ಕನ್ನಡಪರ ಹೋರಾಟಗಾರರು ಕಾನೂನು ಕೈಗೆತ್ತಿಕೊಂಡಿದ್ದಾರೆಂದು ಪೊಲೀಸ್ ಅಧಿಕಾರಿಗಳು ಕಾನೂನು ಉಪದೇಶ ಮಾಡಿ ನಾರಾಯಣಗೌಡ ಮತ್ತಿತರರ ವಿರುದ್ಧ ದೂರು ದಾಖಲಿಸಿ ಜೈಲಿಗೆ ಕಳಿಸಿದ್ದಾರೆ. ಕನ್ನಡ ಪರ ಹೋರಾಟಗಾರರು ಈ ರೀತಿ ಏಕಾಏಕಿ ಬೀದಿಗಿಳಿಯಲಿಲ್ಲ. ಬೀದಿಗಿಳಿಯುವ ಒಂದು ವಾರ ಮೊದಲೇ ಎಚ್ಚರಿಸಿದ್ದರು
ಕನ್ನಡಪರ ಸಂಘಟನೆಗಳು ಡಿಸೆಂಬರ್ 27ರಂದು ಬೀದಿಗಿಳಿದು ಹೋರಾಟ ಮಾಡಿದ್ದು ರಾಜ್ಯಾದ್ಯಂತ ಚರ್ಚೆಗೆ ಗ್ರಾಸವಾಗಿದೆ. ಆ ಹಿನ್ನೆಲೆಯಲ್ಲಿ ಜನಸಾಮಾನ್ಯರ ಮನಸ್ಸಿನಲ್ಲೂ ಇರುವಂತಹ ಒಂದಷ್ಟು ವಿಚಾರಗಳನ್ನು ಚಿಂತನೆಗೆ ಹಚ್ಚುವುದಕ್ಕಾಗಿ ವಿಷಯ ಹಂಚಿಕೊಳ್ಳುತ್ತಿರುವೆ.
ಕರ್ನಾಟಕದಲ್ಲಿ ಕನ್ನಡಕ್ಕೆ ಮೊದಲ ಆದ್ಯತೆ ಕೊಡಬೇಕು, ಕನ್ನಡ ನಾಡಿನ ಅನ್ನ ತಿಂದು, ಕರುನಾಡಿನ ನೀರು ಕುಡಿದು, ಇಲ್ಲಿನ ಗಾಳಿ ಉಸಿರಾಡುತ್ತಾ ಕನ್ನಡಿಗರೊಡನೆ ವ್ಯಾಪಾರ ಮಾಡಿ ಗಳಿಸಿದ ಲಾಭದಿಂದ ಜೀವನ ನಡೆಸುತ್ತಾ ಕನ್ನಡ ಕಲಿಯದೆ ಕನ್ನಡಕ್ಕೆ ಅಪಮಾನ ಮಾಡುತ್ತಿರುವುದು ಕಂಡುಬರುತ್ತಿದೆ. ಇಡೀ ಜಗತ್ತಿನ ಗಮನ ಸೆಳೆದ ಬೆಂಗಳೂರಿನ ವ್ಯಾಪಾರಿಗಳು ಕನಿಷ್ಠ ತಮ್ಮ ವ್ಯಾಪಾರಿ ಮಳಿಗೆಗಳು ಮತ್ತು ಮತ್ತಿತರ ಕಚೇರಿ/ಉದ್ದಿಮೆಗಳಿಗೆ ನಾಮಫಲಕ ಕನ್ನಡದಲ್ಲಿ ಹಾಕಬೇಕೆಂದು ಒಂದು ವಾರ ಮೊದಲೇ ಕನ್ನಡ ರಕ್ಷಣಾ ವೇದಿಕೆಯ ನಾರಾಯಣ ಗೌಡ ಬಣ ಗಡವು ಕೊಟ್ಟಿತ್ತು. ಕನ್ನಡ ರಕ್ಷಣಾ ವೇದಿಕೆಯ ಈ ಎಚ್ಚರಿಕೆಯನ್ನು ದಿಕ್ಕರಿಸಿ ಕನ್ನಡದ ವಿರೋಧಿಗಳಂತೆ ವರ್ತಿಸಿದರಿಂದ ರೊಚ್ಚಿಗೆದ್ದ ಕನ್ನಡಪರ ಸಂಘಟನೆಗಳ ಹೋರಾಟಗಾರರು ಬೀದಿಗಿಳಿದು ಕನ್ನಡದಲ್ಲಿ ನಾಮಫಲಕ ಹಾಕದ ಅಂಗಡಿ ಮುಂಗಟ್ಟು ವ್ಯಾಪಾರಿ ಮಳಿಗೆಗಳ ಆಂಗ್ಲ ನಾಮಫಲಕ ಕಿತ್ತು ಹಾಕಿದರು. ಮಸಿ ಬಳಿದರು, ವಿರೋಧಿಸಿದವರ ವಿರುದ್ಧ ದಿಕ್ಕಾರ ಕೂಗಿದರು.
