ರಸ್ತೆ ಬದಿ ವ್ಯಾಪಾರ ಮಾಡುತ್ತಿದ್ದವನ ಬಳಿ ಇದ್ದ ರೋಲ್ಡ್‌ಗೋಲ್ಡ್ ಸರ ಹಾಗೂ ನಗದು ಹಣ ಕಸಿದುಕೊಂಡು ಪರಾರಿಯಾಗುತ್ತಿದ್ದ ಆರೋಪಿಗಳನ್ನು ಮಾಗಡಿ ರಸ್ತೆ ಸಂಚಾರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ನೂರುಲ್ಲಾ ಎಂಬಾತನಿಂದ ಸರ ಹಾಗೂ ನಗದು ಕಳ್ಳತನ ಮಾಡಿ ಪರಾರಿಯಾಗುತ್ತಿದ್ದ ಚಾಮುಂಡಿ ನಗರ ನಿವಾಸಿಗಳಾದ ವಿಜಯ್ ಮತ್ತು ಸೆಂಥಿಲ್‌ರನ್ನು ಪೊಲೀಸರು ಬಂಧಿಸಿದ್ದಾರೆ.
ಉತ್ತರ ಭಾರತ ಮೂಲದ ವ್ಯಾಪಾರಿ ನೂರುಲ್ಲಾ ರಸ್ತೆ ಬದಿಯಲ್ಲಿ ಬ್ಯಾಗ್ ಮಾರಾಟ ಮಾಡುತ್ತಿದ್ದನು. ಎಂದಿನಂತೆ, ಮಂಗಳವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ರಾಜಾಜಿನಗರದ 6ನೇ ಬ್ಲಾಕ್‌ನಲ್ಲಿ ಬ್ಯಾಗ್ ಮಾರಾಟ ಮಾಡುತ್ತಿದ್ದನು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ‘ಇನ್ನು ಮುಂದೆ ತಪ್ಪು ಮಾಡುವುದಿಲ್ಲ’ ಎಂದು ಹೇಳಿ ಗುಂಡು ಹಾರಿಸಿಕೊಂಡು ವಿದ್ಯಾರ್ಥಿ ಆತ್ಮಹತ್ಯೆ
ಈ ವೇಳೆ, ಆಟೋದಲ್ಲಿ ಬಂದ ಆರೋಪಿಗಳು ನೂರುಲ್ಲಾ ಮೇಲೆ ಹಲ್ಲೆ ಮಾಡಿ, ಆತನ ಕುತ್ತಿಗೆಯಲ್ಲಿದ್ದ ರೋಲ್ಡ್‌ಗೋಲ್ಡ್ ಸರ, ಬೆಳ್ಳಿಯ ಸರ ಹಾಗೂ ₹500 ನಗದು ಹಣವನ್ನು ಕಿತ್ತುಕೊಂಡು ಆಟೋದಲ್ಲಿ ಪರಾರಿಯಾಗುತ್ತಿದ್ದರು. ಇದನ್ನು ಕಂಡ ಸ್ಥಳೀಯರು ಕೂಡಲೇ, ಸ್ವಲ್ಪ ದೂರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮಾಗಡಿ ರಸ್ತೆ ಸಂಚಾರ ಠಾಣೆಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಪೊಲೀಸರು ಆಟೋವನ್ನು ತಡೆ ಹಿಡಿದಿದ್ದರು.
ಆರೋಪಿ ವಿಜಯ್ ತನ್ನ ಬಳಿಯಿದ್ದ ಸರ ಹಾಗೂ ಹಣವನ್ನು ಸೆಂಥಿಲ್‌ಗೆ ನೀಡಿ ಪರಾರಿಯಾಗುವಂತೆ ಹೇಳಿದ್ದನು. ಅದರಂತೆ ಸೆಂಥಿಲ್ ತಪ್ಪಿಸಿಕೊಳ್ಳಲು ಮುಂದಾಗಿದ್ದನು. ಓಡಿ ಹೋಗುತ್ತಿದ್ದ ಸೆಂಥಿಲ್‌ನನ್ನು ಪೊಲೀಸರು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಅಲ್ಲದೇ, ಆರೋಪಿ ವಿಜಯ್ ವಿರುದ್ಧ ನಗರದ ನಾನಾ ಪೊಲೀಸ್ ಠಾಣೆಗಳಲ್ಲಿ ಕಳವು, ಹಲ್ಲೆ, ದರೋಡೆ ಪ್ರಕರಣಗಳು ದಾಖಲಾಗಿವೆ. ಆತನ ಮೇಲೆ ರೌಡಿಶೀಟ್ ತೆರೆಯಲಾಗಿದೆ ಎಂದು ತಿಳಿದುಬಂದಿದೆ.