ಅಪ್ರಾಪ್ತ ಬಾಲಕಿಯ ಮೇಲೆ ವಿವಿಧ ಸಂದರ್ಭಗಳಲ್ಲಿ ಸಾಮೂಹಿಕ ಅತ್ಯಾಚಾರ ಎಸಗಿದ್ದ ಪ್ರಕರಣ ಆಂಧ್ರ ಪ್ರದೇಶದ ವಿಶಾಖಪಟ್ಟಣಂನಲ್ಲಿ ಬೆಳಕಿಗೆ ಬಂದಿದೆ. ಪ್ರಕರಣದಲ್ಲಿ 11 ಮಂದಿ ಕಾಮುಕ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಜಾರ್ಖಂಡ್ ಮೂಲದ 17 ವರ್ಷದ ಬಾಲಕಿ ಡಿಸೆಂಬರ್ 18ರಂದು ಆಂಧ್ರ ಪ್ರದೇಶದ ವಿಶಾಖಪಟ್ಟಣಂನಲ್ಲಿ ನಾಪತ್ತೆಯಾಗಿದ್ದಳು. ಆಕೆಯನ್ನು ಎರಡು ಪ್ರತ್ಯೇಕ ಕಾಮುಕರ ಗುಂಪುಗಳು ಹಲವಾರು ಬಾರಿ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಒಡಿಶಾದಲ್ಲಿ ನಾಲ್ಕು ದಿನಗಳ ನಂತರ ಆಕೆ ಪತ್ತೆಯಾಗಿದ್ದಳು.
ಆಕೆಗೆ ಆಪ್ತನಾಗಿದ್ದ ಜಾರ್ಖಂಡ್ ಮೂಲದ ವಲಸೆ ಕಾರ್ಮಿಕನೊಬ್ಬ ಡಿಸೆಂಬರ್ 17ರಂದು ಬಾಲಕಿಯ ಜನ್ಮದಿನ ಆಚರಿಸುವ ನೆಪದಲ್ಲಿ ತನ್ನ ಮನೆ ಸಮೀಪದ ಕೊಠಡಿಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದ. ಬಳಿಕ ಆರೋಪಿ ತನ್ನ ಸ್ನೇಹಿತನನ್ನು ಕರೆಸಿದ್ದ. ಆತನೂ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ್ದ ಎಂದು ವಿಶಾಖಪಟ್ಟಣಂ ವಲಯ-1 ಉಪ ಪೊಲೀಸ್ ಆಯುಕ್ತ ಕೆ ಶ್ರೀನಿವಾಸ್ ರಾವ್ ತಿಳಿಸಿದ್ದಾರೆ.
ಇದರಿಂದ ಆಘಾತಕ್ಕೆ ಒಳಗಾಗಿದ್ದ ಬಾಲಕಿ ಆತ್ಮಹತ್ಯೆ ಮಾಡಿಕೊಳ್ಳಲು ವಿಶಾಖಪಟ್ಟಣಂ ಆರ್.ಕೆ ಬೀಚ್‌ಗೆ ತೆರಳಿದ್ದಳು. ಅಲ್ಲಿ ಆಕೆಗೆ ಪ್ರವಾಸಿಗರ ಫೋಟೋ ತೆಗೆಯುವ ವ್ಯಕ್ತಿಯೊಬ್ಬ ಪರಿಚಯವಾಗಿದ್ದು, ಸಹಾಯ ಮಾಡುವ ನೆಪದಲ್ಲಿ ಆಕೆಯನ್ನು ಲಾಡ್ಜ್ ಒಂದಕ್ಕೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದ. ನಂತರ, ಬಾಲಕಿಯನ್ನು ಮತ್ತೊಂದು ಕೋಣೆಗೆ ಕರೆದೊಯ್ದಿದ್ದಾನೆ. ಅಲ್ಲಿ ಆತನ ಏಳೆಂಟು ಸ್ನೇಹಿತರು ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ?: ಉತ್ತರ ಪ್ರದೇಶ | ದಲಿತ ಮಹಿಳೆಯನ್ನು ಅತ್ಯಾಚಾರವೆಸಗಿ ಕೊಲೆ ಮಾಡಿದ ಪೊಲೀಸ್
ದೌರ್ಜನ್ಯದಿಂದ ಕುಗ್ಗಿ ಹೋಗಿದ್ದ ಬಾಲಕಿ ಹೇಗೋ ತಪ್ಪಿಸಿಕೊಂಡು ವಿಶಾಖಪಟ್ಟಣಂನಿಂದ ಒಡಿಶಾಗೆ ತೆರಳಿದ್ದಳು. ಬಾಲಕಿ ಕಾಣದಿದ್ದಾಗ ಆಕೆಯ ಪೋಷಕರು ನಾಪತ್ತೆ ದೂರು ದಾಖಲಿಸಿದ್ದರು. ಪೊಲೀಸರು ಹುಡುಕಾಟ ನಡೆಸಿದಾಗ ಬಾಲಕಿ ಒಡಿಶಾದಲ್ಲಿ ಪತ್ತೆಯಾಗಿದ್ದಾಳೆ. ಡಿಸೆಂಬರ್ 25 ರಂದು ಪೊಲೀಸರು ಆಕೆಯನ್ನು ವಿಶಾಖಪಟ್ಟಣಂಗೆ ಕರೆ ತಂದಿದ್ದಾರೆ.
ಡಿಸೆಂಬರ್ 20, 21 ಮತ್ತು 22 ರಂದು ಫೋಟೋಗ್ರಾಫರ್ ಮತ್ತು ಆತನ ಸ್ನೇಹಿತರು ಬಾಲಕಿಯ ಮೇಲೆ ನಿರಂತರ ಅತ್ಯಾಚಾರ ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಡಿಸೆಂಬರ್ 18 ಮತ್ತು 19 ರಂದು ಕೂಡ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆಯೇ ಎಂಬ ಬಗ್ಗೆಯೂ ತನಿಖೆ ನಡೆಸುತ್ತಿರುವುದಾಗಿ ಹೇಳಿದ್ದಾರೆ.
ಪೊಲೀಸರು ಬಾಲಕಿಯ ನಾಪತ್ತೆ ಪ್ರಕರಣವನ್ನು ಅತ್ಯಾಚಾರ (ಐಪಿಸಿ ಸೆಕ್ಷನ್ 376) ಆಗಿ ಮಾರ್ಪಡಿಸಿದ್ದಾರೆ ಮತ್ತು ಲೈಂಗಿಕ ಅಪರಾಧದಿಂದ ಮಕ್ಕಳ ರಕ್ಷಣೆ ಕಾಯಿದೆ (ಪೋಕ್ಸೊ) ಕೂಡ ಸೇರಿಸಿದ್ದಾರೆ ಎಂದು ಉಪ ಪೊಲೀಸ್ ಆಯುಕ್ತ ಕೆ ಶ್ರೀನಿವಾಸ್ ರಾವ್ ತಿಳಿಸಿದ್ದಾರೆ.