ಹಾವೇರಿ ಜಿಲ್ಲೆಯ ಬಹುತೇಕ ಗ್ರಾಮೀಣ ಪ್ರದೇಶದ ರಸ್ತೆಗಳು ಸಂಪೂರ್ಣ ಹಾಳಾಗಿವೆ. ರಸ್ತೆಗಳು ಹಾಳಾಗಿದ್ದರೂ ಚುನಾಯಿತ ಪ್ರತಿನಿಧಿಗಳು ರಸ್ತೆ ಅಭಿವೃದ್ಧಿ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ ಎಂದು ಗ್ರಾಮಸ್ಥರು ಜನ ಪ್ರತಿನಿಧಿಗಳನ್ನು ನಿತ್ಯ ಶಪಿಸುತ್ತಿದ್ದಾರೆ.
ನೆಗಳೂರ ಗ್ರಾಮದಿಂದ ಹೊಸರಿತ್ತಿ ಗ್ರಾಮಕ್ಕೆ ಹೊಗುವ ರಸ್ತೆ ಸಂಪೂರ್ಣ ಹಾಳಾಗಿದೆ. ರಸ್ತೆಯ ಮಧ್ಯ ದೊಡ್ಡ ದೊಡ್ಡ ತಗ್ಗುಗಳು ಬಿದ್ದಿವೆ. ರಸ್ತೆಯ ಪಕ್ಕದಲ್ಲಿ ಬಾಂದರ ಕೆರೆ ಇದ್ದು, ಕೆರೆಗೆ ಅಡ್ಡಲಾಗಿ ನಿರ್ಮಿಸಿರುವ ಸೇತುವೆ ಪಕ್ಕದಲ್ಲಿ ರಸ್ತೆ ಕುಸಿದು ಬಿದ್ದ ಕಾರಣ ರಸ್ತೆಗೆ ಮಣ್ಣಿನ ಗುಡ್ಡೆ ಹಾಕಿದ್ದಾರೆ. ಇದರಿಂದಾಗಿ ರಸ್ತೆ ಕಿರಿದಾಗಿದೆ. ವಾಹನ ಸಂಚಾರಕ್ಕೆ ತುಂಬಾ ತೊಂದರೆಯಾಗುತ್ತಿದ್ದು, ಅಪಘಾತ ಸಂಭವಿಸುವ ಮುನ್ನ ಕುಸಿದು ಬಿದ್ದ ರಸ್ತೆಯನ್ನು ಅಭಿವೃದ್ಧಿಪಡಿಸಬೇಕು ಎಂದು ನೆಗಳೂರ ಗ್ರಾಮಸ್ಥರು ಆಗ್ರಹಿಸುತ್ತಿದ್ದಾರೆ.
ಹಾವನೂರ ಗ್ರಾಮದಿಂದ ಹುರಳಿಹಾಳ, ಗಳಗನಾಥ ಮಾರ್ಗವಾಗಿ ಬೆಳವಗಿ ಗ್ರಾಮಕ್ಕೆ ಹೊಗುವ ರಸ್ತೆ, ಹೊಸರಿತ್ತಿ ಗ್ರಾಮದಿಂದ ಯಲಗಚ್ಚ, ಯಲಗಚ್ಚ ಗ್ರಾಮದಿಂದ ಅಗಡಿ ಮತ್ತು ಕರ್ಜಿಗಿ ಹಾಗೂ ಕೊಣನತಂಬಗಿ ಗ್ರಾಮಕ್ಕೆ ಹೊಗುವ ರಸ್ತೆಗಳು ಸಂಪೂರ್ಣ ಹಾಳಾಗಿದೆ. ರಸ್ತೆಯ ಮಧ್ಯ ತಗ್ಗುಗಳು ಬಿದ್ದಿವೆ. ರಸ್ತೆಯ ತುಂಬ ದೊಡ್ಡ ದೊಡ್ಡ ಕಲ್ಲುಗಳು ಬಿದ್ದ ಕಾರಣ ದ್ವಿಚಕ್ರ ವಾಹನ ಸವಾರರು ಬಿದ್ದು ಗಾಯ ಮಾಡಿಕೊಂಡಿರುವ ಪ್ರಕರಣಗಳು ಹೆಚ್ಚಾಗುತ್ತಿವೆ.
ರೋಗಿಗಳಿಗೆ ತುರ್ತು ಚಿಕಿತ್ಸೆಗೆ ಹಾವೇರಿಗೆ ಹೋಗಲು ಸಾಧ್ಯವಾಗುತ್ತಿಲ್ಲ. ಎಲ್ಲ ರಸ್ತೆಗಳು ಹಾಳಾಗಿವೆ. ಗರ್ಭಿಣಿಯರಿಗೆ ಸಮಯಕ್ಕೆ ಸರಿಯಾಗಿ ಆಸ್ಪತ್ರೆಗೆ ಕರೆದೊಯ್ಯಲೂ ಸಾಧ್ಯವಾಗುತ್ತಿಲ್ಲ. ವಾಹನಗಳ ಸಂಚಾರಕ್ಕೆ ರಸ್ತೆಗಳು ಯೋಗ್ಯವಾಗಿಲ್ಲ. ಕೂಡಲೆ ರಸ್ತೆಗಳನ್ನು ಅಭಿವೃದ್ಧಿಪಡಿಸಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಜನರು ಈ ಗ್ರಾಮಗಳ ಜನರು ಆಗ್ರಹಿಸುತ್ತಿದ್ದಾರೆ.