2018ರ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ತಲಾ 17 ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದವು. ಅವರಲ್ಲಿ ಏಳು ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಒಬ್ಬರೂ ಗೆಲ್ಲಲಾಗಿಲ್ಲ. ಬಿಜೆಪಿ ಮುಸ್ಲಿಂ ಅಭ್ಯರ್ಥಿಗಳನ್ನೇ ಕಣಕ್ಕಿಳಿಸಲಿಲ್ಲ.
ಕರ್ನಾಟಕ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದೆ. ಪತ್ರಿಪಕ್ಷ ಕಾಂಗ್ರೆಸ್ ಮತ್ತು ಜೆಡಿಎಸ್ ಮುಸ್ಲಿಂ ಮತಗಳನ್ನು ಸೆಳೆಯಲು ಒಂದೇ ರೀತಿಯ ಕಸರತ್ತು ನಡೆಸುತ್ತಿವೆ. ಈ ಎರಡೂ ಪಕ್ಷಗಳು ಮಾತ್ರವಲ್ಲದೆ, ಎಸ್‌ಡಿಪಿಐ, ಎಐಎಂಐಎಂ ಹಾಗೂ ಎಎಪಿ ಕೂಡ ಮುಸ್ಲಿಂ ಮತಗಳನ್ನು ಬಾಚಲು ಯತ್ನಿಸುತ್ತಿವೆ. ಈ ಎಲ್ಲ ಪಕ್ಷಗಳ ಪೈಪೋಟಿಯು ಚುನಾವಣಾ ಫಲಿತಾಂಶದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆದರೆ, ಮುಸ್ಲಿಂ ಮತಗಳ ವಿಭಜನೆಯಂತೂ ಶತಸಿದ್ಧವೆಂದು ಹೇಳಲಾಗುತ್ತಿದೆ. ಈ ವಿಭಜನೆಯು ಬಿಜೆಪಿ ಗೆಲುವಿಗೂ ಕಾರಣವಾಗಬಹುದು ಎಂಬ ಅಂಶಗಳೂ ಇವೆ.
ರಾಜ್ಯದ ಮತದಾರರ ಪೈಕಿ ಶೇ.13ರಷ್ಟು ಮುಸ್ಲಿಂ ಮತದಾರರಿದ್ದಾರೆ. ಈ ಸಮುದಾಯವು ಸುಮಾರು 40 ಕ್ಷೇತ್ರಗಳಲ್ಲಿ ಶಾಸಕರನ್ನು ಆಯ್ಕೆ ಮಾಡುವಷ್ಟು ಪ್ರಾಬಲ್ಯ ಹೊಂದಿದೆ. ಅಲ್ಲದೆ, ಇನ್ನೂ 30 ಕ್ಷೇತ್ರಗಳಲ್ಲಿ ಹೆಚ್ಚಿನ ಪ್ರಮಾಣದ ಮತದಾರರಿದ್ದಾರೆ. ಈ ಹಿಂದೆ, ರಾಜ್ಯ ರಾಜಕೀಯದಲ್ಲಿ ಮುಸ್ಲಿಂ ಸಮುದಾಯದ ಬೆಂಬಲ ಬಹುತೇಕ ಕಾಂಗ್ರೆಸ್‌ಗೆ ಇತ್ತು. ಜೆಡಿಎಸ್ ಪ್ರವರ್ಧಮಾನಕ್ಕೆ ಬಂದ ಬಳಿಕ ಸಮುದಾಯದ ಮತಗಳು ವಿಭಜನೆಯಾಗಿವೆ. ಇತ್ತೀಚಿನ ವರ್ಷಗಳಲ್ಲಂತೂ, ಕಾಂಗ್ರೆಸ್, ಜೆಡಿಎಸ್ ಹೊರತಾಗಿ ಎಸ್‌ಡಿಪಿಐ ಮತ್ತು ಎಐಎಂಐಎಂ ಕೂಡ ಮುಸ್ಲಿಂ ಮತಗಳನ್ನು ಸೆಳೆಯಲು ಯತ್ನಿಸುತ್ತಿವೆ.
