ಕರ್ತವ್ಯ ಲೋಪ ಹಾಗೂ ಸಾರ್ವಜನಿಕರ ದೂರು ಆಧರಿಸಿ ತುಮಕೂರಿನ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಾಧಿಕಾರಿ ಶಿವಕುಮಾರ್ ಕೆ ಅವರನ್ನು ಅಮಾನತುಗೊಳಿಸಲಾಗಿದೆ. ನಿಗಮದ ವಿಭಾಗಿಯ ನಿಯಂತ್ರಣಾಧಿಕಾರಿ ಕೆ ಚಂದ್ರಶೇಖರ್ ಅವರು ಅಮಾನತು ಆದೇಶ ಹೊರಡಿಸಿದ್ದಾರೆ.
ನಿಲ್ದಾಣಾಧಿಕಾರಿ ಶಿವಕುಮಾರ್ ವಿರುದ್ಧ ಹಲವು ಆರೋಪಿಗಳು ಕೇಳಿಬಂದಿದ್ದವು. ತಮ್ಮೊಂದಿಗೆ ಕೆಲಸ ಮಾಡುವ ಕೆಳ ಹಂತದ ಸಿಬ್ಬಂದಿಗೆ ಕಿರುಕುಳ, ಲಂಚಕ್ಕೆ ಬೇಡಿಕೆ ಸೇರಿದಂತೆ ಕರ್ತವ್ಯ ಲೋಪಕ್ಕೆ ಸಂಬಂಧಿಸಿದಂತೆ ಹಲವು ಆರೋಪಗಳು ಬಂದಿದ್ದವು. ಆದರೆ, ಅವರ ವಿರುದ್ಧ ಈವರೆಗೆ ಕ್ರಮ ಕೈಗೊಂಡಿರಲಿಲ್ಲ ಎಂದು ಹೇಳಲಾಗಿದೆ.
ಇತ್ತೀಚೆಗೆ ಅವರ ನಡವಳಿಕೆಯನ್ನು ವಿಡಿಯೋ ರೆಕಾರ್ಡ್ ಮಾಡಿ, ದಾಖಲೆ ಸಮೇತವಾಗಿ ದೂರು ಸಲ್ಲಿಕೆಯಾಗಿತ್ತು. ಈ ಹಿನ್ನೆಲೆಯಲ್ಲಿ ಅವರನ್ನು ಅಮಾನತು ಮಾಡಲಾಗಿದೆ ಎಂದು ತಿಳಿದುಬಂದಿದೆ.
“ಕರ್ತವ್ಯ ಲೋಪ ಹಾಗೂ ಸಾರ್ವಜನಿಕರ ದೂರು ಆಧರಿಸಿ ತುಮಕೂರು ನಿಲ್ದಾಣಾಧಿಕಾರಿ ಶಿವಕುಮಾರ್ ಕೆ. ಅವರನ್ನು ಅಮಾನತು ಮಾಡಲಾಗಿದೆ” ಎಂದು ನಿಗಮದ ವಿಭಾಗೀಯ ನಿಯಂತ್ರಣಾಧಿಕಾರಿ ಕೆ ಚಂದ್ರಶೇಖರ್ ತಿಳಿಸಿದ್ದಾರೆ.