ಮರಗಳ್ಳತನ ಪ್ರಕರಣದಲ್ಲಿ ಬಂಧಿತರಾಗಿ ಜಾಮೀನಿನ ಮೇಲೆ ಬಿಡುಗಡೆಗೊಂಡಿರುವ ಬಿಜೆಪಿ ಸಂಸದ ಪ್ರತಾಪ್ ಸಿಂಹ ಅವರ ಸಹೋದರ ವಿಕ್ರಂ ಸಿಂಹ ಅವರ ಬಂಧನಕ್ಕೂ, ಸಿಎಂ ಸಿದ್ದರಾಮಯ್ಯನವರಿಗೂ ಸಂಬಂಧವಿಲ್ಲ ಎಂದು ಗೃಹ ಸಚಿವ ಡಾ ಜಿ ಪರಮೇಶ್ವರ್ ತಿಳಿಸಿದ್ದಾರೆ.
ವಿಕ್ರಂ ಸಿಂಹ ಬಂಧನದ ಬಳಿಕ ನಿನ್ನೆ ಮೈಸೂರಿನಲ್ಲಿ ಮಾತನಾಡುತ್ತಿದ್ದ ವೇಳೆ ಸಂಸದ ಪ್ರತಾಪ್ ಸಿಂಹ, “ಸಿಎಂ ಮಗನ ರಾಜಕೀಯ ಭವಿಷ್ಯಕ್ಕಾಗಿ ನನ್ನ ಕುಟುಂಬವನ್ನು ಮುಗಿಸಲು ಷಡ್ಯಂತ್ರ ರೂಪಿಸಲಾಗಿದೆ” ಎಂದು ಆರೋಪಿಸಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿದ ಗೃಹ ಸಚಿವ, ” ವಿಕ್ರಂ ಸಿಂಹ ಬಂಧನದಲ್ಲಿ ಯಾವುದೇ ರಾಜಕೀಯ ಇಲ್ಲ” ಎಂದು ಹೇಳಿದರು.
ಬೆಂಗಳೂರಿನಲ್ಲಿ ಪತ್ರಕರ್ತರು ಕೇಳಿದ್ದಕ್ಕೆ ಉತ್ತರಿಸಿದ ಪರಮೇಶ್ವರ್, “ಇದರಲ್ಲಿ ಯಾವುದೇ ರಾಜಕೀಯ ಪ್ರಶ್ನೆಯೇ ಬರಬಾರದು. ಯಾವುದೇ ಅನುಮತಿ ಇಲ್ಲದೆ ಅನಧಿಕೃತವಾಗಿ ಮರ ಕಡಿದಿದ್ದಾರೆ. ಅರಣ್ಯ ಇಲಾಖೆಯ ಅಧಿಕಾರಿಗಳು ಕಡಿದವರ ವಿರುದ್ಧ ಕಾನೂನು ಕ್ರಮ ಅಷ್ಟೇ ಕೈಗೊಂಡಿತ್ತು. ಇಂತಹ ಪ್ರಕರಣದಲ್ಲಿ ಯಾರೇ ಆಗಿದ್ದರೂ ಕ್ರಮ ಆಗುತ್ತದೆ. ಇದರಲ್ಲಿ ಪ್ರತಾಪ್ ಸಿಂಹ ಅವರ ಸಹೋದರ ಅಥವಾ ಇನ್ಯಾರೇ ಆಗಿರುವುದು ಅಪ್ರಸ್ತುತ. ಅದನ್ನು ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ರಾಜಕೀಯ ಮಾಡಬಾರದು” ಎಂದು ತಿಳಿಸಿದರು.
ಇದನ್ನು ಓದಿದ್ದೀರಾ? ಕೇರಳ ಮೂಲದ ಜೈಹಿಂದ್ ವಾಹಿನಿಯಲ್ಲಿ ಡಿಕೆ ಶಿವಕುಮಾರ್ ಹೂಡಿಕೆ: ವಿವರ ಕೇಳಿದ ಸಿಬಿಐ
“ಸಿಎಂ ಸಿದ್ದರಾಮಯ್ಯನವರಿಗೂ ವಿಕ್ರಂ ಸಿಂಹ ಬಂಧನಕ್ಕೂ ಸಂಬಂಧವಿಲ್ಲ. ಇದರಲ್ಲಿ ಯಾವುದೇ ಒತ್ತಡ ಏನೂ ಇಲ್ಲ. ತಪ್ಪು ಮಾಡಿದವರನ್ನು ತನಿಖೆ ನಡೆಸಿದ ಬಳಿಕ ಬಂಧಿಸಿದ್ದಾರೆ. ಒಂದು ವೇಳೆ ಅವರು ಮರ ಕಡಿದದ್ದರಲ್ಲಿ ವಿಕ್ರಂ ಸಿಂಹ ಭಾಗಿಯಾಗಿಲ್ಲ ಅಂದಮೇಲೆ ಅದು ಅಲ್ಲಿಗೆ ಮುಗೀಯುತ್ತದಲ್ವಾ?” ಎಂದು ಕೇಳಿದ ಗೃಹ ಸಚಿವ ಪರಮೇಶ್ವರ್, “ಅದಕ್ಕೆ ಯಾಕೆ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಚರ್ಚೆಯಾಗಬೇಕೋ ನನಗಂತೂ ಗೊತ್ತಿಲ್ಲ” ಎಂದು ತಿಳಿಸಿದರು.