ಮರಗಳ್ಳತನ ಪ್ರಕರಣದ ಆರೋಪ ಎದುರಿಸುತ್ತಿರುವ ಮೈಸೂರು-ಕೊಡಗು ಬಿಜೆಪಿ ಸಂಸದ ಪ್ರತಾಪ್ ಸಿಂಹ ಅವರ ಸಹೋದರ ವಿಕ್ರಂ ಸಿಂಹನನ್ನು ಅರಣ್ಯಾಧಿಕಾರಿಗಳು ಬಂಧಿಸಿರುವುದಾಗಿ ವರದಿಯಾಗಿದೆ.
ಹಾಸನ ಜಿಲ್ಲೆಯ ನಂದಗೋಡನಹಳ್ಳಿಯಲ್ಲಿ ತಾವು ಲೀಸ್ಗೆ ಪಡೆದಿದ್ದ ಜಮೀನಿನಲ್ಲಿ 126 ಮರಗಳನ್ನು ಅಕ್ರಮವಾಗಿ ಕಡಿದು ಅವುಗಳನ್ನು ಸಾಗಾಣಿಕೆ ಮಾಡಿರುವ ಆರೋಪ ಎದುರಿಸುತ್ತಿರುವ ವಿಕ್ರಂ ಸಿಂಹ ಅವರನ್ನು ಅರಣ್ಯಾಧಿಕಾರಿಗಳು ವಶಕ್ಕೆ ಪಡೆದಿದ್ದು, ಆನಂತರ ಅವರನ್ನು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ. ಆದರೆ ಈ ಬಗ್ಗೆ ಇನ್ನಷ್ಟೇ ಅರಣ್ಯ ಇಲಾಖೆಯ ಅಧಿಕಾರಿಗಳು ಅಧಿಕೃತ ಮಾಹಿತಿ ನೀಡಬೇಕಿದೆ.
ಅಕ್ರಮವಾಗಿ ಕಡಿದಿರುವ ಆರೋಪದ ಮೇರೆಗೆ ಅವರ ವಿರುದ್ಧ ಅರಣ್ಯಾಧಿಕಾರಿಗಳು ಎಫ್ಐಆರ್ ದಾಖಲಿಸಿದ್ದರು. ಈ ಎಫ್ಐಆರ್ ಆಧರಿಸಿ ಅವರನ್ನು ವಶಕ್ಕೆ ಪಡೆಯಲು ವಿಕ್ರಂ ಅವರಿಗಾಗಿ ಅಧಿಕಾರಿಗಳು ಹುಡುಕಾಟ ನಡೆಸುತ್ತಿದ್ದರು.
ಆದರೆ, ವಿಕ್ರಂ ಅವರು ತಲೆಮರೆಸಿಕೊಂಡಿದ್ದಾರೆ ಎಂಬ ಮಾಹಿತಿಯ ಹಿನ್ನೆಲೆಯಲ್ಲಿ ಅವರಿಗಾಗಿ ಅರಣ್ಯಾಧಿಕಾರಿಗಳು ಹುಡುಕಾಟ ನಡೆಸುತ್ತಿದ್ದರು. ಈ ನಡುವೆ ಬೆಂಗಳೂರಿನಲ್ಲಿ ಇರುವ ಮಾಹಿತಿ ಪಡೆದ ಅಧಿಕಾರಿಗಳು, ಅವರನ್ನು ವಶಕ್ಕೆ ಪಡೆದಿದ್ದಾರೆ. ಬೆಂಗಳೂರಿನಲ್ಲೇ ಇರುವ ಜಾರುಬಂಡೆ ಕಾವಲ್ನಲ್ಲಿರುವ ಅರಣ್ಯ ಕೇಂದ್ರದಲ್ಲಿ ವಿಚಾರಣೆಗಾಗಿ ಕರೆದೊಯ್ಯಲಾಗಿತ್ತು. ಆನಂತರ ಅವರನ್ನು ಬಂಧಿಸಲಾಗಿದೆ ಎಂದು ಹೇಳಲಾಗಿದೆ. ಸದ್ಯ ಅವರನ್ನು ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಅರಣ್ಯ ಕೇಂದ್ರದಲ್ಲಿ ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ ಎಂದು ವರದಿಯಾಗಿದೆ.
