ಈ ದಿನ ಸಂಪಾದಕೀಯ | ಹೊಸವರ್ಷದ ಹೊಸ್ತಿಲಲ್ಲಿ ನಮ್ಮನ್ನಗಲಿದ ನಿಜಾಯತಿಯ ಪತ್ರಕರ್ತ ಜಾನ್ ಪಿಲ್ಜರ್

Date:

Advertisements

‘ಮುಖ್ಯಧಾರೆ’ ಮಾಧ್ಯಮ ಎಂದು ಕರೆಯಲಾಗುವ ಮಾಧ್ಯಮವು ಆಧಿಕಾರಿಕ ಅಥವಾ ಸರ್ಕಾರಿ ಸತ್ಯವನ್ನು ಹರಿಸುವ ಕಾಲುವೆ ಇಲ್ಲವೇ ಪ್ರತಿಧ್ವನಿ ಎಂದು ಟೀಕಿಸುತ್ತಿದ್ದ ಪಿಲ್ಜರ್…

ಮೂರು ದಿನಗಳ ಹಿಂದೆ ಹೊಸ ವರ್ಷದ ಹೊಸ್ತಿಲಿನಲ್ಲಿ ಜಾನ್ ಪಿಲ್ಜರ್ ಎಂಬ ಮಾನವ ಕಾಳಜಿಯ ವಿರಳ ಪತ್ರಕರ್ತನನ್ನು ಮೃತ್ಯು ನಮ್ಮಿಂದ ಕಿತ್ತುಕೊಂಡಿತು. 84 ವರ್ಷದ ಈತನ ನಿಧನ ಮಾನವೀಯ ಪತ್ರಿಕಾವೃತ್ತಿಗೆ ಉಂಟಾದ ಮಹಾನಷ್ಟ ಎಂದರೆ ಅತಿಶಯೋಕ್ತಿ ಆಗಲಾರದು.

ಜಾನ್ ಪಿಲ್ಜರ್ ಆಸ್ಟ್ರೇಲಿಯಾ ಮೂಲದ ಪತ್ರಕರ್ತ, ಬರೆಹಗಾರ, ವಿದ್ವಾಂಸ ಹಾಗೂ ಸಾಕ್ಷ್ಯಚಿತ್ರಗಳ ತಯಾರಕ. ಬ್ರಿಟಿನ್ನಿನಲ್ಲೇ ಬದುಕಿ ಬಾಳಿದ. ಮಾನವ ಕಾರುಣ್ಯವನ್ನು ವೃತ್ತಿ ಧ್ಯೇಯವನ್ನಾಗಿಸಿಕೊಂಡಿದ್ದ. ಪತ್ರಕರ್ತರು ತಮ್ಮನ್ನು ಕೇವಲ ಸಂದೇಶವಾಹಕರನ್ನಾಗಿ ನೋಡಿದರೆ ಸಾಲದು. ತಾವು ಸಾಗಿಸುವ ಸಂದೇಶದ ಗುಪ್ತಕಾರ್ಯಸೂಚಿಗಳು ಮತ್ತು ಆ ಸಂದೇಶವನ್ನು ಸುತ್ತುವರೆದಿರುವ ಮಿಥ್ಯೆಗಳನ್ನೂ ತಿಳಿದಿರಬೇಕು ಎಂಬ ಮಹತ್ವದ ಮಾತುಗಳನ್ನು ಹೇಳಿದ್ದ.

Advertisements

ವಸಾಹತುಶಾಹಿ ಮತ್ತು ಸಾಮ್ರಾಜ್ಯಶಾಹಿ ಪ್ರಭುತ್ವಗಳ ಪಾಲಿಗೆ ಬಗಲಿನ ಮುಳ್ಳಾಗಿ ಕಾಡಿದ ಜ್ಯೂಲಿಯನ್ ಅಸ್ಸಾಂಜ್ ಅವರನ್ನು ಸಕ್ರಿಯವಾಗಿ ಬೆಂಬಲಿಸಿದ ದಿಟ್ಟ ವ್ಯಕ್ತಿ ಪಿಲ್ಜರ್.

