ಮಕ್ಕಳು ಹೂವು ಕಿತ್ತರು ಎಂಬ ಕಾರಣಕ್ಕೆ ಜಮೀನಿನ ಮಾಲೀಕ ಆಂಗನವಾಡಿ ಸಹಾಯಕಿ ಸುಗಂಧಾ ಗಜನಾನ ಮೋರೆಯವರ ಮೂಗು ಕೊಯ್ದಿರುವ ಘಟನೆ ಬೆಳಗಾವಿಯ ಬಸುರ್ತೆಯಲ್ಲಿ ನಡೆದಿದೆ. ದುರ್ಘಟನೆಯಲ್ಲಿ ದೌರ್ಜನ್ಯಕೊಳಗಾಗಿರುವ ಸಹಾಯಕಿ ಜೀವನ್ಮರನದ ಹೋರಾಟ ನಡೆಸುತ್ತಿದ್ದಾರೆ. ಅವರ ಚಿಕಿತ್ಸೆಗಾಗಿ ಸರ್ಕಾರ ಮತ್ತು ಸಂಘಸಂಸ್ಥೆಗಳು ನೆರವು ನೀಡಬೇಕೆಂದು ಅವರ ಕುಟುಂಬಸ್ಥರು ಅಂಗಲಾಚಿದ್ದಾರೆ.
ಬಸುರ್ತೆ ಗ್ರಾಮದಲ್ಲಿ ಸೋಮವಾರ ಅಂಗನವಾಡಿ ಮಕ್ಕಳು ತಮ್ಮ ಮನೆಯ ಆವರಣದಲ್ಲಿ ಹೂವುಗಳನ್ನು ಕಿತ್ತಿದ್ದಾರೆ ಎಂಬ ಕಾರಣಕ್ಕೆ ಮನೆಯ ಮಾಲಿಕ ಕಲ್ಯಾಣಿ ಮೋರೆ ಎಂಬಾತ ಮಕ್ಕಳನ್ನು ಹೊಡೆಯಲು ಹೋಗಿದ್ದರು. ಆ ವೇಳೆ, ಅಂಡನವಾಡಿ ಸಹಾಯಕಿ ಸುಗಂಧಾ ಅವರು ಮಾಲೀಕನನ್ನು ತಡೆದಿದ್ದರು. ಇದರಿಂದ ವಿಚಲಿತನಾದ ದುಷ್ಟ ಕುಲ್ಯಾಣಿ ಮೊರೆ ಕುಡುಗೋಲಿನಿಂದ ಆಕೆಯ ಮೂಗನ್ನು ಕೊಯ್ದಿದ್ದನು. ಘಟನೆಯಲ್ಲಿ ಗಂಭೀರ ಗಾಯಗೊಂಡ ಸುಗಂಧಾ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೂಗು ಕೊಯ್ದಿರುವುದರಿಂದ ಶ್ವಾಸನಾಳಕ್ಕೆ ರಕ್ತ ಹೋಗಿದ್ದು, ಆಕೆ ಸಾವು ಬದುಕಿನ ಮಧ್ಯೆ ಹೊರಾಡುತ್ತಿದ್ದಾರೆ. ಆಕೆಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಚಿಕಿತ್ಸೆ ಮತ್ತು ಆಸ್ಪತ್ರೆ ವೆಚ್ಚದ ಬಗ್ಗೆ ಈದಿನ.ಕಾಮ್ ಜೊತೆ ಮಾತನಾಡಿದ ಸಂತ್ರಸ್ತೆಯ ಸಹೋದರಿ ಯಲ್ಲು ಪಾಟಿಲ್, “ನಾವು ಬಡವರು. ದುಡಿಯದಿದ್ದರೆ ಹೊಟ್ಟೆ ತುಂಬುವದಿಲ್ಲ. ಅಂಗನವಾಡಿ ಸಹಾಕಿಯಾಗಿ ಕೆಲಸ ಮಾಡುತ್ತಿರುವ ನಮ್ಮ ಸಹೋದರಿಯ ದುಡಿಮೆಯಿಂದಲೇ ಇಡಿ ಕುಟುಂಬ ಬದುಕುತ್ತಿದೆ. ಒಂದು ವೇಳೆ ಅವರು ಅಂಗನವಾಡಿಗೆ ಹೋಗದಿದ್ದರೆ ಜೀವನ ನಡೆಯುವದಿಲ್ಲ” ಎಂದಿದ್ದಾರೆ.
“ಸುಗಂಧಾ ಅವರ ಪತಿಗೆ ಮಾತು ಬರುವದಿಲ್ಲ. ನಮ್ಮ ಬದುಕು ತೊಂದರೆಯಲ್ಲಿದೆ. ಚಿಕಿತ್ಸೆ ನೀಡುತ್ತಿರುವ ವೈದ್ಯರು ಬದುಕುವುದು ಕಷ್ಟವಿದೆ, ಬದುಕಿಸಲು ಪ್ರಯತ್ನ ಮಾಡುವುದಾಗಿ ಹೇಳಿದ್ದಾರೆ. ನಮ್ಮಂತಹ ಬಡವರು ಬದಕುವುದು ಹೇಗೆ? ನಮ್ಮ ಸಹೋದರಿಯ ಮೇಲೆ ಹಲ್ಲೆ ಮಾಡಿರುವ ಆರೋಪಿಗೆ ಶಿಕ್ಷೆಯಾಗಬೇಕು ಮತ್ತು ನಮ್ಮ ಬಡ ಕುಟುಂಬಕ್ಕೆ ಸರ್ಕಾರ ಮತ್ತು ಸಂಘಸಂಸ್ಥೆಗಳು ಸಹಾಯ ಮಾಡಬೇಕು” ಎಂದು ಕಣ್ಣಿರು ಹಾಕಿದರು.
