ಕೇಂದ್ರ ಗೃಹ ಸಚಿವ ಅಮೀತ್ ಷಾ ಅವರು ಭಾರತೀಯ ನ್ಯಾಯ ಸಂಹಿತೆಯಲ್ಲಿ ವಾಹನ ಚಾಲಕರಿಗೆ ʼಹಿಟ್ ಎಂಡ್ ರನ್ʼ ಪ್ರಕರಣದಲ್ಲಿ ಅತ್ಯುಗ್ರ ಶಿಕ್ಷೆ ನಿಗದಿಪಡಿಸಿರುವ ಹೊಸ ಕಾನೂನು ವಿರೋಧಿಸಿ ನಗರದಲ್ಲಿ ಚಾಲಕರ ಸಂಘಟನೆಗಳು ಪ್ರತಿಭಟನೆ ನಡೆಸಿದರು.
ಯಾದಗಿರಿ ನಗರದ ಸರ್ಕಾರಿ ಪದವಿ ಕಾಲೇಜು ಸಮೀಪದ ಹನುಮಾನ ದೇವಸ್ಥಾನದಿಂದ ನೇತಾಜಿ ಸುಭಾಶ್ಚಂದ್ರ ಬೋಸ್ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಚಾಲಕರು, ನಂತರ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಕೇಂದ್ರ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ರಾಷ್ಟ್ರೀಯ ಹೆದ್ದಾರಿಗಳಲ್ಲಿ ಅಪಘಾತ ಸಂಭವಿಸಿದರೆ ಅದಕ್ಕೆ ಸಂಬಂಧಿಸಿದ ಚಾಲಕರಿಗೆ ಕನಿಷ್ಠ 10 ವರ್ಷಗಳವರೆಗೆ ಶಿಕ್ಷೆ ಮತ್ತು 7 ಲಕ್ಷ ರೂ. ದಂಡವನ್ನು ವಿಧಿಸುವ ಹೊಸ ಕಾನೂನು ಜಾರಿಗೊಳಿಸಿದ್ದು ಖಂಡನೀಯ. ಇದರಿಂದ ಚಾಲಕರ ಬದುಕನ್ನೇ ಕಸಿದುಕೊಳ್ಳಲಿದೆ, ಬೇಕೆಂತಲೇ ಯಾರೂ ಅಪಘಾತ ಮಾಡುವುದಿಲ್ಲ ಎಂಬುದನ್ನು ಸರ್ಕಾರ ಅರಿಯಬೇಕೆಂದು ಅಸಮಾನಧಾನ ವ್ಯಕ್ತಪಡಿಸಿದರು.
ಚಾಲಕರು ಉದ್ದೇಶಪೂರ್ವಕವಾಗಿ ಅಪಘಾತಗಳನ್ನು ಸಂಭವಿಸುವಂತೆ ಮಾಡುವುದಿಲ್ಲ. ಆ ಕಾನೂನು ಜಾರಿಗೆ ಬಂದರೆ ವಾಹನ ಚಾಲಕನ ಕುಟುಂಬದವರು ಬೀದಿಪಾಲಾಗುತ್ತಾರೆ. ಯಾವುದೇ ಕಾರಣಕ್ಕೂ ಈ ಕಾನೂನು ಜಾರಿಗೊಳಿಸಬಾರದು. ಒಂದು ವೇಳೆ ಜಾರಿಗೊಳಿಸಿದರೆ ಉಗ್ರ ಹೋರಾಟ ರೂಪಿಸಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.
ರಾಷ್ಟ್ರೀಯ ಹೆದ್ದಾರಿಗಳಲ್ಲಿ ಹೆಚ್ಚಾಗಿ ರೋಡ್ ಬ್ರೇಕರ್ ಗಳನ್ನು ಅಳವಡಿಸಿರುವುದು, ಟೋಲ್ ಸಂಗ್ರಹ ಸ್ಥಳದಿಂದ ಕೆಲವೇ ದೂರದವರೆಗೆ ಸುರಕ್ಷಿತವಾದ ರಸ್ತೆಗಳಿದ್ದು, ಮುಂದಿನ ರಸ್ತೆಗಳು ಸಂಪೂರ್ಣವಾಗಿ ಹದಗೆಟ್ಟ ರಸ್ತೆ, ಸುರಕ್ಷತೆಯ ನಾಮಫಲಕಗಳನ್ನು ಅಳವಡಿಸಿದೆ ಇರುವುದು., ಅಪಘಾತ ನಿಯಂತ್ರಣಕ್ಕೆ ಸಿಸಿ ಕ್ಯಾಮೆರಾ ಅಳವಡಿಸಿದರೆ ಅಪಘಾತಗಳ ಸಂಖ್ಯೆ ಕಡಿಮೆಯಾಗಬಹುದು ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಕನಾಟಕ ರಾಜ್ಯ ಚಾಲಕರ ಪರಿಷತ್ ಅಟೋ ಚಾಲಕರ ಸಂಘದ ಮೂಲಕ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರಿಗೆ ಬರೆದ ಹಕ್ಕೊತ್ತಾಯ ಪತ್ರವನ್ನು ತಹಸೀಲ್ದಾರರಿಗೆ ಸಲ್ಲಿಸಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಸಾವಿತ್ರಿಬಾಯಿ ಫುಲೆ ಜನ್ಮದಿನಕ್ಕೆ ರಾಷ್ಟ್ರೀಯ ರಜೆ ಘೋಷಿಸಿ: ರಮೇಶ ಡಾಕುಳಗಿ
ಪ್ರತಿಭಟನೆಯಲ್ಲಿ ಚಾಲಕರ ಪರಿಷತ್ ಆಟೋ ಚಾಲಕರ ಜಿಲ್ಲಧ್ಯಕ್ಷ ಲಕ್ಷ್ಮಣ ಚವ್ಹಾಣ ಸೇರಿದಂತೆ ಪ್ರಮುಖರಾದ ಶಿವಶರಣಪ್ಪ ಕುಂಬಾರ, ಹಣಮಯ್ಯ ಕಲಾಲ, ಸಾಬಯ್ಯ ತಾಂಡೂರಕರ್, ಈಶ್ವರ ನಾಯಕ, ಮರಗಪ್ಪ ನಾಯಕ, ಹಣಮಂತ ನಾಯಕ, ಮಹೇಶ ನಾಟೇಕಾರ, ಆಶಪ್ಪ ನಾಯಕ, ಹಣಮಂತ ಬಬಲಾದಿ, ಈರಪ್ಪ ಚವ್ಹಾಣ, ಮೋನೇಶ ಮಡಿವಾಳ, ಅಂಬೋಜಿ ರಾವ್, ಮಲ್ಲಯ್ಯ ಮುಷ್ಟೂರು ಹಾಗೂ ಗಿರಿನಾಡು ಚಾಲಕರ ಸಂಘದ ಅಧ್ಯಕ್ಷ ಬಸವರಾಜ ಇಟಗಿ, ಗೌರವಾಧ್ಯಕ್ಷ ಉಮೇಶ ಕೆ.ಮುದ್ನಾಳ ಸೇರಿದಂತೆ ಇತರರಿದ್ದರು.