ಆದರೂ, ಮುಸ್ಲಿಂ ಪ್ರಾಬಲ್ಯದ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. 2018ರ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ತಲಾ 17 ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದವು. ಅವರಲ್ಲಿ ಏಳು ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಜೆಡಿಎಸ್‌ನಿಂದ ಒಬ್ಬರೂ ಗೆಲ್ಲಲಾಗಿಲ್ಲ. ಆ ಚುನಾವಣೆಯಲ್ಲಿ ಬಿಜೆಪಿ ಒಬ್ಬನೇ ಒಬ್ಬ ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕಿಳಿಸಿರಲಿಲ್ಲ.
ಮುಸ್ಲಿಮರ ಓಲೈಕೆಗೆ ಮೂರು ಪಕ್ಷಗಳ ಸರ್ಕಸ್
ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಅಂದು ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ 2015ರಲ್ಲಿ ಟಿಪ್ಪು ಸುಲ್ತಾನ್ ಜಯಂತಿಯನ್ನು ಜಾರಿಗೆ ತಂದರು. ಅದು ಮುಸ್ಲಿಮರ ಮತ ದ್ರುವೀಕರಣದ ಉದ್ದೇಶವನ್ನೂ ಒಳಗೊಂಡಿತ್ತು. ಇದೀಗ, ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮುಸ್ಲಿಮರ ಕಲ್ಯಾಣಕ್ಕಾಗಿ ಪ್ರತಿ ವರ್ಷ 10,000 ಕೋಟಿ ರೂಪಾಯಿ ವಿನಿಯೋಗಿಸಲಾಗುವುದು ಎಂದು ಸಿದ್ದರಾಮಯ್ಯ ಇತ್ತೀಚೆಗೆ ಘೋಷಿಸಿದ್ದಾರೆ. ಸದ್ಯ, ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ವಾರ್ಷಿಕ ಸುಮಾರು 3,000 ಕೋಟಿ ರೂಪಾಯಿ ಮೀಸಲಿಡಲಾಗುತ್ತಿದೆ. ಅಲ್ಲದೆ, 11 ಮಂದಿ ಮುಸಲ್ಮಾನರಿಗೆ ಕಾಂಗ್ರೆಸ್ ಟಿಕೆಟ್ ನೀಡಿದೆ. ಇನ್ನೂ ಹೆಚ್ಚಿನವರಿಗೆ ಟಿಕೆಟ್ ನೀಡಬೇಕೆಂದು ಮುಸ್ಲಿಂ ಮುಖಂಡರು ಒತ್ತಾಯಿಸುತ್ತಿದ್ದಾರೆ.
ಇನ್ನು, ಜೆಡಿಎಸ್ ಅಧಿಕಾರಕ್ಕೆ ಬಂದರೆ ಮುಸ್ಲಿಂ ನಾಯಕರೊಬ್ಬರನ್ನು ಮುಖ್ಯಮಂತ್ರಿ ಮಾಡುವುದಾಗಿ ಜೆಡಿಎಸ್ ನಾಯಕ, ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ. ಪಕ್ಷದಲ್ಲಿ ಈಗಾಗಲೇ ಹಿರಿಯ ಮುಸ್ಲಿಂ ನಾಯಕ ಸಿ.ಎಂ ಇಬ್ರಾಹಿಂ ರಾಜ್ಯಾಧ್ಯಕ್ಷರಾಗಿದ್ದಾರೆ. ಅಲ್ಲದೆ, ಆಡಳಿತಾರೂಢ ಬಿಜೆಪಿ ʻಕೋಮುವಾದಿʼ ಪಕ್ಷವೆಂದು ತೀವ್ರ ಪ್ರಚಾರವನ್ನೂ ನಡೆಸುತ್ತಿದ್ದಾರೆ.
