ರಸ್ತೆ ಅಪಘಾತ ಸಂಭವಿಸಿದ ಬಳಿಕ ಪರಾರಿಯಾಗುವ ಪ್ರಕರಣಗಳಿಗೆ ಸಂಬಂಧಿಸಿದಂತೆ ವಾಹನ ಚಾಲಕನಿಗೆ 10 ವರ್ಷ ಜೈಲು ಶಿಕ್ಷೆ ಹಾಗೂ 10 ಲಕ್ಷ ರೂ. ದಂಡ ವಿಧಿಸುವುದಕ್ಕೆ ಕೇಂದ್ರ ಸರ್ಕಾರ ಜಾರಿಗೆ ತರಲಿರುವ ಹೊಸ ಕಾನೂನು ವಿರೋಧಿಸಿ ಬೀದರ್ ನಲ್ಲಿ ವಾಹನ ಚಾಲಕರ ಒಕ್ಕೂಟದಿಂದ ಪ್ರತಿಭಟನೆ ನಡೆಯಿತು.
ಕರ್ನಾಟಕ ಚಾಲಕರ ಒಕ್ಕೂಟ ಹಾಗೂ ಜಿಲ್ಲಾ ಲಾರಿ ಚಾಲಕರು ಮತ್ತು ಮಜ್ದೂರ್ ಅಸೋಸಿಯೇಷನ್ ಪದಾಧಿಕಾರಿಗಳು ನಗರದ ಗಾಂಧಿ ಗಂಜ್ ದಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ಮೂಲಕ ತೆರಳಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಬರೆದ ಹಕ್ಕೊತ್ತಾಯ ಪತ್ರವನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಿದರು.
“ಕೇಂದ್ರ ಸರ್ಕಾರ ಅವೈಜ್ಞಾನಿಕವಾದ ಕಾನೂನು ಜಾರಿಗೆ ತರಲು ಹೊರಟಿದೆ,ಕಳೆದ 25ರಂದು ಸಂಸತ್ತಿನಲ್ಲಿ ಒಪ್ಪಿಗೆ ಪಡೆದು ರಾಷ್ಟ್ರಪತಿಗಳ ಅಂಕಿತಕ್ಕೆ ಕಳಿಸಲಾಗಿದೆ. ಚಾಲಕ ರಸ್ತೆಯಲ್ಲಿ ಅಪಘಾತ ಮಾಡಿದಂತಹ ಸಂದರ್ಭದಲ್ಲಿ ಅಪಘಾತಕ್ಕೆ ಒಳಗಾದ ವ್ಯಕ್ತಿಯನ್ನು ರಸ್ತೆಯಲ್ಲಿ ಬಿಟ್ಟು ಹೋಗುವ ಹಾಗಿಲ್ಲ, ಸ್ಥಳದಲ್ಲೇ ಇದ್ದು ಆಸ್ಪತ್ರೆಗೆ ಸಾಗಿಸಬೇಕು. ಮಹಜರು ಮಾಡುವ ಸಂದರ್ಭದಲ್ಲಿ ಸ್ಥಳದಲ್ಲಿ ಇರಬೇಕು. ಚಾಲಕನು ಅಲ್ಲಿಂದ ಪರಾರಿಯಾದರೆ ಕಠಿಣ ಶಿಕ್ಷೆ ವಿಧಿಸಬೇಕೆಂಬ ನೂತನ ಕಾನೂನು ಜಾರಿಗೆ ತರುವುದು ಖಂಡನೀಯ” ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
“ಅಪಘಾತ ನಡೆದ ವೇಳೆ ಸ್ಥಳಿಯರು ಮತ್ತು ಸಂಬಂಧಿಕರು ಎಷ್ಟೋ ಚಾಲಕರನ್ನು ಕೊಂದಿರುವ ಉದಾಹರಣೆಗಳಿವೆ. ಹೀಗಾದರೆ ಚಾಲಕರ ಜೀವಕ್ಕೆ ಹೊಣೆಗಾರರು ಯಾರಾಗುತ್ತಾರೆ. ಕೆಂದ್ರ ಸರ್ಕಾರ ಈ ಹೊಣೆಯನ್ನು ಹೊರಲು ಸಾಧ್ಯವೇ. ಕೇಂದ್ರ ಸರ್ಕಾರ ಕೊಲೆಗಡುಕರಿಗೆ ವಿಧಿಸುವಂತಹ ಕಾನೂನನ್ನು ಚಾಲಕರ ಮೇಲೆ ಹೇರಲು ಹೊರಟಿದೆ, ಚಾಲಕರನ್ನು ರಸ್ತೆಯಲ್ಲಿ ಕೊಲ್ಲಿಸುವ ಪ್ರಯತ್ನ ನಡೆಸಿದೆ” ಎಂದು ದೂರಿದರು.
ಈ ಸುದ್ದಿ ಓದಿದ್ದೀರಾ? ಇರಾನ್‌ನಲ್ಲಿ ಬಾಂಬ್ ಸ್ಪೋಟ: 103 ಕ್ಕೂ ಅಧಿಕ ಮಂದಿ ಸಾವು
ಚಾಲಕರ ವಿರುದ್ದ ಜಾರಿಗೆ ತರಲು ಹೊರಟಿದ ಕಾನೂನನ್ನು ರಾಜ್ಯ ಸರ್ಕಾರ ಜಾರಿಗೆ ತರಬಾರದು. ಈಗಾಗಲೇ ಸಾವಿರಾರು ಚಾಲಕರು ಚಾಲಕರು ಕೆಲಸ ಬಿಟ್ಟು ಮನೆಯಲ್ಲೇ ಕೂತಿದ್ದಾರೆ. ಕೇಂದ್ರ ಸರ್ಕಾರದ ವಿರುದ್ಧ ದೇಶವ್ಯಾಪಿ ಪ್ರತಿಭಟನೆಗಳು ನಡೆಯುತ್ತಿವೆ. ರಾಜ್ಯದ ಸಾರಿಗೆ ಸಚಿವರು ಚಾಲಕರಿಗೆ ನ್ಯಾಯ ಕೊಡಿಸಬೇಕೆಂದು ಒತ್ತಾಯಿಸಿದರು.
ವರದಿ ಮಾಹಿತಿ : ರೇವಣಸಿದ್ದ ಹಡಪದ