ದೇಶದಲ್ಲಿ ಸಾವಿತ್ರಿ ಬಾಯಿ ಫುಲೆ ಅಂತವರು ಮಹಿಳಾ ಶಿಕ್ಷಣಕ್ಕಾಗಿ ಹೋರಾಟ ಮಾಡದಿದ್ದರೆ, ದೇಶದಲ್ಲಿ ಪರಿಶಿಷ್ಟ ವರ್ಗದವರಿಗೆ, ಹಿಂದುಳಿದವರಿಗೆ ಅಕ್ಷರ ದಕ್ಕಲು ಸಾಧ್ಯವಾಗುತ್ತಿರಲಿಲ್ಲ ಎಂದು ಮಹಿಳಾ ಸಂಘಟನೆ ರಾಜ್ಯಾಧ್ಯಕ್ಷೆ ಮೀನಾಕ್ಷಿ ಬಾಳೆ ಹೇಳಿದರು.
ವಿಜಯಪುರ ನಗರದಲ್ಲಿ ಅಖಿಲ ಭಾರತ ಜನವಾದ ಮಹಿಳಾ ಸಂಘಟನೆಯಿಂದ ಬುಧವಾರ ಆಯೋಜಿಸಿದ ಸಾವಿತ್ರಿಬಾಯಿ ಜಯಂತಿ ಹಾಗೂ ಫಾತಿಮಾ ಶೇಕ್ ಸ್ಮರಣೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸಾವಿತ್ರಿಬಾಯಿ ಪುಲೆ ಅವರ ಹೆಗಲಿಗೆ ಹೆಗಲು ಕೊಟ್ಟು ದುಡಿದವರಲ್ಲಿ ಫಾತಿಮಾ ಶೇಕ್ ಪ್ರಮುಖರು. ಮುಸ್ಲಿಂ ವಿರೋಧಿ ವಿಷವನ್ನು ಹರಡುತ್ತಿರುವ ಕೋಮುವಾದಿಗಳು ಫಾತಿಮಾ ಶೇಕ್‌ರಂತ ಮಹಿಳೆಯರ ತ್ಯಾಗ ಪರಿಶ್ರಮಗಳನ್ನು ಅರ್ಥಮಾಡಿಕೊಳ್ಳಬೇಕು ಎಂದರು.
ಸಂಘಟನೆಯ ರಾಜ್ಯ ಘಟಕದ ಉಪಾಧ್ಯಕ್ಷ ಇಸಾಬೇಗಂ ಮಾತನಾಡಿ, ಕೇಂದ್ರ ಸರ್ಕಾರ ತಾನು ಮಹಿಳಾಪರ ಎಂದು ಹೇಳಿಕೊಳ್ಳುತ್ತದೆ. ಆದರೆ, ಮಣಿಪುರದಲ್ಲಿ ಎರಡು ಸಮುದಾಯಗಳ ಘರ್ಷಣೆಯಲ್ಲಿ ಮಹಿಳೆಯರನ್ನು ಬೆತ್ತಲೆ ಮೆರವಣಿಗೆ ಮಾಡಿದ ದುರ್ಘಟನೆ ನೋಡಿಯು ಮೌನ ವಹಿಸುತ್ತದೆ. ಅತ್ಯಾಚಾರಿಗಳನ್ನು ಬಿಡುಗಡೆ ಮಾಡುತ್ತದೆ ಎಂದು ಆರೋಪಿಸಿದರು.
ರಾಜ್ಯ ಸಮಿತಿ ಕಾರ್ಯದರ್ಶಿ ದೇವಿ ಮಾತನಾಡಿ, ದೇಶದಲ್ಲಿ ಬಹುಸಂಖ್ಯಾತರ ಕೋಮುವಾದ ಮತ್ತು ಅಲ್ಪಸಂಖ್ಯಾತರ ಭಯೋತ್ಪಾದನೆ ಹೆಚ್ಚಾದಂತೆ ಎಲ್ಲಾ ಧರ್ಮಿಯ ಮಹಿಳೆಯರು ಸಂಕಟಕ್ಕೆ ಸಿಲುಕುತ್ತಾರೆ. ಕಲ್ಲಡ್ಕ ಪ್ರಭಾಕರ ಭಟ್ಟನಂತವರು ಮುಸ್ಲಿಂ ಮಹಿಳೆಯರ ಬಗೆಗೆ ಕೀಳಾಗಿ ಮಾತಾಡಿ ಹೊಲಸು ರಾಜಕಾರಣ ಮಾಡುತ್ತಿದ್ದಾರೆ. ಇಂಥವರನ್ನು ಕಠಿಣ ಶಿಕ್ಷೆಗೆ ಗುರಿ ಪಡಿಸಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಸೂರ್ಯಕಾ ರಜಪೂತ್ ಭಾರತಿವಾಲಿ, ಜಿಲ್ಲಾ ಕಾರ್ಯದರ್ಶಿ ಅನುಸೂಯ ಹಜಾರೆ ಇದ್ದರು.