- 530 ಅಕ್ಕಿ ಮೂಟೆ ಹಿಂತಿರುಗಿಸುವಂತೆ ರಿಟರ್ನಿಂಗ್ ಅಧಿಕಾರಿಗೆ ಸೂಚನೆ
- ಇಸ್ತಿಯಾಕ್ ಅಹಮದ್ ಎಂಬುವವರು ಹೈಕೋರ್ಟ್ ಮೆಟ್ಟಿಲೇರಿದ್ದರು
ಚುನಾವಣಾ ಅಧಿಕಾರಿಗಳಿಗೆ ಚುನಾವಣೆ ಘೋಷಣೆ ಬಳಿಕವಷ್ಟೇ ಶೋಧನೆಯ ಅಧಿಕಾರ ಇರುತ್ತದೆ. ಅದಕ್ಕೂ ಮುನ್ನ ಶೋಧನೆ ಮತ್ತು ವಸ್ತುಗಳ ಜಪ್ತಿ ಮಾಡಲು ಅಧಿಕಾರ ಇಲ್ಲ ಎಂದು ಕರ್ನಾಟಕ ಹೈಕೋರ್ಟ್ ಹೇಳಿದೆ.
ಬೆಂಗಳೂರಿನ ಸಾಮಾಜಿಕ ಕಾರ್ಯಕರ್ತನ ಕಡೆಯಿಂದ ವಶಪಡಿಸಿಕೊಂಡಿದ್ದ ಅಕ್ಕಿ ಮೂಟೆಗಳನ್ನು ವಾಪಸ್ ನೀಡಬೇಕು ಎಂದು ಚುನಾವಣಾಧಿಕಾರಿಗಳಿಗೆ ಹೈಕೋರ್ಟ್ ಸೂಚನೆ ನೀಡಿದೆ.
ಇಸ್ತಿಯಾಕ್ ಅಹಮದ್ ಎಂಬುವವರು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರು “ಚುನಾವಣೆ ಘೋಷಣೆಗೂ ಮುನ್ನ ರಿಟರ್ನಿಂಗ್ ಅಧಿಕಾರಿ ಅಥವಾ ಚುನಾವಣಾ ಅಧಿಕಾರಿಗಳು ಶೋಧ ನಡೆಸುವ ಹಾಗೂ ವಸ್ತುಗಳನ್ನು ಜಪ್ತಿ ಮಾಡುವ ಅಧಿಕಾರ ಹೊಂದಿರುವುದಿಲ್ಲ. ಕಾರಣ, ಅಧಿಕಾರಿಗಳನ್ನು ಚುನಾವಣೆ ನಡೆಸುವುದಕ್ಕಾಗಿಯೇ ನೇಮಕ ಮಾಡಲಾಗಿರುತ್ತದೆ. ಆದ್ದರಿಂದ ಚುನಾವಣೆಗೂ ಮುನ್ನ ಅವರು ಅಧಿಕಾರವನ್ನು ಬಳಸಲು ಆಗುವುದಿಲ್ಲ” ಎಂದು ತೀರ್ಪು ನೀಡಿದ್ದಾರೆ.