ಬಿಜೆಪಿ ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕಿಳಿಸದಿದ್ದರೂ, ಆ ಸಮುದಾಯದ ಮತಗಳನ್ನು ಪಡೆಯಲು ಹಲವು ರೀತಿಯಲ್ಲಿ ತಂತ್ರವನ್ನು ಹೆಣೆಯುತ್ತಿದೆ. ಇಸ್ಲಾಂ ವಿರುದ್ಧ ತೀವ್ರ ದಾಳಿ, ವಾಗ್ದಾಳಿಗಳನ್ನು ನಡೆಸುತ್ತಲೇ, ಅವರ ಮತಗಳನ್ನು ಸೆಳೆಯುವ ಕಸರತ್ತನ್ನೂ ಮಾಡುತ್ತಿದೆ. ಇದೀಗ, ಬಿಜೆಪಿ ಕೂಡ ಮುಸ್ಲಿಮರನ್ನು ತಲುಪಲು ಹವಣಿಸುತ್ತಿದೆ. ಧಾರ್ಮಿಕ ಅಲ್ಪಸಂಖ್ಯಾತ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವಂತೆ ಬಿಜೆಪಿ ನಾಯಕರಿಗೆ ಪ್ರಧಾನಿ ಮೋದಿ ಕರೆ ಕೊಟ್ಟಿದ್ದಾರೆ.
ಕರಾವಳಿ ಮತ್ತು ಕಲ್ಯಾಣ ಕರ್ನಾಟಕ
ಕರಾವಳಿ ಪ್ರದೇಶದಲ್ಲಿ ಮುಸ್ಲಿಂ ಮತದಾರರ ಸಂಖ್ಯೆ ಅಧಿಕ ಪ್ರಮಾಣದಲ್ಲಿದೆ. ಅದೇ ರೀತಿಯಲ್ಲಿ ಕರ್ನಾಟಕದ ಹಲವು ಜಿಲ್ಲೆಗಳಲ್ಲಿಯೂ ಈ ಸಮುದಾಯದ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಈ ಎರಡೂ ಪ್ರದೇಶಗಳಲ್ಲಿ ಹಲವಾರು ಸಣ್ಣ ಪ್ರಾದೇಶಿಕ ಪಕ್ಷಗಳು ಮುಸ್ಲಿಂ ಮತಗಳಿಗಾಗಿ ಪೈಪೋಟಿ ನಡೆಸುತ್ತಿವೆ. ಇತ್ತೀಚೆಗಷ್ಟೇ ಹುಟ್ಟಿದ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ – ಕರ್ನಾಟಕ (ಕೆಆರ್‌ಪಿಪಿಕೆ)ದ ನಾಯಕ, ಮಾಜಿ ಸಚಿವ, ಗಣಿ ಉದ್ಯಮಿ ಜನಾರ್ದನ ರೆಡ್ಡಿ ಅವರು ಅಜ್ಮೀರ್ ದರ್ಗಾಕ್ಕೆ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಬಳ್ಳಾರಿ, ವಿಜಯನಗರ, ರಾಯಚೂರು ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಾಗಿ ಅವರು ಭರವಸೆಯನ್ನೂ ನೀಡಿದ್ದಾರೆ ಎನ್ನಲಾಗಿದೆ.
