ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ಸೇರಿದಂತೆ ಇನ್ನಿತರ ಕಂಪನಿಗಳು ವಿದ್ಯುತ್ ದರ ಏರಿಕೆ ಮಾಡುವಂತೆ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (ಕೆಇಆರ್‌ಸಿ)ಕ್ಕೆ ಪ್ರಸ್ತಾವನೆ ಸಲ್ಲಿಸಿವೆ. ಸದ್ಯ ವಿದ್ಯುತ್ ದರ ಏರಿಕೆಗೆ ಕೆಇಆರ್‌ಸಿ ಚಿಂತನೆ ನಡೆಸಿದೆ.
ಮಂಗಳೂರು ವಿದ್ಯುತ್ ಸರಬರಾಜು ಕಂಪನಿ (ಮೆಸ್ಕಾಂ), ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ (ಹೆಸ್ಕಾಂ), ಕಲಬುರಗಿ ವಿದ್ಯುತ್ ಸರಬರಾಜು ಕಂಪನಿ (ಜೆಸ್ಕಾಂ), ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ಹಾಗೂ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ಕಂಪನಿ (ಸೆಸ್ಕ್-ಮೈಸೂರು) ಸಹ ವಿದ್ಯುತ್ ದರ ಪರಿಷ್ಕರಣೆಗೆ ಪ್ರಸ್ತಾವನೆ ಸಲ್ಲಿಸಿವೆ.
ಕಲ್ಲಿದ್ದಲು ಖರೀದಿ, ವಿದ್ಯುತ್ ಖರೀದಿ ಹಾಗೂ ವಿದ್ಯುತ್ ಸರಬರಾಜು ವೆಚ್ಚ ಸೇರಿದಂತೆ ಹಲವು ಕಾರಣಗಳಿಂದ ನಿರ್ವಹಣೆಗೆ ಹೊರೆಯಾಗುತ್ತಿದೆ. ಹೀಗಾಗಿ ನಷ್ಟ ಸರಿದೂಗಿಸಲು 2024-25ನೇ ಸಾಲಿಗೆ ವಿದ್ಯುತ್ ದರ ಪರಿಷ್ಕರಣೆ ಮಾಡುವಂತೆ ಕೆಇಆರ್‌ಸಿಗೆ ಮನವಿ ಮಾಡಿವೆ.
ಕಳೆದ ವರ್ಷ ಮೂರು ಬಾರಿ ವಿದ್ಯುತ್ ದರ ಏರಿಕೆ ಮಾಡಿದ್ದ ಎಸ್ಕಾಂಗಳು ಈ ಬಾರಿಯೂ ವಿದ್ಯುತ್ ದರ ಪರಿಷ್ಕರಣೆ ಮಾಡಲು ಸಿದ್ಧತೆ ನಡೆಸುತ್ತಿದೆ. ಪ್ರತಿ ಯೂನಿಟ್‌ಗೆ 50-60 ಪೈಸೆ ಏರಿಕೆಗೆ ಎಸ್ಕಾಂಗಳು ಕೆಇಆರ್‌ಸಿ ಮುಂದೆ ಪ್ರಸ್ತಾವನೆ ಇಟ್ಟಿವೆ. ಇದರಿಂದ ಈ ವರ್ಷ ಏಪ್ರಿಲ್ ತಿಂಗಳಲ್ಲಿ ವಿದ್ಯುತ್ ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ.
ಯೂನಿಟ್‌ಗೆ 49 ಪೈಸೆ ಏರಿಕೆ ಮಾಡುವಂತೆ ಡಿಸೆಂಬರ್ ಕೊನೆಯ ವಾರದಲ್ಲಿ ಬೆಸ್ಕಾಂ ಪ್ರಸ್ತಾವನೆ ಸಲ್ಲಿಸಿತ್ತು. ಪ್ರಸ್ತಾವನೆಯಂತೆ ಉತ್ಪಾದನೆಯ ಖರ್ಚು-ವೆಚ್ಚ ಮತ್ತು ನಿರ್ವಹಣೆಯ ನಷ್ಟ ಸರಿದೂಗಿಸುವ ನಿಟ್ಟಿನಲ್ಲಿ ದರ ಏರಿಕೆಗೆ ಕೆಇಆರ್‌ಸಿ ಮುಂದಾಗಿದೆ.