ಅಂಗನವಾಡಿಯ ಶಿಕ್ಷಕಿ ಮೀರಾ ಬಾಲಕೃಷ್ಣ ಮೋರೆ ಮಾತನಾಡಿ, “ನಾನು ಮಕ್ಕಳನ್ನು ಆಟವಾಡಿಸುತ್ತಿದ್ದಾಗ, ಕೆಲವು ಮಕ್ಕಳನ್ನು ಸುಗಂಧಾ ಶೌಚಾಲಯಕ್ಕೆ ಕರೆದುಕೊಂಡು ಹೋಗಿದ್ದರು. ಆ ಮಕ್ಕಳು 2 ಹೂವುಗಳನ್ನು ಕಿತ್ತಿದ್ದಾರೆ. ಕಾರಣಕ್ಕೆ ಮಾಲೀಕ ಮಕ್ಕಳು ಮತ್ತು ಆಕೆಯ ಮೇಲೆ ಹಲ್ಲೆ ಮಾಡಿ, ಆಕೆಯ ಮೂಗು ಕೊಯ್ದಿದ್ದಾನೆ. ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯಲು ಆಂಬುಲೆನ್ಸ್ ಕೂಡ ಸಿಗಲಿಲ್ಲ. ಹಾಲಿನ ವಾಹನದಲ್ಲಿ ಆಸ್ಪತ್ರೆಗೆ ಕರೆತಂದು ಸೇರಿಸಿದ್ದೇವೆ. ಸಂತ್ರಸ್ತೆಯ ಕುಟುಂಬದ ಬಳಿ ಹಣವಿಲ್ಲ. ಆಸ್ಪತ್ರೆ ಖರ್ಚಿಗೆ ಒಂದಷ್ಟು ಹಣವನ್ನು ಬೇರೆಯವರಿಂದ ಹೊಂದಿಸಿ ಕೊಟ್ಟಿದ್ದೇವೆ. ಅವರಿಗೆ ಹಣದ ನೆರವಿನ ಅಗತ್ಯವಿದೆ” ಎಂದು ಹೇಳಿದ್ದಾರೆ.
ಸಿಐಟಿಯು ತಾಲೂಕು ಅಧ್ಯಕ್ಷೆ ಮಂದಾ ನೇವಗಿ ಈದಿನ.ಕಾಮ್ ಜೊತೆ ಮಾತನಾಡಿ, “ಅಂಗನವಾಡಿ ಸಹಾಯಕಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಜಿಲ್ಲೆಯಲ್ಲೇ ಈ ರೀತಿ ಪದೇ ಪದೇ ಮಹಿಳೆಯರ ಮೇಲೆ ಹಲ್ಲೆಗಳು ನಡೆಯುತ್ತಿವೆ. ಮಹಿಳೆಯರಿಗೆ ರಕ್ಷಣೆ ಇಲ್ಲದಂತಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ?: ಬೆಳಗಾವಿಯಲ್ಲಿ ಮತ್ತೊಂದು ಅಮಾನುಷ ಘಟನೆ; ಮಹಿಳೆಯನ್ನು ಅರೆಬೆತ್ತಲೆಗೊಳಿಸಿ ಹಲ್ಲೆ – ಆರೋಪ
“ಅಂಗವಾಡಿ ಇಲಾಖೆಯ ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿದ್ದಾರೆ ಹಾಗೂ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪೋನಿನ ಮೂಲಕ ವಿಷಯ ತಿಳಿದುಕೊಂಡಿದ್ದಾರೆ. ಅದು ವೈಯಕ್ತಿಕ ಜಗಳ ಎಂದಿದ್ದಾರೆ. ಆದರೆ, ಇದು ವೈಯಕ್ತಿಕ ಜಗಳ ಹೇಗೆ ಆಗುತ್ತದೆ. ಅಂಗನವಾಡಿಯಲ್ಲಿ ಇದ್ದಾಗ ಮಕ್ಕಳ ಕಾರಣಕ್ಕೆ ಜಗಳ ನಡೆದು ದೌರ್ಜನ್ಯ ನಡೆದಿದೆ/ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಆಸ್ಪತ್ರೆಗೆ ಭೇಟಿ ನೀಡಿ ಆಸ್ಪತ್ರೆಯ ಸಂಪೂರ್ಣ ಖರ್ಚನ್ನು ಭರಿಸಬೇಕು. ಮಹಿಳೆಯ ಕುಟುಂಬಕ್ಕೆ ಪರಿಹಾರ ನೀಡಬೇಕು” ಎಂದು ಆಗ್ರಹಿಸಿದರು. ಘಟನೆ ಬಗ್ಗೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದೇವೆ ಎಂದು ತಿಳಿಸಿದರು.
ಸಂತ್ರಸ್ತೆಗೆ ನೆರವು ನೀಡಬಯಸುವವರು “ಹೆಸರು:ಗಜಾನನ ನಾರಾಯಣ ಮೋರೆ, A/C NO:89050231798, IFSC CODE – KVGB0002212, ಕರ್ನಾಟಕ ಗ್ರಾಮಿಣ ವಿಕಾಸ ಗ್ರಾಮಿಣ ಬ್ಯಾಂಕ್” ಖಾತೆಗೆ ಹಣ ಜಮೆ ಮಾಡಬಹುದು ಎಂದು ಕುಟುಂಬಸ್ಥರು ಮನವಿ ಮಾಡಿದ್ದಾರೆ.