ಈ ಸುದ್ದಿ ಓದಿದ್ದೀರಾ?: ಕರ್ನಾಟಕ ಚುನಾವಣೆ | ರಾಜಕೀಯ ಪಕ್ಷಗಳ ಪ್ರಚಾರಕ್ಕೆ ಐತಿಹಾಸಿಕ ನಾಯಕರೇ ದಾಳ
ಉಳಿದಂತೆ, ಕರಾವಳಿ ಮತ್ತು ಮಲೆನಾಡು ಪ್ರದೇಶಗಳಲ್ಲಿ ಓವೈಸಿ ಅವರ ಎಐಎಂಐಎಂ ಮತ್ತು ಎಸ್‌ಡಿಪಿಐ ಹೆಚ್ಚಾಗಿ ಅಲ್ಪಸಂಖ್ಯಾತ ಸಮುದಾಯದ ಮತ ಬ್ಯಾಂಕ್ ಪಕ್ಷಗಳಾಗಿ ಕಾಣಿಸಿಕೊಳ್ಳುತ್ತಿವೆ. ಆ ಸಮುದಾಯದ ಮತಗಳನ್ನು ಸೆಳೆಯಲು ಕಸರತ್ತನ್ನೂ ನಡೆಸುತ್ತಿವೆ. ಈ ಭಾಗಗಳಲ್ಲಿ ಆಮ್ ಆದ್ಮಿ ಪಕ್ಷ (ಎಎಪಿ) ಮತ್ತು ಎಡಪಕ್ಷಗಳೂ ಚುನಾವಣಾ ಕಣಕ್ಕಿಳಿದಿವೆ. ಅವುಗಳೂ ಕೂಡ ಮುಸ್ಲಿಂ ಮತಗಳ ಮೇಲೆ ಪ್ರಭಾವ ಬೀರಲಿವೆ ಎಂದು ರಾಜಕೀಯ ವಿಶ್ಲೇಷಕರು ಹೇಳುತ್ತಿದ್ದಾರೆ.
ಬಿಜೆಪಿ ಬಿ-ಟೀಮ್‌ಗಳೆಂಬ ಆರೋಪ
ಇದೆಲ್ಲದರ ನಡುವೆ, ಎಐಎಂಐಎಂ ಎಎಪಿ ಮತ್ತು ಎಸ್‌ಡಿಪಿಐಗಳು ಬಿಜೆಪಿಯ ಬಿ ಟೀಮ್‌ಗಳು ಎಂಬ ಆರೋಪಗಳೂ ಇವೆ. ಕಳೆದ ಚುನಾವಣೆಯಲ್ಲಿ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಎಸ್‌ಡಿಪಿಐ ಅಭ್ಯರ್ಥಿ ಸ್ಪರ್ಧೆಯು ಅಲ್ಲಿನ ಮತಗಳನ್ನು ವಿಭಜನೆ ಮಾಡಿತು. ಪರಿಣಾಮ ಕಾಂಗ್ರೆಸ್ ಸೇಲುಂಡಿತು ಮತ್ತು ಬಿಜೆಪಿ ಗೆಲುವು ಸಾಧಿಸಲು ಸಾಧ್ಯವಾಯಿತು ಎಂದುಹೇಳಲಾಗಿದೆ.
ಅದೇ ರೀತಿಯಲ್ಲಿ, ಮೈಸೂರಿನಲ್ಲಿ ತನ್ವೀರ್ ಸೇಠ್ ಅವರು ಪ್ರತಿನಿಧಿಸುತ್ತಿರುವ ನರಸಿಂಹರಾಜ ಕ್ಷೇತ್ರದಲ್ಲಿಯೂ ಎಸ್‌ಡಿಪಿಐ ಸ್ಪರ್ಧಿಸಿತ್ತು. ಪ್ರಬಲ ಪೈಪೋಟಿವೊಡ್ಡಿತ್ತು. ಸಕಲೇಶಪುರದಲ್ಲಿಯೂ ಮುಸ್ಲಿಮರ ಮತ ನಿರ್ಣಾಯಕವಾಗಿದೆ. ಅಲ್ಲಿ, ಸದ್ಯ ಬಿಜೆಪಿಗೆ ನೆಲೆಯಿಲ್ಲ. ಕಾಂಗ್ರೆಸ್ ಮತ್ತು ಜೆಡಿಎಸ್ ಹಗ್ಗಜಗ್ಗಾಟ ನಡೆಸುತ್ತಿವೆ.