ಸದ್ಯ ಪ್ರಸ್ತಾವನೆ ಪರಿಶೀಲಿಸಲಿರುವ ಆಯೋಗ, ಗ್ರಾಹಕ ಮತ್ತು ಬೆಸ್ಕಾಂ ಇಬ್ಬರಿಗೂ ಹೊರೆಯಾಗದಂತೆ ಏಪ್ರಿಲ್ 1 ರಿಂದಲೇ ಪರಿಷ್ಕೃತ ದರ ಜಾರಿ ಮಾಡುವ ಸಾಧ್ಯತೆಯಿದೆ. ಬೆಸ್ಕಾಂ ಮಾತ್ರವಲ್ಲದೇ ಉಳಿದ ನಾಲ್ಕು ಎಸ್ಕಾಂಗಳಿಂದಲೂ ದರ ಪರಿಷ್ಕರಣೆಗೆ ಪ್ರಸ್ತಾವನೆ ಸಲ್ಲಿಕೆಯಾಗಿದೆ. ನಾಲ್ಕು ಎಸ್ಕಾಂಗಳಿಂದ 50-60 ಪೈಸೆ ದರ ಪರಿಷ್ಕರಣೆಗೆ ಪ್ರಸ್ತಾಪ ಸಲ್ಲಿಕೆಯಾಗಿದೆ. ಎಲ್ಲಾ ಪರಿಷ್ಕೃತ ದರಗಳು ಏಪ್ರಿಲ್ 1 ರಿಂದಲೇ ಜಾರಿಯಾಗುವ ಸಾಧ್ಯತೆ ಇದ್ದು, ರಾಜ್ಯದ ಜನರಿಗೆ ವಿದ್ಯುತ್ ದರದ ಬಿಸಿ ತಟ್ಟಲಿದೆ.
ಬೆಸ್ಕಾಂ ಸೇರಿ ಇತರೆ ವಿದ್ಯುತ್ ಸರಬರಾಜು ಕಂಪನಿಗಳು ಪ್ರತಿ ಯೂನಿಟ್‌ಗೆ 49 ರಿಂದ 60 ಪೈಸೆಯವರಿಗೂ ವಿದ್ಯುತ್ ದರ ಏರಿಸುವಂತೆ ಬೇಡಿಕೆ ಇಟ್ಟಿವೆ. ಈ ಬಾರಿ ಜನರಿಗೆ ಸಮಸ್ಯೆ ಆಗದಂತೆ ವಿದ್ಯುತ್ ದರ ಏರಿಕೆ ಮಾಡುತ್ತೇವೆ ಎಂದು ಇಂಧನ ಸಚಿವ ಕೆ.ಜೆ ಜಾರ್ಜ್ ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಮುಂದಿನ 2 ದಿನ ರಾಜ್ಯದ ಬಹುತೇಕ ಕಡೆ ಭಾರೀ ಮಳೆ ಸಾಧ್ಯತೆ : ಹವಾಮಾನ ಇಲಾಖೆ
ಎಸ್ಕಾಂಗಳು ಪ್ರತಿ ವರ್ಷದಂತೆ ಈ ವರ್ಷವೂ ದರ ಪರಿಷ್ಕರಣೆ ಪ್ರಸ್ತಾವನೆ ಸಲ್ಲಿಸಿವೆ. ಗೃಹ ಜ್ಯೋತಿ ಯೋಜನೆ ಜಾರಿ ಬಳಿಕ ಮೊದಲ ಬಾರಿಗೆ ಎಸ್ಕಾಂಗಳು ಬೆಲೆ ಏರಿಕೆ ಪ್ರಸ್ತಾಪ ಮಾಡಿವೆ. ದರ ಪರಿಷ್ಕರಣೆಯಿಂದ ಗೃಹ ಜ್ಯೋತಿ ಗ್ರಾಹಕರಿಗೆ ಯಾವುದೇ ಸಮಸ್ಯೆಯಾಗುವುದಿಲ್ಲ. ಆದರೆ, ಗೃಹಜ್ಯೋತಿ ಯೋಜನೆಗೆ ಅರ್ಹತೆ ಪಡೆಯದ ಗೃಹ ಬಳಕೆದಾರರು ಹಾಗೂ ವಾಣಿಜ್ಯ ಗ್ರಾಹಕರಿಗೆ ಹೊರೆಯಾಗಲಿದೆ ಎಂದು ತಿಳಿದುಬಂದಿದೆ.
ರಾಜ್ಯದಲ್ಲಿ ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನ ತತ್ತರಿಸಿ ಹೋಗಿದ್ದಾರೆ. ಇದರ ನಡುವೆ ರಾಜ್ಯದ ಜನತೆಗೆ ಮತ್ತೆ ಕರೆಂಟ್ ಶಾಕ್ ಕಾದಿದೆ ಎನ್ನಲಾಗಿದೆ.