“ಚುನಾವಣೆ ಘೋಷಣೆ ಬಳಿಕವಷ್ಟೇ ಸಂಪೂರ್ಣ ಚುನಾವಣೆ ಪ್ರಕ್ರಿಯೆ ಪ್ರಾರಂಭ ಆಗುತ್ತದೆ. ಸಾಮಾನ್ಯ ಸಂದರ್ಭಗಳಲ್ಲಿ ಅಗತ್ಯ ವಸ್ತುಗಳ ಕಾಯಿದೆ 1955ರ ಅಡಿಯಲ್ಲಿ ಅಧಿಕಾರಿಗಳು ವಸ್ತುಗಳನ್ನು ವಶಪಡಿಸಿಕೊಳ್ಳುತ್ತಾರೆ. ಆದರೆ, ಚುನಾವಣಾ ಅಧಿಕಾರಿಗಳು ಮತ್ತು ಪೊಲೀಸ್ ಇನ್‌ಸ್ಪೆಕ್ಟರ್ ಅವರಿಗೆ ಶೋಧ ನಡೆಸುವ ಅಧಿಕಾರವನ್ನು ನೀಡಲಾಗಿಲ್ಲ. ಅವರ ಕ್ರಮ ಕೂಡ ಕಾನೂನುಬಾಹಿರವಾಗಿದೆ” ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಮಾರ್ಚ್ 19ರಂದು ಶಿವಾಜಿನಗರದ ತಮ್ಮ ನಿವಾಸದಲ್ಲಿದ್ದ 25 ಕೆ.ಜಿಯ 530 ಅಕ್ಕಿ ಮೂಟೆಗಳನ್ನು ಶಿವಾಜಿನಗರದ ರಿಟರ್ನಿಂಗ್ ಅಧಿಕಾರಿ ವಶಪಡಿಸಿಕೊಂಡ ಕಾರಣಕ್ಕೆ ಇಸ್ತಿಯಾಕ್ ಅಹಮದ್ ಅವರು ಹೈಕೋರ್ಟ್ ಮೆಟ್ಟಿಲು ಏರಿದ್ದರು. ನೋಟಿಸ್ ನೀಡಿದ್ದರೂ ಅಕ್ಕಿ ಮೂಟೆಗಳನ್ನು ರಿಟರ್ನಿಂಗ್ ಅಧಿಕಾರಿ ಅಹಮದ್ ಅವರಿಗೆ ವಾಪಸ್ ನೀಡಿದ್ದಿಲ್ಲ.
ಈ ಸುದ್ದಿ ಓದಿದ್ದೀರಾ? ಪ್ರಚೋದನಕಾರಿ ಭಾಷಣ : ನಟಿ ಶೃತಿ ವಿರುದ್ಧ ಪ್ರಕರಣ ದಾಖಲು
“ನಾನೊಬ್ಬ ಸಾಮಾಜಿಕ ಕಾರ್ಯಕರ್ತನಾಗಿದ್ದು, ಹಬ್ಬದ ಸಂದರ್ಭಗಳಲ್ಲಿ ಅಗತ್ಯ ಇರುವವರಿಗೆ ಅಕ್ಕಿ ನೀಡಲು ಮುಂದಾಗಿದ್ದೆ. ಅದನ್ನು ಚುನಾವಣಾ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ” ಎಂದು ಅಹ್ಮದ್ ನ್ಯಾಯಾಲಯಕ್ಕೆ ಹೇಳಿದ್ದರು. ಚುನಾವಣಾ ಸಂದರ್ಭದಲ್ಲಿ ಮಾದರಿ ನೀತಿ ಸಂಹಿತೆ ಉಲ್ಲಂಘಿಸುವುದಿಲ್ಲ ಎಂದು ಬಾಂಡ್ ಸಲ್ಲಿಸುವಂತೆ ಇಸ್ತಿಯಾಕ್ ಅಹ್ಮದ್ ಅವರಿಗೆ ಕೋರ್ಟ್ ಸೂಚಿಸಿದೆ.
ಚುನಾವಣೆ ಘೋಷಣೆಗೂ ಮುನ್ನ ಯಾವುದೇ ವಸ್ತುಗಳನ್ನು ವಶಪಡಿಸಿಕೊಳ್ಳುವಂತಿಲ್ಲ. ಆದರೆ, ಈಗ ಚುನಾವಣೆ ಘೋಷಣೆ ಆಗಿರುವುರಿಂದ ಅರ್ಜಿದಾರರು ದಾಸ್ತಾನು ಬಿಡುಗಡೆಯಾದ ಬಳಿಕ ವಿತರಣೆ ಮಾಡಬಾರದು ಎಂದು ಹೇಳಿದೆ.
ಅರ್ಜಿದಾರರಿಗೆ ಪರಿಹಾರ ನೀಡುವಂತೆ ನ್ಯಾಯಾಲಯ ಚುನಾವಣಾ ಅಧಿಕಾರಿಗಳಿಗೆ ಸೂಚಿಸಿದೆ. ವಶಪಡಿಸಿಕೊಂಡ ಅಕ್ಕಿ ಮೂಟೆಗಳನ್ನು ಅರ್ಜಿದಾರರ ವಶಕ್ಕೆ ತಕ್ಷಣವೇ ಬಿಡುಗಡೆ ಮಾಡಬೇಕು ಮತ್ತು ಷರತ್ತುಗಳನ್ನು ಪಾಲಿಸುವಂತೆ ಹೈಕೋರ್ಟ್ ಸೂಚಿಸಿದೆ.