ರಾಯಚೂರು ಜಿಲ್ಲೆಯ ದೇವತಗಲ್ ಗ್ರಾಮದಲ್ಲಿ ಮೂಲಭೂತ ಸೌಕರ್ಯಗಳಿಲ್ಲದೇ ಗ್ರಾಮಸ್ಥರು ಪರದಾಡುವಂತಾಗಿದೆ. ಗ್ರಾಮದಲ್ಲಿ ಸಮರ್ಪಕವಾದ ರಸ್ತೆಗಳಿಲ್ಲ, ಚರಂಡಿ ವ್ಯವಸ್ಥೆ ಇಲ್ಲದೇ ಗ್ರಾಮದಲ್ಲಿ ಸ್ವಚ್ಛತೆಯ ಕೊರತೆ ಇದೆ.
ಈ ಗ್ರಾಮದಲ್ಲಿ 1500 ಜನಸಂಖ್ಯೆ ಇದೆ. ಎರಡು ಕೊಳವೆಬಾವಿಗಳಿಂದ ಗ್ರಾಮಕ್ಕೆ ನೀರು ಪೂರೈಕೆ ಮಾಡಲಾಗುತ್ತಿದೆ. ಓಣಿಗಳಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಿಸಿದ್ದರೂ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ರಸ್ತೆ ಮೇಲೆ ನೀರು ಹರಿಯುತ್ತದೆ.
ಗ್ರಾಮದ ಅಗಸಿ ಹತ್ತಿರ ಮತ್ತು ಜನತಾ ಕಾಲನಿಯಲ್ಲಿ ಬಟ್ಟೆ ಮತ್ತು ಪಾತ್ರೆ ತೊಳೆದ ನೀರು, ಬಚ್ಚಲು ನೀರು ರಸ್ತೆಯಲ್ಲಿ ನಿಂತು ಕೆಸರು ಗದ್ದೆಯಂತಾಗಿದೆ. ಗಲೀಜು ನೀರಿನಿಂದ ಸೊಳ್ಳೆಗಳ ಕಾಟ ಹೆಚ್ಚಿದ್ದು, ಸುತ್ತಮುತ್ತ ವಾಸಿಸುವ ಕುಟುಂಬಗಳ ನಿದ್ದೆಗೆಡಿಸಿವೆ.
ಹಗಲು ಹೊತ್ತಿನಲ್ಲಿ ಜಮೀನಿಗೆ ಕೆಲಸಕ್ಕೆ ಹೋಗುತ್ತೇವೆ. ಸಂಜೆ ಮನೆಗೆ ಬಂದರೆ ಗಲೀಜು ವಾತಾವರಣದಲ್ಲಿರಬೇಕು. ಗಬ್ಬು ವಾಸನೆ ಮತ್ತು ಸೊಳ್ಳೆಗಳ ಕಾಟ. ನೆಮ್ಮದಿಯಾಗಿ ನಿದ್ರೆ ಮಾಡುವಂತಿಲ್ಲ. ಹೆಚ್ಚಿದ ಸೊಳ್ಳೆ ಕಾಟದಿಂದ ಜನ ಜಾನುವಾರುಗಳು ಚಡಪಡಿಸುವಂತಾಗಿದೆ ಎಂದು ಗ್ರಾಮದ ಮಹಿಳೆಯರು ತಮ್ಮ ಅಳಲು ತೋಡಿಕೊಳ್ಳುತ್ತಾರೆ.
ಗ್ರಾಮಕ್ಕೆ ಬೆಳಗ್ಗೆ ಮತ್ತು ಸಂಜೆ ದಿನದಲ್ಲಿ ಎರಡು ಬಾರಿ ಬಸ್ ಬಂದರೂ ಲಿಂಗಸುಗೂರು, ಸಿರವಾರ ಮತ್ತು ಕವಿತಾಳ ಪಟ್ಟಣಗಳಿಗೆ ಶಾಲಾ, ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳು ಗೊಲ್ದಿನ್ನಿ ಕ್ರಾಸ್‌ವರೆಗೆ ಅಂದಾಜು 3 ಕಿ.ಮೀ ಕಾಲ್ನಡಿಗೆ ಅನಿವಾರ್ಯವಾಗಿದೆ.
ಗ್ರಾಮಕ್ಕೆ ಬೆಳಗ್ಗೆ 6 ಗಂಟೆಗೆ ಬಸ್ ಬರುವುದರಿಂದ ಮಕ್ಕಳಿಗೆ ಅನುಕೂಲವಾಗುತ್ತಿಲ್ಲ. ದೇವತಗಲ್ ಮತ್ತು ಗೊಲ್ದಿನ್ನಿ ಗ್ರಾಮಗಳಿಂದ ಅಂದಾಜು 40 ವಿದ್ಯಾರ್ಥಿಗಳು ನಿತ್ಯ ಶಾಲಾ ಕಾಲೇಜಿಗೆ ಹೋಗುತ್ತಾರೆ. ಶಾಲೆಗೆ ಹೋಗುವಾಗ ಮತ್ತು ಸಂಜೆ ಮನೆಗೆ ಬರುವಾಗ ನಿತ್ಯ ನಡೆದುಕೊಂಡು ಬರುತ್ತಾರೆ. ಶಾಲಾ, ಕಾಲೇಜು ಸಮಯಕ್ಕೆ ಸರಿಯಾಗಿ ಬಸ್ ಓಡಿಸಿದರೆ ಅನುಕೂಲವಾಗುತ್ತದೆ ಎಂದು ಗ್ರಾಮಸ್ಥರು ಆಗ್ರಹಿಸುತ್ತಿದ್ದಾರೆ.
ಕಾಂಕ್ರಿಟ್ ರಸ್ತೆ ನಿರ್ಮಿಸುವಾಗಲೇ ಸ್ವಲ್ಪ ಎತ್ತರಿಸುವಂತೆ ಮನವಿ ಮಾಡಿದರೂ ಅಧಿಕಾರಿಗಳು ಗಮನಹರಿಸಲಿಲ್ಲ. ಈಗ ರಸ್ತೆಯಲ್ಲಿ ನೀರು ನಿಂತು ಗಲೀಜು ಉಂಟಾಗುತ್ತಿದೆ. ಓಣಿಗಳಲ್ಲಿ ಚರಂಡಿ ನಿರ್ಮಾಣ ಮತ್ತು ಸರ್ಕಾರಿ ಶಾಲೆಗೆ ಕಾಂಪೌಂಡ್ ನಿರ್ಮಾಣ ಮಾಡುವಂತೆ ಹಲವು ಬಾರಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ. ಗ್ರಾಮದಲ್ಲಿ ಗ್ರಾಮ ಪಂಚಾಯಿತಿಯ ಮೂವರು ಸದಸ್ಯರಿದ್ದಾರೆ ಆದರೂ, ಈ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ ಎಂದು ಆರೋಪಿಸುತ್ತಿದ್ದಾರೆ ಜನರು.