‘ಮುಖ್ಯಧಾರೆ’ ಮಾಧ್ಯಮ ಎಂದು ಕರೆಯಲಾಗುವ ಮಾಧ್ಯಮವು ಆಧಿಕಾರಿಕ ಅಥವಾ ಸರ್ಕಾರಿ ಸತ್ಯವನ್ನು ಹರಿಸುವ ಕಾಲುವೆ ಇಲ್ಲವೇ ಪ್ರತಿಧ್ವನಿ ಎಂದು ಟೀಕಿಸುತ್ತಿದ್ದ ಪಿಲ್ಜರ್. ಮುಖ್ಯಧಾರೆಯ ಪತ್ರಿಕಾವೃತ್ತಿಯು ಜನತೆಯ ಹಿತಕ್ಕಿಂತ ಮಿಗಿಲಾಗಿ ಕಾರ್ಪೊರೇಟ್ ಹಿತಾಸಕ್ತಿಗಳನ್ನೇ ಪ್ರತಿನಿಧಿಸುತ್ತದೆ ಎಂದಿದ್ದ.

ಶೀತಲಯುದ್ಧದ ಅಮೆರಿಕೆಯ ಮೀಡಿಯಾ ಸನ್ನಿವೇಶವನ್ನು ಪಿಲ್ಜರ್ ಮಾತುಗಳಲ್ಲಿ ಆಲಿಸಿ- ರಷ್ಯನ್ ಪತ್ರಕರ್ತರ ತಂಡವೊಂದು ಅಮೆರಿಕೆಯ ಪ್ರವಾಸ ಮಾಡಿತು. ಕಟ್ಟಕಡೆಯ ದಿನ ಈ ತಂಡದ ವಕ್ತಾರನೊಬ್ಬ ಆತಿಥೇಯರ ಸಭೆಯನ್ನು ಉದ್ದೇಶಿಸಿ ಮಾತಾಡಿದ- ನಿಮ್ಮ ಎಲ್ಲ ಟೀವಿ ಮತ್ತು ಸುದ್ದಿಪತ್ರಿಕೆಗಳ ನೋಡಿ ಸೋಜಿಗವೆನಿಸಿತು. ಇವುಗಳೆಲ್ಲದರ ಅಭಿಮತವೂ ಹೆಚ್ಚೂ ಕಡಿಮೆ ಒಂದೇ. ಇಂತಹ ಫಲಿತಾಂಶ ಬರಬೇಕಿದ್ದರೆ ನಮ್ಮ ದೇಶದಲ್ಲಿ ಜನರನ್ನು ಜೈಲಿಗೆ ಹಾಕುತ್ತೇವೆ, ಅವರ ಉಗುರುಗಳನ್ನು ಕೀಳುತ್ತೇವೆ. ಆದರೆ ನೀವುಗಳು ಅಂಥದ್ದೇನನ್ನೂ ಮಾಡುತ್ತಿಲ್ಲ. ಗುಟ್ಟೇನು?

ಕಾಲದೇಶಗಳನ್ನು ಮೀರಿ ಮಾರ್ದನಿಸುವ ಮಾತುಗಳಿವು ಎಂಬುದನ್ನು ಪ್ರಜ್ಞಾವಂತ ಭಾರತೀಯರಿಗಿಂತ ಸ್ಫುಟವಾಗಿ ಬೇರಿನ್ನಾರು ಬಲ್ಲರು ಅಲ್ಲವೇ?

