ಸರ್ಕಾರಕ್ಕೆ ಅತಿಥಿ ಉಪನ್ಯಾಸಕರ ಸೇವೆ ತಾತ್ಕಾಲಿಕ ಉಪಾಯ. ಸರಕಾರ, ಸದ್ಯದ ಸಮಸ್ಯೆಯಿಂದ ಹೊರಬೇಕಾದರೆ, ಅತಿಥಿ ಉಪನ್ಯಾಸಕರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಾಗಿದೆ ಹಾಗೂ 2021ರ ನೇಮಕಾತಿಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ತುರ್ತಾಗಿ ಆದೇಶ ಪ್ರತಿ ನೀಡಿ, ಆ ಮೂಲಕ ಪದವಿ ಕಾಲೇಜುಗಳ ವಿದ್ಯಾರ್ಥಿಗಳ ಶೈಕ್ಷಣಿಕ ಹಿತಾಸಕ್ತಿಯನ್ನೂ ಕಾಪಾಡಬೇಕಿದೆ.
ಇಂದು ತುಮಕೂರಿನ ಸಿದ್ದಗಂಗಾ ಮಠದಿಂದ ಬೆಂಗಳೂರಿನ ಫ್ರೀಡಂ ಪಾರ್ಕಿನವರೆಗೆ, ಅತಿಥಿ ಉಪನ್ಯಾಸಕರ 80 ಕಿ.ಮೀ ಪಾದಯಾತ್ರೆ ಆರಂಭವಾಗಿದೆ. ಹೊಸ ವರ್ಷದ ಆರಂಭದ ದಿನವೇ ಸರಕಾರಕ್ಕೆ ಹೊಸ ಸಮಸ್ಯೆ ಎದುರಾಗಿದೆ.
ಸರಕಾರದ ಅಂಕಿ ಸಂಖ್ಯೆಯ ಪ್ರಕಾರ ರಾಜ್ಯದಲ್ಲಿರುವ 430 ಸರ್ಕಾರಿ ಪದವಿ ಕಾಲೇಜುಗಳಲ್ಲಿ ಸುಮಾರು 2 ಲಕ್ಷದ 35 ಸಾವಿರ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಈ ಕಾಲೇಜುಗಳಲ್ಲಿ ಶೇ. 70ರಷ್ಟು, ಸುಮಾರು 10 ಸಾವಿರಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರು ಕಾರ್ಯನಿರ್ವಹಿಸುತ್ತಿದ್ದಾರೆ.
ಇವರೆಲ್ಲರೂ ಇಂದಲ್ಲ ನಾಳೆ ಉದ್ಯೋಗ ಕಾಯಂ ಆಗಬಹುದೆನ್ನುವ ಆಸೆಯಲ್ಲಿ 15–20 ವರ್ಷಗಳಿಂದ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ. ಸರಕಾರದ ಕನಿಷ್ಠ ಗೌರವಧನ ಪಡೆದು ಕಷ್ಟದಲ್ಲಿಯೇ ಕುಟುಂಬ ನಿರ್ವಹಣೆ ಮಾಡುತ್ತ ಕಾರ್ಯನಿರ್ವಹಿಸಿದ್ದಾರೆ. ಹಾಗೆಯೇ ತಮ್ಮ ಸೇವೆಯನ್ನು ಕಾಯಂಗೊಳಿಸಬೇಕೆಂಬ ಬೇಡಿಕೆಯನ್ನು ಸರಕಾರದ ಮುಂದಿಟ್ಟು ಹೋರಾಟ ಮಾಡುತ್ತಲೇ ಬಂದಿದ್ದಾರೆ. ಆದರೆ ಸರಕಾರ ಅವರ ಹೋರಾಟವನ್ನು ಕಾಲಕಾಲಕ್ಕೆ ಬೇಕಾದ ಅಸ್ತ್ರಗಳನ್ನು ಹೂಡಿ ಹತ್ತಿಕ್ಕುತ್ತಲೇ ಬಂದಿದೆ. ಇಲ್ಲ, ಕೆಲವೊಂದು ಬೇಡಿಕೆಗಳನ್ನು ಈಡೇರಿಸಿ, ಅವರೊಳಗೇ ಬಿರುಕುಂಟು ಮಾಡಿ, ಅವರ ಸಂಖ್ಯಾಬಲವನ್ನು ಕುಗ್ಗಿಸುವ ಕೆಲಸವನ್ನು ಬಹಳ ನಾಜೂಕಾಗಿಯೇ ಮಾಡಿಕೊಂಡು ಬಂದಿದೆ.