ಕರ್ನಾಟಕದಲ್ಲಿ ಕನ್ನಡ ಕಡ್ಡಾಯ, ಕನ್ನಡ ನಾಮಫಲಕ ಮುಂತಾದ ವಿಚಾರದಲ್ಲಿ ಬೀದಿಗಿಳಿದ ಹೋರಾಟ ಇದೇ ಮೊದಲೇನಲ್ಲ. ಕಳೆದ ನಾಲ್ಕು ದಶಕಗಳಿಂದಲೂ ಇಂತಹ ಹೋರಾಟದ ಸಮಯದಲ್ಲಿ ಕೊಟ್ಟ ಭರವಸೆಗಳಂತೆ ಸಾಕಷ್ಟು ಸರ್ಕಾರಿ ಆದೇಶಗಳು ಆಗಿವೆ. ಗೋಕಾಕ್ ವರದಿ ಇರಬಹುದು ಅಥವಾ ಸರೋಜಿನಿ ಮಹಿಷಿ ವರದಿಯಾಗಿರಬಹುದು ಇಂದಿಗೂ ಜಾರಿಯಾಗಿಲ್ಲ. ಆ ಆದೇಶಗಳು ಪಾಲನೆಯಾಗಿಲ್ಲ. ಅಧಿಕಾರ ಹಿಡಿದ ಯಾವುದೇ ರಾಜಕೀಯ ಪಕ್ಷಗಳು ಆಸಕ್ತಿ ವಹಿಸಿ ಆದೇಶ ಪಾಲನೆಗೆ ಮುಂದಾಗಲಿಲ್ಲ. ಆಡಳಿತದ ಮುಖ್ಯ ಹುದ್ದೆ ಅಲಂಕರಿಸಿದ ಐಎಎಸ್, ಐಪಿಎಸ್ ಅಧಿಕಾರಿಗಳು ಕಾರ್ಯರೂಪಕ್ಕೆ ತರಲಿಲ್ಲ. ಕೇವಲ ಮೂಗಿಗೆ ತುಪ್ಪ ಸವರಿದಂತೆ ತತ್ಕಾಲಕ್ಕೆ ಕಾರ್ಯಚರಣೆಯಾದರೂ ಕಾಲ ಕಳೆದಂತೆ ಹೋರಾಟ ಮತ್ತು ಆದೇಶಗಳು ಕರಗಿ ಹೋಗುತ್ತಿವೆ. ಇದಕ್ಕೆ ಹೋರಾಟಗಾರರ ಹೋರಾಟವು ʼಓಲಾಟʼವಾಗಿದೆ ಎಂದು ಸಾರ್ವಜನಿಕರು ಮಾತನಾಡಿಕೊಳ್ಳುತ್ತಾರೆ. ಅಲ್ಲದೆ ರಾಜಕೀಯ ಪಕ್ಷಗಳ ಜೊತೆ ಒಳ ಒಪ್ಪಂದ ಮಾಡಿಕೊಂಡ ಕೆಲವು ಕನ್ನಡ ಪರ ಸಂಘಟನೆಗಳು ರಾಜಕೀಯ ಪಕ್ಷಗಳ ಕೈಗೊಂಬೆಯಂತಿದ್ದಾರೆ ಎನ್ನುವ ಸಂಶಯದ ಮಾತುಗಳು ಕೇಳಿಬರುತ್ತಿದೆ.