ಯುದ್ಧಗಳನ್ನು ಸೃಷ್ಟಿಸಿ ಪರಸ್ಪರ ಕಾದಾಡಿಸುವಲ್ಲಿ ಮೀಡಿಯಾದ ಪಾತ್ರವನ್ನು ಪರಿಶೀಲಿಸುವ ಪಿಲ್ಜರ್ ಸಾಕ್ಷ್ಯಚಿತ್ರ The War You Don’t See (2010) ಸಾರ್ವಕಾಲಿಕ. ‘ನೀವು ಕಂಡೂ ಕಾಣದ ಸಮರ’ ಎಂಬ ಶೀರ್ಷಿಕೆಯೇ ಅತ್ಯಂತ ಧ್ವನಿಪೂರ್ಣ. ಅಫ್ಘಾನಿಸ್ತಾನ, ಇರಾಕ್ ಯುದ್ಧಗಳು ಮತ್ತು ಇಸ್ರೇಲಿನ ಪ್ಯಾಲೆಸ್ತೀನ್ ಆಕ್ರಮಣದ ಮೇಲೆ ನೋಟ ಹರಿಸುವ ಸಫಲ ಪ್ರಯತ್ನವಿದು. ಒಂದೆಡೆ ಸಿಐಎ ಸಾರ್ವಜನಿಕ ಅಭಿಪ್ರಾಯವನ್ನು ಉತ್ಪಾದಿಸಿದರೆ, ಈ ದಿಸೆಯಲ್ಲಿ ಸರ್ಕಾರಿ ನಿಲುವನ್ನು ಹಿಂಬಾಲಿಸಿ ತಾನೂ ಶಾಮೀಲಾಗುತ್ತದೆ ಮೀಡಿಯಾ. ‘ಪ್ರಾಪಗ್ಯಾಂಡವು (ಪ್ರಚಾರಸಮರ) ಮೀಡಿಯಾವನ್ನು ಅವಲಂಬಿಸುತ್ತದೆ. ದೂರದೇಶಗಳು ಒತ್ತಟ್ಟಿಗಿರಲಿ, ದೇಶದ ಪ್ರಜೆಗಳಾದ ನಿಮ್ಮನ್ನೇ ಠಕ್ಕಿನ ಗುರಿಯಾಗಿಸುತ್ತದೆ’ ಎಂಬ ನಿಜವನ್ನು ಹೇಳುವ ಅದೆಷ್ಟು ಪತ್ರಕರ್ತರು ಕಾಣಸಿಗುತ್ತಾರೆ?

ಸರ್ಕಾರಿ ಆರೋಗ್ಯ ಸೇವೆಗಳ ಮೇಲೆ ಸರ್ಕಾರಗಳು ಸಾರುವ ಗುಪ್ತಸಮರ ಕುರಿತ ಸಾಕ್ಷ್ಯಚಿತ್ರ The Dirty War on the National Health Services (2019). ತೆವಳಿ ತಡವರಿಸಿ ಕದ್ದುಮುಚ್ಚಿ ಈ ಸೇವೆಗಳನ್ನು ಖಾಸಗೀಕರಿಸುವ ಈ ಕ್ರಿಯೆಯು ಹೆಚ್ಚು ಹೆಚ್ಚು ಬಡತನವನ್ನು ಮತ್ತು ಸೂರುರಹಿತರನ್ನು ಸೃಷ್ಟಿಸುತ್ತದೆ. ಆಗ ಸೃಷ್ಟಿಯಾಗುವ ಅಸ್ತವ್ಯಸ್ತ ಸ್ಥಿತಿಯನ್ನು ಮತ್ತಷ್ಟು ‘ಸುಧಾರಣೆ’ಗಳನ್ನು ತರಲು ಉಪಯೋಗಿಸಿಕೊಳ್ಳಲಾಗುತ್ತದೆ ಎಂಬುದು ಪಿಲ್ಜರ್ ಪ್ರತಿಪಾದಿಸುವ ಘೋರ ನಿಷ್ಠುರ ಸತ್ಯ.

