ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಸಮುದಾಯದವರು ರಾಜ್ಯದಲ್ಲಿ ಇನ್ನು ಮುಂದೆ 60 ವರ್ಷದ ಬದಲು 50 ವರ್ಷಕ್ಕೆ ಪಿಂಚಣಿಗೆ ಅರ್ಹರಾಗುತ್ತಾರೆ ಎಂದು ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ತಿಳಿಸಿದ್ದಾರೆ.
ಜೆಎಂಎಂ ಸರ್ಕಾರ ನಾಲ್ಕು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ರಾಂಚಿಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಹೇಮಂತ್ ಸೊರೇನ್ ಈ ಘೋಷಣೆ ಮಾಡಿದ್ದಾರೆ.
“ಸರ್ಕಾರವು ಆದಿವಾಸಿ, ದಲಿತ ಸಮುದಾಯದವರಿಗೆ 50 ವರ್ಷ ಪೂರ್ಣಗೊಂಡ ನಂತರ ಪಿಂಚಣಿ ವ್ಯವಸ್ಥೆ ಸೌಲಭ್ಯ ನೀಡಲು ನಿರ್ಧರಿಸಿದೆ. ಈ ಸಮುದಾಯದವರಲ್ಲಿ ಸಾವಿನ ಪ್ರಮಾಣ ಏರಿಕೆಯಾಗುತ್ತಿದ್ದು, 60 ವರ್ಷದ ನಂತರ ಉದ್ಯೋಗ ಪಡೆಯಲು ಸಾಧ್ಯವಾಗುತ್ತಿಲ್ಲ. ಈ ಸೌಲಭ್ಯವು ವಿಶೇಷವಾಗಿ ಅಳಿವಿನಂಚಿನಲ್ಲಿರುವ ದುರ್ಬಲ ಬುಡಕಟ್ಟು ಸಮುದಾಯದವರಿಗೆ ಅನುಕೂಲವಾಗುತ್ತದೆ” ಎಂದು ಜಾರ್ಖಂಡ್ ಮುಖ್ಯಮಂತ್ರಿ ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಬಾಲ ಗರ್ಭಿಣಿಯರ ಸಂಖ್ಯೆ ಹೆಚ್ಚಳ; ಜಿಲ್ಲಾ ಮಕ್ಕಳ ರಕ್ಷಣಾ ಘಟಕಗಳು ಏನು ಮಾಡುತ್ತಿವೆ?
“ಜಾರ್ಖಂಡ್ ರಾಜ್ಯ ರಚನೆಯಾಗಿ 20 ವರ್ಷ ಕಳೆದರೂ ಕೇವಲ 16 ಲಕ್ಷ ಮಂದಿ ಮಾತ್ರ ಪಿಂಚಣಿ ಸೌಲಭ್ಯ ಪಡೆಯುತ್ತಿದ್ದರು. ಆದಾಗ್ಯೂ, ನಮ್ಮ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಪಿಂಚಣಿದಾರರ ಸಂಖ್ಯೆ 36 ಲಕ್ಷಕ್ಕೆ ಏರಿಕೆಯಾಗಿದೆ” ಎಂದು ಸೊರೇನ್ ತಿಳಿಸಿದರು.
ಇದೇ ಸಂದರ್ಭದಲ್ಲಿ ಜಾರ್ಖಂಡ್ ಸಿಎಂ 4547 ಕೋಟಿ ರೂ. ಮೊತ್ತದ 343 ಯೋಜನೆಗಳಿಗೆ ಅಡಿಗಲ್ಲು ನೆರವೇರಿಸಿದರು.
ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ರಾಜ್ಯದಲ್ಲಿ ಯುವಕರಿಗೆ ಉದ್ಯೋಗ ನೀಡುವುದಾಗಿ ಹೇಳಿ ಪೊಳ್ಳು ಭರವಸೆ ನೀಡುತ್ತಿದೆ ಎಂದು ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಕಾರ್ಯಕ್ರಮದಲ್ಲಿ 7 ಸಾವಿರ ಮಂದಿಗೆ ಸರ್ಕಾರಿ ಉದ್ಯೋಗದ ನೇಮಕಾತಿ ಆದೇಶವನ್ನು ನೀಡಲಾಯಿತು. 45 ಸಾವಿರ ಖಾಲಿ ಉದ್ಯೋಗಗಳ ಭರ್ತಿ ಕೂಡ ಪ್ರಗತಿಯಲ್ಲಿದೆ ಎಂದು ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿ ತಿಳಿಸಿದರು.