“ನಮ್ಮ ದೇಶ ಹಿಂದೂ ರಾಷ್ಟ್ರವಾದರೆ ಪಾಕಿಸ್ತಾನ, ಅಫ್ಘಾನಿಸ್ತಾನ ಥರ ಆಗುತ್ತದೆ” ಎಂದು ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ ನಿನ್ನೆ ದಾವಣಗೆರೆಯಲ್ಲಿ ನೀಡಿದ್ದ ಹೇಳಿಕೆಯು ಈಗ ವಿವಾದದ ಸ್ವರೂಪ ಪಡೆದುಕೊಂಡಿದೆ. ಬಿಜೆಪಿ ಸೇರಿದಂತೆ ಸಂಘಪರಿವಾರದ ಮಂದಿ ಹೇಳಿಕೆಯನ್ನು ವಿರೋಧಿಸುತ್ತಿದ್ದಾರೆ.
ಸಿಎಂ ಪುತ್ರ ಯತೀಂದ್ರ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿರುವ ಉಡುಪಿ ಪೇಜಾವರ ಮಠದ ಸ್ವಾಮೀಜಿ, “ಭಾರತವನ್ನು ಹಿಂದೂರಾಷ್ಟ್ರ ಮಾಡಿದರೆ ಪಾಕಿಸ್ತಾನ ಮಾಡಲು ಯಾರೋ ಸಿದ್ಧತೆ ನಡೆಸುತ್ತಿದ್ದಾರೋ ಏನೋ. ಅಂತಹ ಸಿದ್ಧತೆ ಇಲ್ಲಿ ನಡೆಯುತ್ತಿದೆ ಎಂಬುದರ ಮುನ್ಸೂಚನೆ ಯತೀಂದ್ರ ಕೊಡುತ್ತಿದ್ದಾರೆ” ಎಂದು ಉತ್ತರಿಸಿದ್ದಾರೆ.
ವಿಜಯಪುರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡುತ್ತಾ ಆಕ್ಷೇಪ ವ್ಯಕ್ತಪಡಿಸಿರುವ ಅವರು, “ಭಾರತವನ್ನು ಹಿಂದೂರಾಷ್ಟ್ರ ಮಾಡಿದರೆ ಪಾಕಿಸ್ತಾನ ಮಾಡಲು ಯಾರೋ ಸಿದ್ಧತೆ ನಡೆಸುತ್ತಿದ್ದಾರೋ ಏನೋ. ಅಂತಹ ಸಿದ್ಧತೆ ಇಲ್ಲಿ ನಡೆಯುತ್ತಿದೆ ಎಂಬುದರ ಮುನ್ಸೂಚನೆ ಯತೀಂದ್ರ ಕೊಡುತ್ತಿದ್ದಾರೆ. ಅವರ ಹೇಳಿಕೆ ಸರಿಯಲ್ಲ. ಭಾರತ ಹಿಂದಿನಿಂದಲೂ ಹಿಂದೂ ರಾಷ್ಟ್ರವಾಗಿಯೇ ಇದ್ದದ್ದು. ಅದೇ ಹೊತ್ತಿಗೇನೇ ಜಾತಿ ಧರ್ಮ ಪಂಗಡಗಳಿಗೆ ಎಂದು ಮೀಸಲಿರಿಸದೆ ಎಲ್ಲರನ್ನೂ ಅಪ್ಪಿ, ಒಪ್ಪಿಕೊಂಡ ದೇಶ” ಎಂದು ಹೇಳಿಕೆ ನೀಡಿದ್ದಾರೆ.
ಅಯೋಧ್ಯೆಯಲ್ಲಿ ಮತ್ತೆ ಗೋಧ್ರಾದಂತಹ ಘಟನೆ ನಡೆಯಬಹುದು ಎಂಬ ಕಾಂಗ್ರೆಸ್ ನಾಯಕ ಬಿಕೆ ಹರಿಪ್ರಸಾದ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, “ಅಂತಹ ಘಟನೆ ನಡೆಯುವ ಬಗ್ಗೆ ಸುಳಿವು ಇದ್ದರೆ ಪೊಲೀಸ್ ಇಲಾಖೆಗೆ ಹೋಗಿ ಯಾಕೆ ಹೇಳುತ್ತಿಲ್ಲ? ಇವರು ಯಾರನ್ನು ರಕ್ಷಣೆ ಮಾಡುತ್ತಿದ್ದಾರೆ” ಎಂದು ಪ್ರಶ್ನಿಸಿದರು.