ಅಮೆರಿಕೆ, ಆಸ್ಟ್ರೇಲಿಯಾ ಹಾಗೂ ಬ್ರಿಟಿಷ್ ವಿದೇಶಾಂಗ ನೀತಿಯ ಕಟು ವಿಮರ್ಶಕ. ಈ ಮೂರೂ ದೇಶಗಳ ವಿದೇಶಾಂಗ ನೀತಿಯು ಸಾಮ್ರಾಜ್ಯಶಾಹಿ ಮತ್ತು ವಸಾಹತುಶಾಹಿ ಚಾಲಿತ ಎಂಬುದು ಆತನ ಪ್ರತಿಪಾದನೆಯಾಗಿತ್ತು. ತಮ್ಮ ಹುಟ್ಟುದೇಶ ಆಸ್ಟ್ರೇಲಿಯಾ ತನ್ನ ಮೂಲನಿವಾಸಿಗಳನ್ನು ಗುಲಾಮರಾಗಿ ನಡೆಸಿಕೊಂಡ ಜನಾಂಗೀಯ ವರ್ಣಭೇದ ನೀತಿಯನ್ನೂ, ಅದರ ಕ್ರೌರ್ಯವನ್ನೂ ಆತ ಪುರಾವೆಗಳ ಸಹಿತ ಟೀಕಿಸಿದ. The Secret Country: The First Australians Fight Back (1985) and Welcome to Australia (1999) ಮುಂತಾದ ಏಳು ಸಾಕ್ಷ್ಯಚಿತ್ರಗಳನ್ನು ನಿರ್ಮಿಸಿದ. 2013ರಲ್ಲಿ ಇದೇ ವಿಷಯ ಕುರಿತು ಹೊರಬಿದ್ದ ಮೂರನೆಯ ಸಾಕ್ಷ್ಯಚಿತ್ರ Utopia.

‘ಮೂಲನಿವಾಸಿಗಳು ನೆಲೆಸಿರುವ ನೆಲಗಳು ಗಣಿಗಾರಿಕೆ ಕಾರ್ಪೊರೇಷನ್‌‌ಗಳ ಬೋರ್ಡ್ ರೂಮುಗಳ ಬಾಯಿಗಳಲ್ಲಿ ನೀರೂರಿಸುವಂತಹ ಹೇರಳ ಖನಿಜಸಂಪತ್ತಿನ ಸೀಮೆಗಳು ಎಂಬುದು ಬೆರಗುಬಡಿಸುವ ಸತ್ಯ’ ಎನ್ನುತ್ತಾನೆ ಬ್ರಿಟಿಷ್ ಲೇಖಕ ಸಿನೆಮಾ ವಿಮರ್ಶಕ ಪೀಟರ್ ಬ್ರಾಡ್ ಶಾ. ಮಧ್ಯಭಾರತದ ಆದಿವಾಸಿ ಸೀಮೆಗಳ ಸುಡುವಾಸ್ತವ ಕೂಡ ಇದೇ ಆಗಿದೆಯಲ್ಲವೇ?

‘ವಿಷಯ ಮತ್ತು ವಸ್ತುಗಳು ತಮ್ಮಲ್ಲಿ ತಾವೇ ಮಾತಾಡಿಕೊಳ್ಳಲು ಬಿಟ್ಟಾಗ (ಪಿಲ್ಜರ್ ನಡುವೆ ನಿಂತು ಉಪದೇಶ ಮಾಡದೆ ಇದ್ದಾಗ) ಅನ್ಯಾಯಗಳು ಹಸಿ ಗಾಯಗಳಂತೆ ಡವಡವಿಸುತ್ತವೆ’ ಎನ್ನುತ್ತದೆ ಮತ್ತೊಂದು ವಿಮರ್ಶೆ.
ಜಗತ್ತಿನ ಮುಂಚೂಣಿ ಆರ್ಥಿಶಕ್ತಿಯಾಗಿ ಚೀನಾದ ಉದಯವು ಇಳೆಯ ಮೇಲಿನ ಸರ್ವಮಾನವ ವ್ಯವಹಾರಗಳನ್ನು ನಿಯಂತ್ರಿಸಿ ಆಳುವ ಅಮೆರಿಕೆಯ ದೈವೀಕ ಹಕ್ಕುಗಳಿಗೆ ಒದಗಿದ ಗಂಡಾಂತರ ಎಂಬ ವ್ಯಂಗ್ಯವು The Coming War on China (2016) ಸಾಕ್ಷ್ಯಚಿತ್ರದಲ್ಲಿ ಅನುರಣಿಸಿದೆ.

