ಭಗವಾನ್ ಶ್ರೀರಾಮ ಮಾಂಸಾಹಾರಿ ಎಂದು ಹೇಳಿಕೆ ನೀಡಿದ್ದ ಎನ್‌ಸಿಪಿ ನಾಯಕ ಜಿತೇಂದ್ರ ಅವ್ಹಾದ್ ವಿರುದ್ಧ ಅಯೋಧ್ಯೆ ಸ್ವಾಮೀಜಿಯೊಬ್ಬರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಜಿತೇಂದ್ರ ಅವ್ಹಾದ್ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳದಿದ್ದರೆ ನಾನೇ ಆತನನ್ನು ಕೊಲೆ ಮಾಡುತ್ತೇನೆ ಎಂದು ಪ್ರಮುಖ ಸ್ವಾಮೀಜಿಯಾಗಿರುವ ತಪಸ್ವಿ ಚಾನ್ವಿ ಪರಮಹಂಸ ಆಚಾರ್ಯ ಹೇಳಿಕೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆತನ ವಿರುದ್ಧ ಕಠಿಣ ಕ್ರಮ ಕೈಗೊಳ್ಳದಿದ್ದರೆ ನಾನೇ ಆತನನ್ನು ಕೊಲೆ ಮಾಡುತ್ತೇನೆ. ಅವ್ಹಾದ್ ಕೋಟ್ಯಂತರ ರಾಮಭಕ್ತರ ನಂಬಿಕೆಗಳಿಗೆ ನೋವುಂಟು ಮಾಡಿದ್ದಾನೆ. ರಾಮನ ಬಗ್ಗೆ ಕೆಟ್ಟದಾಗಿ ಮಾತನಾಡುವ ಜನರ ವಿರುದ್ಧ ಖಂಡಿತಾ ಕ್ರಮ ತೆಗೆದುಕೊಳ್ಳಬೇಕು” ಎಂದು ಪರಮಹಂಸ ಆಚಾರ್ಯ ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ರಾಮ ಮಾಂಸಾಹಾರಿಯಾಗಿದ್ದ: ಮಹಾರಾಷ್ಟ್ರದಲ್ಲಿ ವಿವಾದ ಸೃಷ್ಟಿಸಿದ ಎನ್‌ಸಿಪಿ ಶಾಸಕನ ಹೇಳಿಕೆ
“ಅವ್ಹಾದ್ ಬೇರೆ ಯಾವುದೇ ಧರ್ಮವನ್ನು ಅವಹೇಳನ ಮಾಡಿದ್ದರೆ ಇಷ್ಟೊತ್ತಿಗೆ ಜೀವಂತವಾಗಿ ಬದುಕಿರುತ್ತಿರಲಿಲ್ಲ. ರಾಮನ ಬಗ್ಗೆ ಕೆಟ್ಟದಾಗಿ ಮಾತನಾಡುವವರನ್ನು ದೇಶವು ಸಹಿಸಿಕೊಳ್ಳುವುದಿಲ್ಲ. ಆತನಿಗೆ ಧರ್ಮ ಗ್ರಂಥಗಳ ಬಗ್ಗೆ ಜ್ಞಾನವಿಲ್ಲ. ಶ್ರೀರಾಮನ ಜೀವನ ಮತ್ತು ಕಾರ್ಯಗಳ ಬಗ್ಗೆ ಹೆಚ್ಚಾಗಿ ತಿಳಿದುಕೊಂಡಿಲ್ಲ. ಧರ್ಮಗ್ರಂಥಗಳು ಸ್ಪಷ್ಟವಾಗಿ ತಿಳಿಸಿವೆ. ಶ್ರೀರಾಮ ಸಸ್ಯಹಾರಿ, ಅರಣ್ಯದಲ್ಲಿ ವನವಾಸದಲ್ಲಿದ್ದಾಗ ಹಣ್ಣುಗಳನ್ನು ಮಾತ್ರ ಸೇವನೆ ಮಾಡುತ್ತಿದ್ದು, ಮಾಂಸಾಹಾರವನ್ನು ಸೇವಿಸುತ್ತಿರಲಿಲ್ಲ ಎಂಬುದನ್ನು ಸ್ಪಷ್ಟವಾಗಿ ತಿಳಿಸಿವೆ”ಎಂದು ತಪಸ್ವಿ ಚಾನ್ವಿ ಪರಮಹಂಸ ಹೇಳಿದ್ದಾರೆ.
ವಾಲ್ಮಿಕಿ ರಾಮಾಯಣದ ಆಧಾರದ ಮೇಲೆ ರಾಮ ವನವಾಸದಲ್ಲಿದ್ದಾಗ ಮಾಂಸಾಹಾರ ಸೇವನೆ ಮಾಡುತ್ತಿರುವುದಾಗಿ ಇತ್ತೀಚಿಗಷ್ಟೆ ಹೇಳಿಕೆ ನೀಡಿದ್ದ ಜಿತೇಂದ್ರ ಅವ್ಹಾದ್, ನಂತರ ಹೇಳಿಕೆ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದರು.