ಬಿಹಾರದ ಸೀತಾಮರ್ಹಿಯಲ್ಲಿ ದಲಿತ ಮಹಿಳೆಯೊಬ್ಬರನ್ನು ಸಾರ್ವಜನಿಕರ ಮುಂದೆಯೆ ಪೊಲೀಸ್ ಸಿಬ್ಬಂದಿಯೊಬ್ಬರು ಲಾಠಿಯಿಂದ ಥಳಿಸಿದ ಘಟನೆ ವರದಿಯಾಗಿದೆ.
ಮನಬಂದಂತೆ ಲಾಠಿಯಿಂದ ಬಡಿಯುವ ದೃಶ್ಯಗಳು ಸ್ಥಳೀಯರು ತಮ್ಮ ಮೊಬೈಲ್ನಲ್ಲಿ ಚಿತ್ರೀಕರಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬಳಿಕ ಪೊಲೀಸರ ವರ್ತನೆಯ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದೌರ್ಜನ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದು, ಮಹಿಳೆಯನ್ನು ಥಳಿಸಿದ ಸಿಬ್ಬಂದಿ ಮೇಲೆ ಕ್ರಮ ತೆಗೆದುಕೊಳ್ಳುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ ಎನ್ನಲಾಗಿದೆ.
ಪ್ರಕರಣ ವಿವಾದದ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆಯೇ ಸಮಜಾಯಿಷಿ ನೀಡಿರುವ ಪೊಲೀಸರು, “ಅಪಹರಣ ಪ್ರಕರಣದಲ್ಲಿ ಎರಡು ಗುಪುಗಳ ನಡುವೆ ಮಾರಾಮಾರಿ ನಡೆದಿದ್ದು, ಪೊಲೀಸರು ಕಾನೂನು ಸುವ್ಯವಸ್ಥೆ ಕಾಪಾಡಲು ಪ್ರಯತ್ನಿಸುತ್ತಿದ್ದರು” ಎಂದು ಹೇಳಿದ್ದಾರೆ.
ಸುರಸಂದ್ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ರಾಜ್ಕಿಶೋರ್ ಸಿಂಗ್ ಮಹಿಳೆಯನ್ನು ರಸ್ತೆಯಲ್ಲಿ ದೊಣ್ಣೆಯಿಂದ ಥಳಿಸಿದ್ದಾರೆ. ಸುರಸಂದ್ ಮಾರುಕಟ್ಟೆಯಲ್ಲಿ ನಡೆದ ಗಲಾಟೆಯಿಂದ ಕೋಪಗೊಂಡ ಪೊಲೀಸ್ ಅಧಿಕಾರಿ, ಮಹಿಳೆಯನ್ನು ಅನೇಕ ಬಾರಿ ಲಾಠಿಯಿಂದ ಥಳಿಸಿದ್ದಾರೆ.
#Sitamarhi : सीतामढ़ी में सुरसंड थानाध्यक्ष ने निहत्थी दलित महिला को गुंडों की तरह ताबड़तोड़ लाठियाों से पीटा, वीडियो वायरल#WomenEmpowerment #DalitWoman #VideoViral @SitamarhiPolice | @bihar_police pic.twitter.com/eHr9TYj7Hu
— जागृति_दुबे (@Jagriti_dubey13) December 31, 2023
ಘಟನೆಯ ಕುರಿತು ತನಿಖೆಗೆ ಆದೇಶಿಸಲಾಗಿದೆ ಎಂದು ಸೀತಾಮರ್ಹಿ ಪೊಲೀಸರು ಹೇಳಿದ್ದು, ರಸ್ತೆಯಲ್ಲಿ ಜಗಳವಾಡುತ್ತಿದ್ದ ಇಬ್ಬರು ಮಹಿಳೆಯರನ್ನು ಬೇರ್ಪಡಿಸುವ ಉದ್ದೇಶದಿಂದ ಪೊಲೀಸರ ಥಳಿಸಿದ್ದಾರೆ ಎನ್ನಲಾಗಿದೆ. ಬಾಲಕಿಯ ಅಪಹರಣಕ್ಕೆ ಸಂಬಂಧಿಸಿದ ಗಲಾಟೆಯಲ್ಲಿ ಘಟನೆ ನಡೆದಿದೆ ಎಂದು ಉಪವಿಭಾಗೀಯ ಪೊಲೀಸ್ ಅಧಿಕಾರಿ (ಎಸ್ಡಿಪಿಒ) ವಿನೋದ್ ಕುಮಾರ್ ತಿಳಿಸಿದ್ದಾರೆ.
“ಬಾಲಕಿಯನ್ನು ರಕ್ಷಿಸಲಾಗಿದೆ. ಆದರೆ ಎರಡೂ ಕಡೆಯವರು ಪೊಲೀಸ್ ಠಾಣೆಗೆ ಭೇಟಿ ನೀಡಿದ್ದರು. ಠಾಣೆ ಆವರಣದಲ್ಲಿ ತಮ್ಮತಮ್ಮಲ್ಲೇ ಜಗಳವಾಡಿದರು. ಇದರಿಂದ ರಸ್ತೆಯಲ್ಲಿ ಸಂಚಾರ ದಟ್ಟಣೆ ಉಂಟಾಗಿದ್ದು, ಗುಂಪನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ಮಾಡಿದರು” ಎಂದು ಅವರು ತಿಳಿಸಿದ್ದಾರೆ.
ಅಧಿಕಾರಿ ತಪ್ಪಿತಸ್ಥರೆಂದು ಕಂಡುಬಂದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಸೀತಾಮರ್ಹಿ ಎಸ್ಪಿ ಮನೋಜ್ ಕುಮಾರ್ ತಿವಾರಿ ತಿಳಿಸಿದ್ದಾರೆ.