ಪೋಲ್ ಪಾಟ್ ಎಂಬ ತೀವ್ರ ಎಡಪಂಥೀಯ ಆಡಳಿತಗಾರನ ಬಿಗಿಮುಷ್ಠಿಯಲ್ಲಿ ಗಾಯಗೊಂಡ ಕಾಂಬೋಡಿಯಾದ ನರಮೇಧಗಳ ಕುರಿತ ಆತನ ವಿಶೇಷ ವರದಿಗಳು ಮತ್ತು ಸಾಕ್ಷ್ಯಚಿತ್ರ Year Zero: the Silent Death of Cambodia ವಿಶ್ವದ ಗಮನ ಸೆಳೆದಿದ್ದವು. ಸರ್ವಾಧಿಕಾರಿ ಪೋಲ್ ಪಾಟ್‌ನನ್ನು ‘ಏಷ್ಯಾದ ಹಿಟ್ಲರ್’ ಎಂದು ಕರೆದಿದ್ದ ಪಿಲ್ಜರ್. ಪಾಟ್ ಅವಧಿಯ ಕಾಂಬೋಡಿಯನ್ ಸೇನೆಯನ್ನು ನಾಜಿಗಳಿಗೆ ಹೋಲಿಸಿದ್ದ. ಶುದ್ಧತಳಿಯ ರಾಷ್ಟ್ರೀಯ ಜನಾಂಗ ಹೊಂದಬೇಕೆಂಬ ಜನಾಂಗೀಯ ಒತ್ತಾಸೆಗೆ ಅಲ್ಲಿನ ಅಲ್ಪಸಂಖ್ಯಾತರ ನರಮೇಧ ನಡೆಸಲಾಯಿತು. ತನ್ನ ರಾಜಕೀಯ ಎದುರಾಳಿಗಳೂ ಸೇರಿದಂತೆ ಸುಮಾರು 20 ಲಕ್ಷ ಮಂದಿಯ ಹತ್ಯೆ ಮಾಡಿತು.

‘Palestine is Still an Issue’ ಎಂಬ ಆತನ ಮತ್ತೊಂದು ಸಾಕ್ಷ್ಯಚಿತ್ರ 2002ರಲ್ಲೇ ಬಿಡುಗಡೆಯಾಗಿತ್ತು. ಪ್ಯಾಲೆಸ್ತೀನೀ ಜನತೆಗೆ ಐತಿಹಾಸಿಕ ದ್ರೋಹ ಬಗೆಯಲಾಗಿದೆ. ಇಸ್ರೇಲಿನ ಈ ಅಕ್ರಮ ಮತ್ತು ಪಾಶವಿಕ ಆಕ್ರಮಣ ಕೊನೆಗೊಳ್ಳುವ ತನಕ ಯಾರಿಗೂ ಶಾಂತಿ ದಕ್ಕುವುದಿಲ್ಲ, ಇಸ್ರೇಲಿಗಳೂ ಸೇರಿದಂತೆ ಎಂದು ಸಾರಿದ್ದ.