‘ಚುನಾವಣೆ ಹತ್ತಿರ ಬರುತ್ತಿರುವುದರಿಂದ ನನ್ನ ಅಣ್ಣನ ಟಾರ್ಗೆಟ್’ ಎಂದಿದ್ದ ವಿಕ್ರಂ ಸಿಂಹ
ಈ ಬೆಳವಣಿಗೆಯ ನಡುವೆ ಇತ್ತೀಚೆಗೆ ಹಾಸನದಲ್ಲಿ ಮಾತನಾಡಿದ ವಿಕ್ರಂ ಸಿಂಹ, “ಒಂದು ತಿಂಗಳಿನಿಂದ ಏನೆಲ್ಲಾ ನಡೆಯುತ್ತಿದೆ ಎಂಬುದನ್ನು ಗಮನಿಸುತ್ತೀದ್ದೀರಾ. ಚುನಾವಣೆ ಹತ್ತಿರ ಬರುತ್ತಿರುವುದರಿಂದ ಈ ಮೂಲಕ ನನ್ನ ಅಣ್ಣನನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ಇದೆಲ್ಲವೂ ರಾಜಕೀಯ ಪ್ರೇರಿತವಾದದ್ದು. ನಾನು ಶುಂಠಿ ಬೆಳೆಯಲು ಜುಲೈ 24ರಿಂದ ಆ ಭೂಮಿಯನ್ನು ಒಂದು ವರ್ಷಕ್ಕೆ ಅಗ್ರಿಮೆಂಟ್ ಮಾಡಿಕೊಂಡಿದ್ದೇನೆ. ಆದರೆ, ಮರಗಳನ್ನು ಕಡಿದಿರುವುದು ನನಗೆ ಗೊತ್ತಿಲ್ಲ. ಅದರ ಹಿಂದೆ ನನ್ನ ಕೈವಾಡವಿಲ್ಲ. ವಿಚಾರವೇ ನನಗೆ ಗೊತ್ತಿಲ್ಲ” ಎಂದಿದ್ದರು.
ಏನಿದು ಪ್ರಕರಣ?
ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ನಂದಗೋಡನಹಳ್ಳಿ ಎಂಬ ಹಳ್ಳಿಯಲ್ಲಿರುವ ಸರ್ವೆ ನಂಬರ್ 16ರಲ್ಲಿ ನೂರಾರು ಮರಗಳನ್ನು ಕಡಿಯಲಾಗಿತ್ತು. ಅರಣ್ಯ ಇಲಾಖೆಯ ಶೆಡ್ಯೂಲ್ಡ್ ಪಟ್ಟಿಯಲ್ಲಿರುವ ಪ್ರಮುಖ ಮರಗಳನ್ನು ಕಡಿಯಲಾಗಿದೆ. ಅಂದರೆ ಈ ಮರಗಳನ್ನು ಅರಣ್ಯ ಇಲಾಖೆಯ ಅನುಮತಿ ಇಲ್ಲದೆ ಕಡಿಯಲು ಹಾಗೂ ಸಾಗಾಟ ಮಾಡಲು ಅವಕಾಶವಿಲ್ಲ. ಅಂಥದ್ದರಲ್ಲಿ ಸುಮಾರು 12 ಎಕರೆ ಪ್ರದೇಶದಲ್ಲಿ ಕಡಿದು ಹಾಕಿದ್ದು, ಸಾಗಾಟಕ್ಕೆ ರಾಶಿ ಹಾಕಲಾಗಿತ್ತು.
ಇದನ್ನು ಓದಿದ್ದೀರಾ? ಮತ್ತೆ ಹೊಸ ವಿವಾದದಲ್ಲಿ ಸಿಲುಕಿದ ಸಂಸದ ಪ್ರತಾಪ್ ಸಿಂಹ: ಸಹೋದರನ ವಿರುದ್ಧ ಮರಗಳ್ಳತನ ಆರೋಪ
ಈ ಬಗ್ಗೆ ಮಾಹಿತಿ ಅರಿತ ದಕ್ಷ ಅಧಿಕಾರಿಯಾದ ಬೇಲೂರು ತಹಶೀಲ್ದಾರ್ ಮಮತಾ ಅವರು ಸ್ಥಳಕ್ಕೆ ಡಿ.16ರಂದು ಭೇಟಿ ನೀಡಿ ಪರಿಶೀಲಿಸಿದಾಗ ಬೆಳಕಿಗೆ ಬಂದಿದೆ. ಈ ಬಗ್ಗೆ ಪ್ರಕರಣ ಕೂಡ ದಾಖಲಿಸಿದ್ದರು. ಅಲ್ಲದೇ, ಈ ಬಗ್ಗೆ ಕಾಂಗ್ರೆಸ್ ಐಟಿ ಸೆಲ್ ವಿಡಿಯೋ ಪೋಸ್ಟ್ ಮಾಡಿದ್ದ ಬಳಿಕ ಇದು ರಾಜ್ಯಾದ್ಯಂತ ಸುದ್ದಿಯಾಗಿತ್ತು.
