ಅಮರಶಿಲ್ಪಿ ಜಕಣಾಚಾರಿ ಅವರ ಸಂಸ್ಮರಣಾ ದಿನಾಚರಣೆಯನ್ನು ಧಾರವಾಡ ಜಿಲ್ಲಾಡಳಿತ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಧಾರವಾಡ ಜಿಲ್ಲೆಯ ವಿಶ್ವಕರ್ಮ ಸಮಾಜದ ಎಲ್ಲ ಸಂಘ ಸಂಸ್ಥೆಯಗಳ ಸಹಕಾರದಲ್ಲಿ ನಗರದ ಕರ್ನಾಟಕ ಕುಲಪುರೋಹಿತ ಆಲೂರು ವೆಂಕಟರಾವ್ ಸಾಂಸ್ಕ್ರತಿಕ ಭವನದಲ್ಲಿ ಜ.01ರಂದು ಆಚರಿಸಲಾಯಿತು.
ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ. ಅವರು ಅಮರಶಿಲ್ಪಿ ಜಕಣಾಚಾರಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಅಮರಶಿಲ್ಪಿ ಶ್ರೀಜಕಣಾಚಾರಿಯವರ ಬದುಕಿನ ಮಹತ್ವ ಮತ್ತು ಅವರ ಕೊಡುಗೆಯನ್ನು ಸ್ಮರಿಸಿದರು.
ಕಾರ್ಯಕ್ರಮದಲ್ಲಿ ಸಾಹಿತಿ ಈರಣ್ಣ ಬಡಿಗೇರ ಅವರು ವಿಶೇಷ ಉಪನ್ಯಾಸ ನೀಡಿ, “ಇಡೀ ವಿಶ್ವವೇ ಬೆರಗಾಗುವಂತೆ ಕಲ್ಲನ್ನು ಹೂವಾಗಿ ಅರಳಿಸಿದ್ದ ಅಮರಶಿಲ್ಪಿ ಜಕಣಾಚಾರಿ, ಬೇಲೂರು, ಹಳೇಬೀಡು ದೇವಾಲಯಗಳಿಗೆ ವಿಶ್ವ ಭೂಪಟದಲ್ಲಿ ಶಾಶ್ವತ ಸ್ಥಾನ ಸಂಪಾದಿಸಿಕೊಟ್ಟಿದ್ದಾರೆ. ಇಂದಿನ ವಿಶ್ವಕರ್ಮ ಸಮುದಾಯ ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ತಮ್ಮ ಕೌಶಲ್ಯ ಕಣ್ಮರೆಯಾಗದಂತೆ ಶಿಲ್ಪಕಲೆಯನ್ನು ಮುಂದುವರಿಸಿಕೊಂಡು ಹೋಗಬೇಕು” ಎಂದರು.
ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಸ್.ಎಸ್. ಕೆಳದಿಮಠ ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಅಧ್ಯಕ್ಷ ಡಾ. ಲಿಂಗರಾಜ ಅಂಗಡಿ, ಮೌನೇಶ್ವರ ಧರ್ಮನಿಧಿ ಸಂಸ್ಥೆ ಅಧ್ಯಕ್ಷ ಮಹಾರುದ್ರ ಬಡಿಗೇರ, ಸಮುದಾಯದ ಮುಖಂಡರಾದ ವಿಠ್ಠಲ ಜಿ. ಕಮ್ಮಾರ, ವಸಂತ ಅರ್ಕಾಚರ, ಶಿವಣ್ಣ ಬಡಿಗೇರ, ಸಂತೋಷ ಬಡಿಗೇರ ಮತ್ತು ಅವರು ಉಪಸ್ಥಿತರಿದ್ದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಆರತಿ ದೇವಶಿಖಾಮಣಿ ನಿರೂಪಿಸಿ, ವಂದಿಸಿದರು.