ಮುಸ್ಲಿ ಮತಗಳು ಹೆಚ್ಚಿನ ಸಂಖ್ಯೆಯಲ್ಲಿರುವ ಕ್ಷೇತ್ರಗಳಲ್ಲಿ ಜೆಡಿಎಸ್ ಕೂಡ ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡು ಕಣಕ್ಕಿಳಿಯುತ್ತದೆ. ಕಾಂಗ್ರೆಸ್ ಅಭ್ಯರ್ಥಿಗಳ ವಿರುದ್ಧ ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ, ಬಿಜೆಪಿ ಗೆಲುವಿಗೆ ಸಹಾಯ ಮಾಡುತ್ತದೆ ಎಂಬ ಆರೋಪಗಳೂ ಇವೆ. ಇದಕ್ಕೆ ಉದಾಹರಣೆ ಎಂಬಂತೆ, ಇಂದಿನ ಚುನಾವಣೆಗೆ ತನಗೆ ನೆಲೆಯೇ ಇಲ್ಲದ ರಾಯಚೂರು ನಗರ ಕ್ಷೇತ್ರದಲ್ಲಿ ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕಿಸಿದೆ.
ಕೆಆರ್‌ಪಿಪಿಕೆ, ಎಐಎಂಐಎಂ, ಎಸ್‌ಡಿಪಿಐ, ಎಎಪಿಯಂತಹ ಪಕ್ಷಗಳು ಆಡಳಿತಾರೂಢ ಬಿಜೆಪಿಯನ್ನು ಗುರಿಯಾಗಿಸಿಕೊಂಡು ಕೋಮುವಾದಿ ಸಮಸ್ಯೆಗಳ ಬಗ್ಗೆ ಮಾತನಾಡುತ್ತಿವೆ. ಉತ್ತರ ಪ್ರದೇಶ, ಗುಜರಾತ್ ಮತ್ತು ಉತ್ತರ ಭಾರತದ ಇತರ ರಾಜ್ಯಗಳ ಚುನಾವಣೆಗಳಲ್ಲಿ ಕೆಲವು ಪಕ್ಷಗಳು ಕಣಕ್ಕಿಳಿದಿದ್ದವು. ಅಲ್ಲೆಲ್ಲ, ಹೆಚ್ಚಿನ ಪ್ರಮಾಣದಲ್ಲಿ ಮತ ವಿಭಜನೆಯನ್ನೂ ಮಾಡಿದ್ದವು. ಅದೇ ರೀತಿಯಲ್ಲಿ ಕರ್ನಾಟಕದಲ್ಲಿಯೂ ಮತ ವಿಭಜನೆಯಾಗುತ್ತದೆಯೇ ಎಂಬುದು ಸದ್ಯ ಅಸ್ಪಷ್ಟವಾಗಿದೆ.
ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಆಕಾಂಕ್ಷಿಗಳಿಗೆ ಟಿಕೆಟ್‌ಗಳನ್ನು ಕೊಡಬೇಕು ಎನ್ನುವುದು ಮುಸ್ಲಿಂ ಸಮುದಾಯದ ಬೇಡಿಕೆ. ಆದರೆ, ಯಾವುದೇ ಪಕ್ಷಗಳು ಧೈರ್ಯ ಮಾಡುತ್ತಿಲ್ಲ. ಇದಕ್ಕೆ ಪಕ್ಷಗಳು ಹೇಳುವ ಕಾರಣ ಟಿಕೆಟ್ ಕೊಟ್ಟರೂ ನೀವು ಗೆಲ್ಲುವುದಿಲ್ಲ ಎನ್ನುವುದು. ಹಾಗಾದರೆ ಲಿಂಗಾಯತರು ಗೆಲ್ತಾರ? ಬಿಜೆಪಿ ಬಿಟ್ಟು ಬಿಡಿ, ಕಾಂಗ್ರೆಸ್‌ನವರು ಲಿಂಗಾಯತರಿಗೆ ಅಧಿಕ ಟಿಕೆಟ್ ಕೊಡುತ್ತಿದ್ದಾರೆ, ಅವರಲ್ಲಿ ಎಷ್ಟು ಜನ ಗೆಲ್ಲುತ್ತಾರೆ ಎಂದು ಸಮುದಾಯದ ಮುಖಂಡರು ಪ್ರಶ್ನಿಸುತ್ತಿದ್ದಾರೆ.