ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡರು ಮತ್ತು ಕರವೇ ಕಾರ್ಯಕರ್ತರನ್ನು ಕೂಡಲೇ ಬಿಡುಗಡೆಗೆ ಆಗ್ರಹಿಸಿ ಜಿಲ್ಲಾ ಕರವೇ ಘಟಕದ ಪದಾಧಿಕಾರಿಗಳು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರಿಗೆ ಬೀದರ್ ನಲ್ಲಿ ಹಕ್ಕೊತ್ತಾಯ ಪತ್ರ ಸಲ್ಲಿಸಿದರು.
ಕರವೇ ಜಿಲ್ಲಾಧ್ಯಕ್ಷ ಸೋಮನಾಥ ಮುಧೋಳಕರ್ ಮಾತನಾಡಿ, “ಕರವೇ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡ ಅವರು ಕಳೆದ ಮೂರು ತಿಂಗಳಿಂದ ಸತತವಾಗಿ ಬೆಂಗಳೂರು ನಗರ ಸೇರಿದಂತೆ ರಾಜ್ಯದ ಎಲ್ಲಾ ಕಡೆ ಅಂಗಡಿ ಮುಂಗಟ್ಟು ಸೇರಿದಂತೆ ಎಲ್ಲಾ ನಾಮಫಲಕಗಳಲ್ಲಿ ಕಡ್ಡಾಯವಾಗಿ ಶೇ.60% ರಷ್ಟು ಕನ್ನಡ ಬಳಸುವಂತೆ ಡಿಸೆಂಬರ್ 27 ರಂದು ಬೆಂಗಳೂರಿನಲ್ಲಿ ನಡೆದ ಪ್ರತಿಭಟನೆ ನಡೆಸಿದರು. ಈ ವೇಳೆ ರಾಜ್ಯಾಧ್ಯಕ್ಷ ಮತ್ತು ಕಾರ್ಯಕರ್ತರ ಮೇಲೆ ಸುಳ್ಳು ಪ್ರಕರಣ ದಾಖಲಿಸಿ, ಜೈಲಿಗೆ ಕಳಿಸಿರುವುದು ಖಂಡನೀಯ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕರವೇ ಕಳೆದ 25 ವರ್ಷಗಳಿಂದ ನಾಡು, ನುಡಿ, ಜಲ, ಸಂಸ್ಕೃತಿ, ಪರಂಪರೆಗಳಿಗೆ ಧಕ್ಕೆ ಬಂದಾಗ ನಾಡಿನಾದ್ಯಂತ ತನ್ನದೇ ತತ್ವ ಸಿದ್ಧಾಂತಗಳ ಮೂಲಕ ಪ್ರತಿಭಟಿಸಿ ರಾಜ್ಯ ಮತ್ತು ಕೇಂದ್ರ ಸರ್ಕಾರದ ಗಮನ ಸೆಳೆಯುತ್ತಿದೆ. ಇದೀಗ ಕನ್ನಡಕ್ಕಾಗಿ ಪ್ರತಿಭಟನೆ ನಡೆಸಿದ ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಮತ್ತು ಕಾರ್ಯಕರ್ತರನ್ನು ಬಂಧಿಸಲಾಗಿದೆ. ಕೂಡಲೇ ಅವರನ್ನು ಬಿಡುಗಡೆಗೊಳಿಸಲು ವಿಶೇಷ ಕಾಳಜಿವಹಿಸಿ ಮುಖ್ಯಮಂತ್ರಿಗಳ ಮೇಲೆ ಒತ್ತಡ ಹೇರಬೇಕೆಂದು ಕರವೇ ಮುಖಂಡರು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಜ.7ರಂದು ಬಸವಕಲ್ಯಾಣದಲ್ಲಿ ಬೃಹತ್ ಸಮಾನತಾ ಸಮಾವೇಶ
ಈ ಸಂದರ್ಭದಲ್ಲಿ ಕರವೇ ಬೀದರ್ ತಾಲೂಕಾ ಯುವ ಘಟಕ ಅಧ್ಯಕ್ಷ ವಿನಾಯಕರೆಡ್ಡಿ ಬುಧೇರಾ, ಔರಾದ ತಾಲೂಕಾಧ್ಯಕ್ಷ ಅನೀಲ ಬೇಲೂರೆ ಸೇರಿದಂತೆ ಪ್ರಮುಖರಾದ ಉದಯಕುಮಾರ ಅಷ್ಟೂರೆ, ಸತೀಶ ಫುಲಾರಿ, ಮಹೇಶ ಸ್ವಾಮಿ, ಸೋಮಶೇಖರ್ ಸಜ್ಜನ, ವಿವೇಕ ನಿರ್ಮಳೆ, ದತ್ತಾತ್ರಿ ಅಲ್ಲಮಕೇರೆ, ನವೀನ ಬುಧೇರಾ, ಅಮಿತ ಶಿವಪೂಜೆ ಇದ್ದರು.