ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರೀವಾಲ್ ಮೂರನೇ ಬಾರಿಯೂ ಜಾರಿ ನಿರ್ದೇಶನಾಲಯ ಕಳಿಸಿದ್ದ ಸಮನ್ಸ್‌ಗೆ ಗೈರು ಹಾಜರಾಗಿದ್ದಾರೆ.
ದೆಹಲಿ ಅಬಕಾರಿ ಹಗರಣದಲ್ಲಿ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜನವರಿ 3ರಂದು ಹಾಜರಾಗಲು ಅರವಿಂದ ಕೇಜ್ರೀವಾಲ್ ಅವರಿಗೆ ಇ.ಡಿ ಸಮನ್ಸ್ ನೀಡಿತ್ತು.
ದೆಹಲಿ ಮುಖ್ಯಮಂತ್ರಿ ಇ.ಡಿಗೆ ನೀಡಿದ ಪ್ರತಿಕ್ರಿಯೆಯಲ್ಲಿ, ತನಿಖೆಗೆ ಸಹಕರಿಸಲು ಸಿದ್ದವಿರುವುದಾಗಿ ತಿಳಿಸಿದ್ದು, ಆದರೆ ನೋಟಿಸ್ ನೀಡಿರುವುದು ಕಾನೂನು ಬಾಹಿರವಾಗಿದೆ ಎಂದು ತಿಳಿಸಿದ್ದಾರೆ.
ತನಿಖಾ ಸಂಸ್ಥೆಯು ಉದ್ದೇಶಪೂರ್ವಕವಾಗಿ ನಮ್ಮ ಮುಖ್ಯಮಂತ್ರಿಗಳನ್ನು ಚುನಾವಣಾ ಪ್ರಚಾರದಲ್ಲಿ ಭಾಗವಹಿಸುವುದನ್ನು ತಡೆಯುವುದಕ್ಕಾಗಿ ಬಂಧಿಸುವ ಉದ್ದೇಶ ಹೊಂದಿದೆ. ಕೇಂದ್ರ ಸರ್ಕಾರವು ವಿಪಕ್ಷ ನಾಯಕರನ್ನು ಬಂಧಿಸಲಾಗುತ್ತಿದ್ದು, ಭ್ರಷ್ಟ ಅಧಿಕಾರಿಗಳ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳಲಾಗುತ್ತಿಲ್ಲ ಎಂದು ಎಎಪಿ ದೂರಿದೆ.
ಬಿಜೆಪಿಯೊಂದಿಗೆ ಕೈಜೋಡಿಸಿರುವ ಭ್ರಷ್ಟ ಅಧಿಕಾರಿಗಳ ವಿರುದ್ಧ ತನಿಖಾ ಸಂಸ್ಥೆ ಯಾವುದೇ ಕ್ರಮ ಕೈಗೊಂಡಿಲ್ಲ. ಒಂದು ವೇಳೆ ತನಿಖೆಗೆ ಸಹಕರಿಸಿದರೂ ಬಂಧಿಸುವುದರಲ್ಲಿ ಯಾವುದೇ ಆಶ್ಚರ್ಯವಿಲ್ಲ ಎಂದು ಅಮ್ ಆದ್ಮಿ ಪಕ್ಷ ವಾಗ್ದಾಳಿ ನಡೆಸಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಹೊಸವರ್ಷದ ಹೊಸ್ತಿಲಲ್ಲಿ ನಮ್ಮನ್ನಗಲಿದ ನಿಜಾಯತಿಯ ಪತ್ರಕರ್ತ ಜಾನ್ ಪಿಲ್ಜರ್
ಆದಾಗ್ಯೂ ದೆಹಲಿಯ ರೋಸ್ ಅವೆನ್ಯೂಯಲ್ಲಿರುವ ಎಎಪಿ ಕಚೇರಿಯ ಹೊರಗೆ ಬಿಗಿ ಭದ್ರತೆ ಏರ್ಪಡಿಸಲಾಗಿದೆ.
ಇ.ಡಿ ಕ್ರಮದ ವಿರುದ್ಧ ಕಾಂಗ್ರೆಸ್ ಕೂಡ ಆಕ್ರೋಶ ವ್ಯಕ್ತಪಡಿಸಿದೆ. ಈ ಬಗ್ಗೆ ಮಾತನಾಡಿದ ಕಾಂಗ್ರೆಸ್ ನಾಯಕ ಉದಿತ್ ರಾಜ್, “ಇ.ಡಿಯು ಜಾರ್ಖಂಡ್ ಮುಖ್ಯಮಂತ್ರಿಯ ಸಂಬಂಧಿತರು, ಛತ್ತೀಸ್‌ಗಢ ಮಾಜಿ ಮುಖ್ಯಮಂತ್ರಿ ಭೂಪೇಶ್ ಭಗೇಲ್ ವಿರುದ್ಧ ನೋಟಿಸ್ ಜಾರಿಗೊಳಿಸಿದೆ. ಅರವಿಂದ್ ಕೇಜ್ರೀವಾಲ್ ವಿಪಕ್ಷ ಒಕ್ಕೂಟದ ಭಾಗವಾಗಿದ್ದಾರೆ. ಈ ಹಿನ್ನಲೆಯಲ್ಲಿ ನೋಟಿಸ್ ನೀಡಲಾಗಿದೆ. ಇದೆಲ್ಲವನ್ನು ಗಮನಿಸಿದರೆ ಇ.ಡಿ ಮಾಡಲು ಬೇರೆ ಕೆಲಸವಿಲ್ಲದೆ ವಿಪಕ್ಷಗಳ ನಾಯಕರ ಮೇಲೆ ಒತ್ತಡ ಹೇರುತ್ತಿರುವುದು ನಿಜವೆನಿಸುತ್ತಿದೆ” ಎಂದು ದೂರಿದರು.
ಈ ಬೆಳವಣಿಗೆಯ ಬಗ್ಗೆ ಬಿಜೆಪಿ ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನವಾಲಾ, ಇಂದು ಮತ್ತೊಮ್ಮೆ ಅರವಿಂದ್ ಕೇಜ್ರೀವಾಲ್ ಅವರು ಮೂರನೇ ಸಮನ್ಸ್‌ಗೆ ಗೈರು ಹಾಜರಾಗಿದ್ದಾರೆ. ಇದರಿಂದ ಅವರು ಏನನ್ನೋ ಮುಚ್ಚಿಟ್ಟು ಅಪರಾಧಿ ರೀತಿ ತಲೆತಪ್ಪಿಸಿಕೊಂಡಿದ್ದಾರೆ ಎಂದು ದೂರಿದ್ದಾರೆ.
ಈ ಮೊದಲು ಅರವಿಂದ್ ಕೇಜ್ರೀವಾಲ್ ನವೆಂಬರ್ 2 ಹಾಗೂ ಡಿಸೆಂಬರ್ 21ರಂದು ಇ.ಡಿ ನೀಡಿದ್ದ ಸಮನ್ಸ್‌ಗೆ ಗೈರು ಹಾಜರಾಗಿದ್ದರು.