ಸರ್ಕಾರಿ ಪದವಿ ಕಾಲೇಜುಗಳು ಎಂದರೆ ಬಡವರ ಮಕ್ಕಳು ಮಾತ್ರ ಓದುವ, ಗ್ರಾಮೀಣ ಭಾಗದ ಮಕ್ಕಳು ಹೋಗುವ, ಕಟ್ಟಕಡೆಯ ಆಯ್ಕೆಯ ಕಾಲೇಜು ಎಂಬುದು ಜನಜನಿತ. ಇಂತಹ ಪದವಿ ಕಾಲೇಜುಗಳಲ್ಲಿ ಕಾಯಂ ಬೋಧಕರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕಡಿಮೆ ಆಗುತ್ತಲೇ ಇದೆ. ಖಾಲಿಯಾದ ಹುದ್ದೆಗಳನ್ನು ಭರ್ತಿ ಮಾಡುವುದಕ್ಕೆ ಸರಕಾರ ಉತ್ಸಾಹ ತೋರುತ್ತಿಲ್ಲ. ಸುಮಾರು ಶೇ. 70 ರಷ್ಟಿರುವ ಅತಿಥಿ ಉಪನ್ಯಾಸಕರ ನೆರವಿನಿಂದಲೇ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪೂರೈಸಬೇಕಾದ ಸ್ಥಿತಿಯಿದೆ.
ಇದಕ್ಕೆ ವ್ಯತಿರಿಕ್ತವಾಗಿ, ಸರಕಾರ ಹೊಸ ಕಾಲೇಜು ಮತ್ತು ಜಿಲ್ಲೆಗೊಂದು ವಿಶ್ವವಿದ್ಯಾಲಯವನ್ನು ಸ್ಥಾಪಿಸುವಲ್ಲಿ ಅತ್ಯುತ್ಸಾಹ ತೋರುತ್ತಿದೆ. ಅನುದಾನ, ಕಾಮಗಾರಿ ಕಾರಣಕ್ಕಾಗಿ ಶಾಸಕರು ಮತ್ತು ಸಚಿವರು ಕಟ್ಟಡ ಕಟ್ಟುವುದನ್ನೇ ಅಭಿವೃದ್ದಿ ಎಂದುಕೊಂಡಿದ್ದಾರೆ. ಆದರೆ ಶೈಕ್ಷಣಿಕ ವಾತಾವರಣ ಸೃಷ್ಟಿಸಲು ಅಗತ್ಯವಾಗಿರುವ ಉಪನ್ಯಾಸಕರ ನೇಮಕದಲ್ಲಿ ಎಲ್ಲರೂ ನಿಸ್ಸೀಮ ನಿರಾಸಕ್ತಿ ತಳೆದಿದ್ದಾರೆ. ಇದರಿಂದಾಗಿ ಉನ್ನತ ಶಿಕ್ಷಣದ ಗುಣಮಟ್ಟ ವರ್ಷದಿಂದ ವರ್ಷಕ್ಕೆ ಕುಸಿಯುತ್ತಾ ಸಾಗಿದೆ.
ಉನ್ನತ ಶಿಕ್ಷಣದ ಸ್ಥಿತಿ ಹೀಗಿರುವಾಗ, ಬೇಡಿಕೆಗಳನ್ನು ಮುಂದಿಟ್ಟ ಬಹುತೇಕ ಅತಿಥಿ ಉಪನ್ಯಾಸಕರು ತರಗತಿಗಳನ್ನು ಬಹಿಷ್ಕರಿಸಿ ಹೋರಾಟದಲ್ಲಿ ತೊಡಗಿಕೊಂಡಿದ್ದಾರೆ. ಇದರಿಂದಾಗಿ ಶೈಕ್ಷಣಿಕ ಚಟುವಟಿಕೆಗಳು ಸ್ಥಗಿತಗೊಂಡಿವೆ, ವಿದ್ಯಾರ್ಥಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಪರೀಕ್ಷೆಗಳು ಸನ್ನಿಹಿತವಾಗಿರುವ ಸಂದರ್ಭದಲ್ಲಿ ತರಗತಿಗಳು ಪೂರ್ಣ ಪ್ರಮಾಣದಲ್ಲಿ ನಡೆಯದೆ ವಿದ್ಯಾರ್ಥಿಗಳು ಒತ್ತಡ ಅನುಭವಿಸಬೇಕಾಗಿದೆ. ಪದವಿ ಹಂತದ ವಿದ್ಯಾಭ್ಯಾಸ ಮುಖ್ಯವಾಗಿರುವುದು, ತಿಂಗಳಿಗೂ ಹೆಚ್ಚು ಕಾಲ ತರಗತಿಗಳು ನಡೆಯದಿರುವುದು ವಿದ್ಯಾರ್ಥಿಗಳು ಗುಣಮಟ್ಟದ ಶಿಕ್ಷಣ ಸಿಗದೆ ವಂಚಿತರಾಗುವಂತಾಗಿದೆ. ಯುವ ಜನತೆಯ ಭವಿಷ್ಯದ ಬದುಕು ಬರಿದಾಗಿದೆ.