ರಾಮಮಂದಿರ ಉದ್ಘಾಟನೆಗೆ ನಮಗೆ ಆಹ್ವಾನ ಬಂದಿಲ್ಲ ಎಂಬ ವಿರೋಧ ಪಕ್ಷಗಳ ಹೇಳಿಕೆಗೆ ಪ್ರತಿಕ್ರಿಯಿಸಿದ ಪೇಜಾವರ ಸ್ವಾಮೀಜಿ, “ಇಂಥ ನಡವಳಿಕೆ ಸರಿಯಲ್ಲ. ರಾಮ ರಾಜಕೀಯ ವಸ್ತುವಾಗಿಲ್ಲ. ಶ್ರೀರಾಮ ಮಂದಿರ ವ್ಯಾಜ್ಯ ಹುಟ್ಟಿಕೊಂಡಿದ್ದು 500 ವರ್ಷಗಳ ಹಿಂದೆ. ಸ್ವಾತಂತ್ರ್ಯ ಬಂದು 75 ವರ್ಷಗಳಾಯಿತು. ದೇಶದಲ್ಲಿ ಅತಿ ಹೆಚ್ಚು ವರ್ಷಗಳ ಕಾಲ ಸರ್ಕಾರ ಮಾಡಿದ್ದು ಯಾರು” ಎಂದು ಇದೇ ವೇಳೆ ಪರೋಕ್ಷವಾಗಿ ಕಾಂಗ್ರೆಸ್ ಅನ್ನು ಪ್ರಶ್ನಿಸಿದರು.
ಯತೀಂದ್ರ ಸಿದ್ದರಾಮಯ್ಯ ಹೇಳಿದ್ದೇನು?
ದಾವಣಗೆರೆಯ ರುದ್ರನಕಟ್ಟೆ ಗ್ರಾಮದಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಅವರು, “ನಮ್ಮ ದೇಶ ಹಿಂದೂ ರಾಷ್ಟ್ರವಾದರೆ ಪಾಕಿಸ್ತಾನ, ಅಫ್ಘಾನಿಸ್ತಾನ ಥರನೇ ಆಗುತ್ತದೆ. ಅಲ್ಲಿ ಧರ್ಮದ ಹೆಸರಲ್ಲಿ ಸರ್ವಾಧಿಕಾರ ಮಾಡಿ ದಿವಾಳಿಯಾಗಿವೆ. ದೇಶ ಜಾತ್ಯತೀತ ತತ್ವ ಬಿಟ್ಟು ಧರ್ಮದ ಹಿಂದೆ ಹೋದರೆ ಅಭಿವೃದ್ಧಿ ಕಾಣಲ್ಲ. ನಮ್ಮ ದೇಶ ಹಿಂದೂ ರಾಷ್ಟ್ರ ಆಗಬಾರದು. ಹಿಂದೂ ರಾಷ್ಟ್ರವಾದರೆ ಅದಕ್ಕಿಂತ ದೊಡ್ಡ ಅಪಾಯ ಮತ್ತೊಂದಿಲ್ಲ. ಇದನ್ನು ಅಂಬೇಡ್ಕರ್ ಅವರೇ ಹೇಳಿದ್ದಾರೆ” ಎಂದಿದ್ದರು.
“ಇವತ್ತು ಜಾತ್ಯತೀತ ತತ್ವಕ್ಕೆ ಅಪಾಯ ಬಂದಿದೆ. ಬಿಜೆಪಿ ಹಾಗೂ ಆರ್‌ಎಸ್‌ಎಸ್‌ನಿಂದ ಅಪಾಯ ಶುರುವಾಗಿದೆ. ಬಿಜೆಪಿಯ ಅಂಗ ಸಂಘಟನೆಗಳು ಹಿಂದೂ ದೇಶ ಮಾಡೋಕೆ ಹೊರಟಿದ್ದಾರೆ. ಇದಕ್ಕೆ ಅವಕಾಶ ಮಾಡಿಕೊಟ್ಟರೆ ನಮ್ಮ ದೇಶ ಕೂಡ ಪಾಕಿಸ್ತಾನ ಅಪ್ಘಾನಿಸ್ತಾನ ಆಗುತ್ತದೆ. ಧರ್ಮದ ಮೇಲೆ ರಾಜಕೀಯ ಮಾಡುವ ಪಕ್ಷಗಳ ಬಗ್ಗೆ ನಾವು ಹುಷಾರಾಗಿರಬೇಕು. ಧರ್ಮದಿಂದ ಹಿಂದುಳಿದವರು ಮೇಲೇಳೋಕೆ ಸಾಧ್ಯವಾಗುತ್ತಿಲ್ಲ. ಇತಿಹಾಸವನ್ನು ನೋಡಿ ನಾವು ಪಾಠ ಕಲಿಯಬೇಕು. ಇತಿಹಾಸ ನೋಡಿ ನಾವು ದೇಶವನ್ನು ಕಟ್ಟಬೇಕು. ದೇಶಕ್ಕೆ ಉಜ್ವಲ ಭವಿಷ್ಯವಿದೆ” ಎಂದು ಸಿಎಂ ಪುತ್ರ ಯತೀಂದ್ರ ಹೇಳಿಕೆ ನೀಡಿದ್ದರು.