Stealing a Nation (ದೇಶವೊಂದರ ಕಳವು) ಎಂಬ ಸಾಕ್ಷ್ಯಚಿತ್ರ ಹಿಂದೂಮಹಾಸಾಗರದಲ್ಲಿನ ಚಾಗಸ್ ದ್ವೀಪವಾಸಿಗಳನ್ನು ತಮ್ಮ ಹುಟ್ಟು ನೆಲದಿಂದ ಹೊರದಬ್ಬಿ ಬ್ರಿಟನ್ ಮತ್ತು ಅಮೆರಿಕೆ ನಡೆಸಿದ ದೌರ್ಜನ್ಯಗಳ ಕುರಿತದ್ದಾಗಿತ್ತು. The War on Democracy ಅಮೆರಿಕೆಯ ವಿದೇಶಾಂಗ ನೀತಿಯ ಮೇಲೆ ಆತ ನಡೆಸಿದ ನಿರಂತರ ಪ್ರಹಾರವಾಗಿತ್ತು. ದಕ್ಷಿಣ ಅಮೆರಿಕಾ ಎಂಬ ತನ್ನ ಹಿತ್ತಿಲಿನಲ್ಲಿ ಅಮೆರಿಕೆಯು ತನಗೆ ಬೇಡವಾದ ಸರ್ಕಾರಗಳನ್ನು ಉರುಳಿಸಿ, ತನ್ನ ಕೈಗೊಂಬೆ ಸರ್ವಾಧಿಕಾರಿ ದೊಣೆನಾಯಕರನ್ನು ಅಧಿಕಾರದಲ್ಲಿ ಪ್ರತಿಷ್ಠಾಪಿಸುತ್ತಿತ್ತು. ಚಿಲಿಯ ಜನನಾಯಕ ಸಾಲ್ವಡರ್ ಅಲ್ಲೆಂಡೆ ಈ ಕೃತ್ಯಕ್ಕೆ ದೊಡ್ಡ ನಿದರ್ಶನ. ಈತನ ಸರ್ಕಾರವನ್ನು ಕಿತ್ತು ಹಾಕಿ ಜನರಲ್ ಅಗಸ್ಟೋ ಪಿನೋಶೆ ಎಂಬ ಮಿಲಿಟರಿ ಸರ್ವಾಧಿಕಾರಿಯನ್ನು ಅಧಿಕಾರಕ್ಕೆ ತಂದಿತ್ತು. ಇಂತಹ ದುಷ್ಟ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದ ಹಲವು ನಿವೃತ್ತ ಸಿಐಎ ಏಜೆಂಟರನ್ನು ಈ ಸಾಕ್ಷ್ಯಚಿತ್ರಕ್ಕಾಗಿ ಪಿಲ್ಜರ್ ಸಂದರ್ಶಿಸಿದ್ದ. 2002ರಲ್ಲಿ ವೆನಿಜುವೆಲಾದ ಅಧ್ಯಕ್ಷ ಹ್ಯೂಗೋ ಶಾವೆಝ್ ಅವರ ಸರ್ಕಾರವನ್ನು ಉರುಳಿಸುವ ಪ್ರಯತ್ನವೂ ಈ ಚಿತ್ರದಲ್ಲಿ ದಾಖಲಾಯಿತು. ದಕ್ಷಿಣ ಅಮೆರಿಕೆಯ ಉದ್ದಗಲಕ್ಕೆ ಜನಪ್ರಿಯ ಸರ್ಕಾರಗಳು ತಲೆಯೆತ್ತುವುದು ಮತ್ತು ದಕ್ಷಿಣ ಅಮೆರಿಕೆಯ ನಿಸರ್ಗ ಸಂಪತ್ತಿನ ಸಮಾನ ಹಂಚಿಕೆ ಕುರಿತ ಅವರ ವಾದಕ್ಕೆ ಸಾಕ್ಷ್ಯಚಿತ್ರ ಸ್ಪಂದಿಸಿದೆ.

ಜಾನ್ ಪಿಲ್ಜರ್ ನಂತಹ ಪತ್ರಕರ್ತರು ಮತ್ತೆ ಮತ್ತೆ ಸಂಭವಿಸುವ ಜರೂರತ್ತಿದೆ ಜಗತ್ತಿಗೆ.

ಈದಿನ
ಈ ದಿನ ಸಂಪಾದಕೀಯ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

ಈ ದಿನ ಸಂಪಾದಕೀಯ | ಬಿಜೆಪಿ ಅಧ್ಯಕ್ಷರ ನೇಮಕದಲ್ಲಿ ಬಗೆಹರಿಯುವುದೇ ಮೋದಿ-ಆರ್‌ಎಸ್‌ಎಸ್‌ ಕಗ್ಗಂಟು?

ಆರ್‌ಎಸ್‌ಎಸ್‌ ಮತ್ತು ಬಿಜೆಪಿ ನಡುವಿನ ಭಿನ್ನಾಭಿಪ್ರಾಯಗಳು ಯಾವ ರೀತಿಯಲ್ಲಿವೆ ಎಂದರೆ, ನಡ್ಡಾ...

Download Eedina App Android / iOS

X