ಇದೆಲ್ಲವನ್ನು ಅಳೆದು ತೂಗಿದ ಸರಕಾರ ಅತಿಥಿ ಉಪನ್ಯಾಸಕರೊಂದಿಗೆ ಹಲವು ಸುತ್ತಿನ ಮಾತುಕತೆ ನಡೆಸಿದೆ. ಆ ಮಾತುಕತೆಯ ನಂತರ, ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್, ʼಅತಿಥಿ ಉಪನ್ಯಾಸಕರ ವೇತನ 5 ಸಾವಿರ ರೂಪಾಯಿ ಹೆಚ್ಚಳಕ್ಕೆ ರಾಜ್ಯ ಸರ್ಕಾರ ನಿರ್ಧರಿಸಿದೆ. ಪರಿಷ್ಕೃತ ವೇತನವು ಜನವರಿ 1, 2024 ರಿಂದ ಅನ್ವಯವಾಗಲಿದೆ. ಜೊತೆಗೆ ಅತಿಥಿ ಉಪನ್ಯಾಸಕರಿಗೆ ಇನ್‌ಕ್ರಿಮೆಂಟ್, ವೇತನ ಸಹಿತ ರಜೆ, ಆರೋಗ್ಯ ಸವಲತ್ತು, ನಿವೃತ್ತ ವೇತನ ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸಿದ್ದೇವೆʼ ಎಂದಿದ್ದಾರೆ.
ಶಿಕ್ಷಣ ತಜ್ಞರ ಪ್ರಕಾರ, ಸರಕಾರದ ಈ ಕ್ರಮ ಇದ್ದುದರಲ್ಲಿಯೇ ನ್ಯಾಯಯುತ ಎಂಬ ಅಭಿಪ್ರಾಯವಿದೆ. ಆದರೆ ಅಧ್ಯಾಪಕರ ಸಂಘದ ಅಧ್ಯಕ್ಷ ಹನುಮಂತಗೌಡ ಕಲ್ಮನಿ, ಸೇವೆ ಕಾಯಂಗೊಳಿಸಬೇಕೆಂಬ ಬೇಡಿಕೆಗೆ ಸರಕಾರ ಸ್ಪಂದಿಸಿಲ್ಲವೆಂದು ಧರಣಿ ಮುಂದುವರಿಸಲು, ಪಾದಯಾತ್ರೆ ಆರಂಭಿಸಲು ಕರೆ ಕೊಟ್ಟಿದ್ದಾರೆ.