ಬೀದಿಗಿಳಿದ ಕನ್ನಡಪರ ಹೋರಾಟಗಾರರು ಕಾನೂನು ಕೈಗೆತ್ತಿಕೊಂಡಿದ್ದಾರೆಂದು ಪೊಲೀಸ್ ಅಧಿಕಾರಿಗಳು ಕಾನೂನು ಉಪದೇಶ ಮಾಡಿ ನಾರಾಯಣಗೌಡ ಮತ್ತಿತರರ ವಿರುದ್ಧ ದೂರು ದಾಖಲಿಸಿ ಬಂಧಿಸಿ ಜೈಲಿಗೆ ಕಳಿಸಿದ್ದಾರೆ. ಕನ್ನಡ ಪರ ಹೋರಾಟಗಾರರು ಈ ರೀತಿ ಏಕಾಏಕಿ ಬೀದಿಗಿಳಿಯಲಿಲ್ಲ. ಬೀದಿಗಿಳಿಯುವ ಒಂದು ವಾರ ಮೊದಲೆ ಆಂಗ್ಲ ನಾಮಫಲಕ ಇದ್ದಲ್ಲಿ ಕನ್ನಡಕ್ಕೆ ಬದಲಾಯಿಸಿಕೊಳ್ಳುಲು ಎಚ್ಚರಿಸಿದ್ದರು. ಕನ್ನಡ ಹೋರಾಟಗಾರರ ಎಚ್ಚರಿಕೆ ಧಿಕ್ಕರಿಸಿ ಕೆರಳಿಸಿದ ಅಂಶ ಮುಖ್ಯವಾಗಿದೆ.
ಕನ್ನಡ ಹೋರಾಟಗಾರರಿಗೆ ಕಾನೂನಿನ ಉಪದೇಶ ಮಾಡಿದ ಪೊಲೀಸ್ ಅಧಿಕಾರಿಗಳು ಅಥವಾ ಸಂಬಂಧಿಸಿದ ಬಿಬಿಎಂಪಿ ಅಧಿಕಾರಿಗಳು ಕಳೆದ ಹತ್ತಿಪ್ಪತ್ತು ವರ್ಷಗಳಿಂದ ಕನ್ನಡ ಕಾಯುವ ಕೆಲಸ ಮಾಡುತ್ತಿಲ್ಲ ಏಕೆ? ತಮ್ಮ ತಮ್ಮ ಇಲಾಖೆಯಲ್ಲಿನ ಕನ್ನಡಕ್ಕೆ ಸಂಬಂಧಿಸಿದ ಆದೇಶಗಳನ್ನ ಕಡೆಗಣಿಸಿ ಕರ್ತವ್ಯದ್ರೋಹ ಎಸಗಿದ್ದೇಕೆ? ಬೆಂಗಳೂರಿನ ವ್ಯಾಪಾರಿ ಮಳಿಗೆಗಳಿಗೆ ಕನ್ನಡ ನಾಮಫಲಕ ಹಾಕದವರ ವಿರುದ್ಧ ಕಾನೂನು ಕ್ರಮ ಕೈಗೊಂಡು ವ್ಯಾಪಾರ ಪರವಾನಿಗೆ ರದ್ದು ಮಾಡಲಿಲ್ಲವೇಕೆ? ಮಳಿಗೆಗೆ ಕನ್ನಡ ಕಡೆಗಣನೆ ಮಾಡಿ ಕರ್ತವ್ಯ ಚ್ಯುತಿ ಮಾಡಿದ ಸಿಬ್ಬಂದಿ ಮೇಲೆ ಮೇಲಧಿಕಾರಿಗಳು ಶಿಸ್ತು ಕ್ರಮ ಕೈಗೊಂಡಿದ್ದರೇ? ಶಿಸ್ತುಕ್ರಮ ಕೈಗೊಳ್ಳದ ಮೇಲಧಿಕಾರಿಗಳದ್ದು ಸಹ ಬೇಜವಾಬ್ದಾರಿಯಲ್ಲವೇ?
