‘ಇನ್ನು ಮುಂದೆ ನಾನು ತಪ್ಪು ಮಾಡುವುದಿಲ್ಲ ಎಂದು ತಂದೆಗೆ ಕರೆ ಮಾಡಿ ತಿಳಿಸಿ, ಎದೆ ಭಾಗಕ್ಕೆ ಗುಂಡು ಹಾರಿಸಿಕೊಂಡು ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನ ಉತ್ತರ ತಾಲೂಕಿನ ಭವಾನಿನಗರದಲ್ಲಿ ನಡೆದಿದೆ.
ವಿಶು ಉತ್ತಪ್ಪ (19) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ. ಈತ ಬೆಂಗಳೂರಿನ ಕಾಲೇಜಿನೊಂದರಲ್ಲಿ ಬಿಇ ಪ್ರಥಮ ವರ್ಷ ವ್ಯಾಸಂಗ ಮಾಡುತ್ತಿದ್ದನು. ಈತನ ತಂದೆ ತಮ್ಮಯ್ಯ, ಮೂಲತಃ ಕೊಡಗಿನವರು.
ತಮ್ಮಯ್ಯ ಅವರು ಬೆಂಗಳೂರಿನ ನೈಸ್ ಸಂಸ್ಥೆಯಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದಾರೆ. ಕಳೆದ 15 ವರ್ಷದಿಂದ ಮಾದನಾಯಕನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಭವಾನಿನಗರದಲ್ಲಿ ಕುಟುಂಬ ಸಮೇತ ವಾಸವಿದ್ದರು. ತಂದೆ ರೇಷನ್ ತರಲು ಹೋದಾಗ ವಿಶು ತಂದೆಯ ಗನ್ನಿಂದ ಎದೆಗೆ ಫೈರ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಇನ್ನು ತಾನು ಗುಂಡು ಹಾರಿಸಿಕೊಂಡ ವಿಷಯವನ್ನು ತಾನೇ ತನ್ನ ತಂದೆಗೆ ಕರೆ ಮಾಡಿ ವಿಶು ಉತ್ತಪ್ಪ ತಿಳಿಸಿದ್ದು, ‘ಇನ್ನುಮುಂದೆ ತಾನು ತಪ್ಪು ಮಾಡುವುದಿಲ್ಲ’ ಎಂಬ ಮಾತನ್ನೂ ಸಹ ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಸ್ಟಾರ್ ಹೋಟೆಲ್ ಹೆಸರು ಹೇಳಿ ಹಣ ಲಪಟಾಯಿಸಿದ ಕಿಡಿಗೇಡಿಗಳು
ಗಾಬರಿಗೊಂಡ ತಂದೆ ಮನೆಗೆ ಬಂದು ನೋಡಿದಾಗ ಮಗ ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ಕಂಡಿದ್ದಾರೆ. ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ.
ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಘಟನೆ ನಡೆದ ಸ್ಥಳಕ್ಕೆ ಪೊಲೀಸರು ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ.
ನೆನಪಿಡಿ: ಸಮಸ್ಯೆಗಳಿಗೆ ಆತ್ಮಹತ್ಯೆ ಪರಿಹಾರವಲ್ಲ… ಆತ್ಮಹತ್ಯೆಗಳ ಕುರಿತು ಚರ್ಚಿಸುವುದು ಕೂಡ ಕೆಲವರಿಗೆ ಪ್ರಚೋದನೆ ನೀಡಬಹುದು. ಆದಾಗ್ಯೂ, ಆತ್ಮಹತ್ಯೆಗಳನ್ನು ತಡೆಯಬಹುದು. ತುರ್ತು ಪರಿಸ್ಥಿತಿಯಿದ್ದರೆ ಕರೆ ಮೂಲಕ ವೈದ್ಯರನ್ನು ಸಂಪರ್ಕಿಸಿ. ಬೆಂಗಳೂರು ಸಹಾಯವಾಣಿ 080-25497777, ಬೆಳಗ್ಗೆ 10ರಿಂದ ಸಂಜೆ 8ರವರೆಗೆ, ಆರೋಗ್ಯ ಸಹಾಯವಾಣಿ 104