ಅತಿಥಿ ಉಪನ್ಯಾಸಕರ ಹೋರಾಟ ಇಂದು ನಿನ್ನೆಯದಲ್ಲ. ಕಳೆದ ಬಿಜೆಪಿ ಸರಕಾರದಲ್ಲಿಯೂ ಅತಿಥಿ ಉಪನ್ಯಾಸಕರು ಧರಣಿ ಕೂತಿದ್ದರು. ಆಗ ಹೋರಾಟದ ಸ್ಥಳಕ್ಕೆ ಭೇಟಿ ನೀಡಿದ್ದ ಅಂದಿನ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯನವರು, ‘ನಿಮ್ಮ ಹೋರಾಟಕ್ಕೆ ನಮ್ಮ ಬೆಂಬಲವಿದೆ, ನಮ್ಮ ಸರಕಾರ ಬಂದರೆ ಕಾಯಂ ಮಾಡುವುದಾಗಿ’ ಭರವಸೆ ನೀಡಿದ್ದರು. ಆದರೆ ಅಧಿಕಾರಕ್ಕೇರುತ್ತಿದ್ದಂತೆ ಕಾಯಂ ಕಷ್ಟ ಎಂದು ಕೆಲವೊಂದು ಬೇಡಿಕೆಗಳನ್ನು ಈಡೇರಿಸಿ, ʼಎಲ್ಲ ಅತಿಥಿ ಉಪನ್ಯಾಸಕರು ಜನವರಿ 1, 2024 ರಿಂದ ತರಗತಿಗಳಿಗೆ ಹಾಜರಾಗಬೇಕು, ಸರಕಾರದ ಈ ನಿರ್ಧಾರವನ್ನು ಒಪ್ಪಿಕೊಳ್ಳಲು ವಿಫಲವಾದರೆ ವಿದ್ಯಾರ್ಥಿಗಳ ಶೈಕ್ಷಣಿಕ ಹಿತಾಸಕ್ತಿಯ ದೃಷ್ಟಿಯಿಂದ ಸರ್ಕಾರ ಪರ್ಯಾಯ ಕ್ರಮಗಳನ್ನು ತೆಗೆದುಕೊಳ್ಳಲಿದೆʼ ಎಂದು ಉನ್ನತ ಶಿಕ್ಷಣ ಸಚಿವರು ಎಚ್ಚರಿಸಿದ್ದಾರೆ.
ನಿಯಮಿತವಾಗಿ ಹೊಸ ನೇಮಕಾತಿ ಮಾಡಿಕೊಳ್ಳುವುದೇ ಪದವಿ ಕಾಲೇಜುಗಳ ಶೈಕ್ಷಣಿಕ ಸಮಸ್ಯೆಗಳಿಗೆ ಪರಿಹಾರ. ಆದರೆ 430 ಸರಕಾರಿ ಕಾಲೇಜುಗಳಿಗೆ ಬೇಕಾದ ಬೋಧಕರ ನೇಮಕಾತಿಯಲ್ಲಿ ಎಲ್ಲ ಸರಕಾರಗಳು ತಪ್ಪು ಮಾಡಿವೆ. 2017ರಲ್ಲಿ 2994 ಉಪನ್ಯಾಸಕರ ನೇಮಕಾತಿ ಮಾಡಿಕೊಂಡಿದ್ದು ಬಿಟ್ಟರೆ, ಇಲ್ಲಿಯವರೆಗೆ ಹೊಸ ನೇಮಕಾತಿ ಆಗಿಲ್ಲ. 2021ರಲ್ಲಿ 1242 ಉಪನ್ಯಾಸಕರ ನೇಮಕಾತಿ ಪ್ರಕ್ರಿಯೆ ಮುಗಿಸಿದ್ದರೂ, ಇಷ್ಟು ದಿನ ಕಳೆದರೂ, ಅವರೆಲ್ಲರಿಗೂ ಆದೇಶ ಪ್ರತಿ ನೀಡಿಲ್ಲ.
ಸರ್ಕಾರಕ್ಕೆ ಅತಿಥಿ ಉಪನ್ಯಾಸಕರ ಸೇವೆ ತಾತ್ಕಾಲಿಕ ಉಪಾಯ. ಆದರೆ ಶೈಕ್ಷಣಿಕ ವ್ಯವಸ್ಥೆಯ ಬೋಧನೆ, ಸಂಶೋಧನೆ, ನ್ಯಾಕ್, ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಯ ದೃಷ್ಟಿಯಿಂದ ಇದು ಪೂರ್ಣಪ್ರಮಾಣದ ಪರಿಹಾರವಲ್ಲ. ಆದ್ದರಿಂದ ಸರಕಾರ, ಸದ್ಯದ ಸಮಸ್ಯೆಯಿಂದ ಹೊರಬೇಕಾದರೆ, ಅತಿಥಿ ಉಪನ್ಯಾಸಕರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಾಗಿದೆ ಹಾಗೂ 2021ರ ನೇಮಕಾತಿಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ತುರ್ತಾಗಿ ಆದೇಶ ಪ್ರತಿ ನೀಡಿ, ಆ ಮೂಲಕ ಪದವಿ ಕಾಲೇಜುಗಳ ವಿದ್ಯಾರ್ಥಿಗಳ ಶೈಕ್ಷಣಿಕ ಹಿತಾಸಕ್ತಿಯನ್ನೂ ಕಾಪಾಡಬೇಕಿದೆ.