ಇಂತಹ ಬೇಜವಾಬ್ದಾರಿ ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳಿಂದ ಸಮರ್ಥ ಆಡಳಿತ ನಡೆಸಲಿಲ್ಲ ಎಂಬುದು ರಾಜಕೀಯ ಪಕ್ಷಗಳಿಗೆ ಅಂಟಿದ ಕಳಂಕ. ಕನ್ನಡ ನಾಡು ನುಡಿಗಾಗಿ ಹೋರಾಟಕ್ಕಿಳಿದ ಕನ್ನಡ ಪರ ಹೋರಾಟಗಾರರಿಗೆ ಕಾನೂನು ಕೈಗೆ ತೆಗೆದುಕೊಂಡಿರೆಂದು ದೂರು ದಾಖಲಿಸಿ ಜೈಲಿಗೆ ಕಳಿಸಿದ್ದು ಸರಿಯಲ್ಲ. ಕನ್ನಡ ಕಾವಲು ಕಾಯಬೇಕಾದ ಅಧಿಕಾರಿಗಳ ಕರ್ತವ್ಯ ಲೋಪದಿಂದ ಕನ್ನಡಪರ ಹೋರಾಟಗಾರರು ಬೀದಿಗಿಳಿಯುವಂತಾಗಿತ್ತು. ಕಾನೂನು ಕೈಗೆ ತೆಗೆದುಕೊಂಡವರ ಜೈಲಿಗೆ ಕಳಿಸಿದ್ದು ಒಂದೊಮ್ಮೆ ಸರಿ ಎನ್ನುವುದಾದರೆ ಎಲ್ಲಾ ಕಡೆ ಕಾನೂನು ಪಾಲನೆ ಆಗುತ್ತಿದೆಯೇ?
ಕನ್ನಡ ಮಾತ್ರವಲ್ಲ ಸರ್ಕಾರಿ ಅನುದಾನ ಕಾಮಗಾರಿ ಅಥವಾ ಸರ್ಕಾರಿ ಜಮೀನು ಹಂಚಿಕೆ ಮುಂತಾದ ಪ್ರತಿಯೊಂದು ಪ್ರಕ್ರಿಯೆಗಳಲ್ಲೂ ಭ್ರಷ್ಟಾಚಾರದ ವಾಸನೆ ಮಾತ್ರವಲ್ಲ, ಆರೋಪಗಳು ನಿತ್ಯ ವರದಿಯಾಗುತ್ತಿವೆ. ಲೋಕಾಯುಕ್ತ ಮತ್ತು ಭ್ರಷ್ಟಾಚಾರ ನಿಗ್ರಹ ದಳಗಳಿಂದ ಅನೇಕ ಕಚೇರಿಗಳು ಮತ್ತು ಅಧಿಕಾರಿ ಸಿಬ್ಬಂದಿಗಳ ಮನೆ ಮೇಲೆ ದಾಳಿ ನಡೆದು ಕೋಟ್ಯಂತರ ರೂಪಾಯಿಗಳು ಚಿನ್ನ ಬೆಳ್ಳಿ ವಶಪಡಿಸಿಕೊಳ್ಳಲಾಯ್ತು. ಸಾಕ್ಷಿ ಸಮೇತ ಅಕ್ರಮವಾಗಿ ಅಧಿಕ ಸಂಪತ್ತು ಹೊಂದಿದ್ದ ರಾಜಕಾರಣಿ ಅಧಿಕಾರಿ ಸಿಬ್ಬಂದಿಗಳಿಗೆ ಎಷ್ಟು ದಿನ ಎಷ್ಟು ಜನರನ್ನ ಜೈಲಿಗಟ್ಟಲಾಗಿದೆ ಎಂದು ಪ್ರಶ್ನಿಸಿದರೆ ಆತ್ಮಸಾಕ್ಷಿಯಿಂದ ಈ ಅಧಿಕಾರಿಗಳು ಉತ್ತರ ಕೊಡಲಾರರು. ಕನ್ನಡ ನಾಡು ನುಡಿಗೆ ಬೀದಿಗಿಳಿದವರನ್ನು ಜೈಲಿಗಟ್ಟಿದ್ದು ಮಾತ್ರ ಅಕ್ಷಮ್ಯ ಅಪರಾಧ.
