಡ ನಾಡಲ್ಲಿ ಎಲ್ಲ ಕಡೆ ಕನ್ನಡ ಭಾಷೆ, ಕನ್ನಡ ನಾಮಫಲಕದಲ್ಲಿ ಶೇ.60ರಷ್ಟು ಬಳಸಬೇಕು ಎಂದು ಕಾನೂನು ಇದೆ. ಇದನ್ನು ವ್ಯಾಪಾರಸ್ತರು, ಕೆಲವು ಅಧಿಕಾರಿಗಳು ಪಾಲಿಸದೇ ಕಾನೂನನ್ನು ಗಾಳಿಗೆ ತೂರಿದ್ದಾರೆ. ಇವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದೆ ಕನ್ನಡ ನಾಡು ನುಡಿ ಉಳಿಸಲು ಕಂಕಣ ತೊಟ್ಟಿ ಸನ್ಮಾನ್ಯ ಟಿ.ಎ. ನಾರಾಯಣಗೌಡರು ಮತ್ತು ಅವರ ಕಾರ್ಯಕರ್ತರವನ್ನು ಬಂಧಿಸಿರುವುದು ಎಷ್ಟು ಸರಿ” ಎಂದು ಪ್ರಶ್ನಿಸಿದರು.
“ಸರ್ಕಾರ ಈ ಕೂಡಲೇ ಎಲ್ಲ ನಾಮಫಲಕದಲ್ಲಿ ಕನ್ನಡ ಬಳಸುವುದು ಕಡ್ಡಾಯ ಮಾಡಬೇಕು. ಯಾರು ನಾಮಫಲಕದಲ್ಲಿ ಅನ್ಯ ಭಾಷೆಗೆ ಹೆಚ್ಚು ಒತ್ತು ಕೊಡುತ್ತಾರೋ ಅಂತಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಇಲ್ಲವೇ ಹೋರಾಟ ಹತ್ತಿಕ್ಕುವುದು ನಾಚಿಕೆಗೇಡಿನ ಸಂಗತಿ. ಅನವಶ್ಯಕವಾಗಿ ನಮ್ಮ ರಾಜ್ಯಾಧ್ಯಕ್ಷರನ್ನು ಮತ್ತು ಕಾರ್ಯಕರ್ತರವನ್ನು ಬಂಧಿಸಿರುವುದನ್ನು ಈ ಕೂಡಲೇ ಬೇಷರತ್ತಾಗಿ ಬಂಧಮುಕ್ತಗೊಳಿಸಬೇಕು. ಇಲ್ಲದಿದ್ದರೆ, ಮುಂದಿನ ದಿನಗಳಲ್ಲಿ ಸಂಘಟನೆ ವತಿಯಿಂದ ತೀವ್ರ ಹೋರಾಟ ಹಮ್ಮಿಕೊಳ್ಳಲಾಗುವುದು” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಗಂಗಾಧರ್ ಎಸ್, ರಂಗನಾಥ್ ಎಸ್, ಸತೀಶ್ ಮುಂತಾದವರು ಇದ್ದರು.