ಅಣ್ಣ @mepratap ಸಂಸತ್ ದಾಳಿಕೋರರಿಗೆ ಪಾಸ್ ನೀಡುವ ಕೆಲಸದಲ್ಲಿದ್ದರೆ ತಮ್ಮ ವಿಕ್ರಮ್ ಸಿಂಹ ಸಿನಿಮೀಯ ಮಾದರಿಯಲ್ಲಿ ಮರಗಳ್ಳತನದಲ್ಲಿ ತೊಡಗಿದ್ದಾನೆ.
ಸಂಸದ ಪ್ರತಾಪ್ ಸಿಂಹನ ಸಹೋದರ ವಿಕ್ರಮ್ ಸಿಂಹ ಹಾಸನ ಜಿಲ್ಲೆಯ ಬೇಲೂರು ತಾಲೂಕಿನಲ್ಲಿ ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಮರಗಳನ್ನು ಕಡಿದು ಸಾಗಾಟ ನಡೆಸಿರುವುದು ದಕ್ಷ ಅಧಿಕಾರಿಯಾದ ತಹಸೀಲ್ದಾರ್… pic.twitter.com/5m5ZYZrMDl
— Karnataka Congress (@INCKarnataka) December 23, 2023
ಸಂಸದ ಪ್ರತಾಪ್ ಸಿಂಹ ಸಹೋದರ ವಿಕ್ರಮ್ ಸಿಂಹ, ಶುಂಠಿ ಬೆಳೆಯುವ ಉದ್ದೇಶಕ್ಕೆ ಜಯಮ್ಮ ಎಂಬುವವರೊಂದಿಗೆ ನಾಲ್ಕು ಎಕರೆಗಳ ಪ್ರದೇಶಕ್ಕೆ ಡಿ.11ರಂದು ಒಪ್ಪಂದ ಮಾಡಿಕೊಂಡಿದ್ದರು. ಡಿ.14ರಂದು ಒಪ್ಪಂದ ಮಾಡಿಕೊಂಡಿದ್ದ ಪ್ರದೇಶದಲ್ಲಿ, ಅರಣ್ಯ ಇಲಾಖೆಯ ಅನುಮತಿ ಇಲ್ಲದೆಯೇ ಅಕ್ರಮವಾಗಿ ಮರಗಳನ್ನು ಕಡಿದು ಹಾಕಲಾಗಿತ್ತು. ನಂಬಿ, ಹೊನ್ನೆ, ಹಲಸು ಸೇರಿದಂತೆ ನೂರಾರು ಅಮೂಲ್ಯವಾದ ಮರಗಳನ್ನು ಕಡಿದು ಹಾಕಲಾಗಿದ್ದು, ಸಾಗಾಟಕ್ಕೆ ಯತ್ನಿಸಲಾಗಿತ್ತು.
ಈ ಆರೋಪ ಒಂದು ಕಡೆಯಾದರೆ, ಇನ್ನೊಂದು ಗಂಭೀರ ಆರೋಪ ಕೂಡ ಇದರಲ್ಲಿ ಕೇಳಿಬಂದಿದೆ. ಒಟ್ಟು 12 ಎಕರೆ ಪ್ರದೇಶದಲ್ಲಿ ಮರಗಳನ್ನು ಕಡಿಯಲಾಗಿತ್ತು. ಇದರಲ್ಲಿ ನಾಲ್ಕೂವರೆ ಎಕರೆ ಪ್ರದೇಶವು ಸರ್ಕಾರಿ ಗೋಮಾಳ ಕೂಡ ಒಳಗೊಂಡಿದ್ದು, ಅದರಲ್ಲಿ ಇದ್ದಂತಹಾ ಮರಗಳನ್ನು ಕೂಡ ಕಡಿದು ಹಾಕಲಾಗಿದೆ ಎಂಬ ಅಂಶ ಈ ಘಟನೆಯಿಂದ ಬೆಳಕಿಗೆ ಬಂದಿತ್ತು.
ಈ ನಡುವೆ ಅರಣ್ಯ ಇಲಾಖೆಯವರು ಕೆಲವೊಂದು ಎಫ್ಐಆರ್ಗಳನ್ನು ದಾಖಲಿಸಿಕೊಂಡಿದ್ದಾರೆ. ಆದರೆ ಶುಂಠಿ ಬೆಳೆಯುವ ಉದ್ದೇಶಕ್ಕೆ ಒಪ್ಪಂದ ಮಾಡಿಕೊಂಡಿದ್ದ ಸಂಸದ ಪ್ರತಾಪ್ ಸಿಂಹ ಸಹೋದರ ವಿಕ್ರಮ್ ಸಿಂಹ ಅವರ ಹೆಸರನ್ನು ಉಲ್ಲೇಖಿಸಿಲ್ಲ ಎಂಬ ಗಂಭೀರ ಆರೋಪ ಸ್ಥಳೀಯ ಅರಣ್ಯಾಧಿಕಾರಿಗಳ ಮೇಲೆ ಕೇಳಿಬಂದಿತ್ತು.