ಇಂದು ಕನ್ನಡ ಕವಿಗಳು ಸಾಹಿತಿಗಳು ಲೇಖಕರು ನಾವೆಲ್ಲ ಸಜ್ಜನರೆಂದು ಮನೆಯಲ್ಲಿ ಕುಳಿತು ತಮ್ಮ ತಮ್ಮ ಸಾಧನೆ ಪ್ರಕಟಿಸುತ್ತಾ ಮನೆಯಲ್ಲಿ ಕುಳಿತಿದ್ದಾರೆ. ಇಲ್ಲವೆ ಕಾರ್ಯಕ್ರಮಗಳಲ್ಲಿ ಮುಳುಗಿದ್ದಾರೆ. ಆದರೆ ಜಗತ್ತಿನ ಅನೇಕ ದೇಶಗಳ ಮತ್ತು ಭಾರತದ ಎಲ್ಲಾ ಭಾಷಿಕರೂ ಬೆಂಗಳೂರಿನಲ್ಲಿ ವಾಸಿಸುತ್ತಾ ಕನ್ನಡ ಕಾಣೆಯಾಗುತ್ತಿದೆ. ಕನ್ನಡಿಗರು ಅಲ್ಪಸಂಖ್ಯಾತರಾಗಿದ್ದಾರೆ.
ಇದನ್ನು ಓದಿ ಈ ದಿನ ಸಂಪಾದಕೀಯ | ಅತ್ತ ಅತಿಥಿ ಉಪನ್ಯಾಸಕರು ಇತ್ತ ಸರಕಾರ; ನಡುವೆ ನಲುಗದಿರಲಿ ವಿದ್ಯಾರ್ಥಿಗಳು
ಇನ್ನು ಕನ್ನಡ ಸ್ವಾಯುತ್ತ ಸಂಸ್ಥೆಗಳಾದ ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಪುಸ್ತಕ ಪ್ರಾಧಿಕಾರಗಳು ಹೆಸರಿಗಷ್ಟೇ ಇದ್ದರೆ, ಕನ್ನಡ ಸಾಹಿತ್ಯ ಪರಿಷತ್ತು ಸರ್ವಾಧಿಕಾರಿಯ ಕೈಗೆ ಸಿಕ್ಕಿ ನರಳುತ್ತಿದೆ. ಕನ್ನಡ ಪರ ಹೋರಾಟಗಾರರನ್ನು ನಿರ್ಲಕ್ಷಿಸಿ ಸರ್ಕಾರದ ಅನುದಾನದಲ್ಲಿ ಮೋಜು ಮಸ್ತಿಯಲ್ಲಿ ಮೆರೆಯುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಕನ್ನಡ ನಾಡು ನುಡಿಗೆ ನಿರ್ಲಕ್ಷ್ಯ ಮಾಡುತ್ತಿರುವ ನಮ್ಮನ್ನೆಲ್ಲ ಮಕ್ಕಳು, ಮೊಮ್ಮಕ್ಕಳು ಶಪಿಸುತ್ತಾರೆ. ಆದ್ದರಿಂದ ನಾವು ಜಾಗೃತರಾಗಿ ಕನ್ನಡ ನಾಡು ನುಡಿಗೆ ಶ್ರಮಿಸಿ ನಮ್ಮ ಋಣ ತೀರಿಸೋಣ.

ಹನುಮೇಗೌಡ ಎನ್
ಸಾಮಾಜಿಕ ಕಾರ್ಯಕರ್ತ