ಅಪಘಾತದಲ್ಲಿ ಮೃತಪಟ್ಟಿದ್ದ ವ್ಯಕ್ತಿಯೊಬ್ಬರ ಹಣವನ್ನು ಅವರ ಕುಟುಂಬಕ್ಕೆ ಮರಳಿಸಿ ಅಥಣಿಯ ‘108 ಆ್ಯಂಬುಲೆನ್ಸ್’ ಸಿಬ್ಬಂದಿ ಪ್ರಾಮಾಣಿಕತೆ ಮೆರೆದಿದ್ದಾರೆ. ಗ್ರಾಮಸ್ಥರು ಮತ್ತು ಆಸ್ಪತ್ರೆ ಸಿಬ್ಬಂದಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಡಿಸೆಂಬರ್ 27ರಂದು ವ್ಯಕ್ತಿಯೊಬ್ಬರು ಅಪಘಾತದಲ್ಲಿ ಮೃತಪಟ್ಟಿದ್ದರು. ಅವರ ಮೃತದೇಹವನ್ನು ಆ್ಯಂಬುಲೆನ್ಸ್‌ನಲ್ಲಿ ಆಸ್ಪತ್ರೆಗೆ ಸಾಗಿಸಲಾಗಿತ್ತು. ಈ ವೇಳೆ, ಅವರ ಕುಟುಂಬಸ್ಥರು ಯಾರೂ ಇಲ್ಲದ ಕಾರಣ, ಅವರ ಜೇಬಿನಲ್ಲಿದ್ದ 30,500 ರೂ. ಹಣವನ್ನು ಆ್ಯಂಬುಲೆನ್ಸ್ ಸಿಬ್ಬಂದಿ ನಿರ್ಮಲಾ ಬನಸೋಡೆ ಮತ್ತು ಚಾಲಕ ವಿಜಯಕುಮಾರ್ ಎತ್ತಿಟ್ಟಿದ್ದರು. ಅವರ ಕಟುಂಬಸ್ಥರು ಬಂದ ಬಳಿಕ ಹಣವನ್ನು ಅವರಿಗೆ ಮರಳಿಸಿದ್ದಾರೆ.
ಮತ್ತೊಂದು ಪ್ರಕರಣದಲ್ಲಿ, ಅನಾರೋಗ್ಯಕ್ಕೀಡಾಗಿದ್ದ ವೃದ್ಧ ಮಹಿಳೆ ಪಾರ್ವತೆವ್ವ ಪವಾರ ಎಂಬವರನ್ನು ಆ್ಯಂಬುಲೆನ್ಸ್ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ, ಆಕೆ ಮೃತಪಟ್ಟಿದ್ದರು. ಆಕೆಯ ಬಳಿಯಿದ್ದ ಬಂಗಾರದ ಒಡವೆಗಳನ್ನು ಎತ್ತಿಟ್ಟಿದ್ದ ಇದೇ ಸಿಬ್ಬಂದಿಗಳು, ಒಡವೆಗಳನ್ನು ಆಕೆಯ ಕುಟುಂಬಸ್ಥರಿಗೆ ಹಸ್ತಾಂತರಿಸಿದ್ದಾರೆ.
ಎರಡು ಪ್ರತ್ಯೆಕ ಪ್ರಕರಣಗಳಲ್ಲಿ ಹಣ ಮತ್ತು ಆಭರಣಗಳನ್ನು ಮರಳಿ ಕುಟುಂಬಕ್ಕೆ ಹಣ ನೀಡಿ ಆ್ಯಂಬುಲೆನ್ಸ್ ಸಿಬ್ಬಂದಿಗಳಾದ ನಿರ್ಮಲಾ ಬನಸೋಡೆ ಹಾಗೂ ಡ್ರೈವರ ವಿಜಯ ಕುಮಾರ್ ಅವರ ಪ್ರಾಮಾಣಿಕತೆಗೆ ಆಸ್ಪತ್ರೆಯ ಸಿಬ್ಬಂದಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.