ಸರ್ಕಾರಿ ವಿವಿಗಳಲ್ಲಿನ ಪದವಿ ಶುಲ್ಕ ಇಳಿಕೆ ಮಾಡಿ ಎಂದು ಒತ್ತಾಯಿಸಿ ಎಐಡಿಎಸ್‌ಒ ವಿಜಯಪುರ ಜಿಲ್ಲಾ ಸಮಿತಿ ರಾಜ್ಯಸರ್ಕಾರಕ್ಕೆ ಮನವಿ ಮಾಡಿದೆ.
ಈ ಬಗ್ಗೆ ಎಐಡಿಎಸ್‌ಒ ವಿಜಯಪುರ ಜಿಲ್ಲಾ ಕಾರ್ಯದರ್ಶಿ ಕಾವೇರಿ ರಜಪೂತ ಮಾತನಾಡಿ, ರಾಜ್ಯದ ಸರ್ಕಾರಿ ವಿವಿಗಳಲ್ಲಿನ ಪದವಿ ಹಾಗೂ ಸ್ನಾತಕೋತ್ತರ ಪದವಿ ಕೋರ್ಸುಗಳ ಶುಲ್ಕದಲ್ಲಿ ಏಕರೂಪ ತರಲು ಉನ್ನತ ಶಿಕ್ಷಣ ಸಮಿತಿಯು ರಾಜ್ಯ ಸರ್ಕಾರದ ಮುಂದೆ ಪ್ರಸ್ತಾವವನ್ನು ಇರಿಸಿದೆ. ಹಲವು ಸರ್ಕಾರಿ ವಿವಿಗಳಲ್ಲಿ ದುಬಾರಿ ಶುಲ್ಕವನ್ನು ವಿಧಿಸಿದ್ದು, ಬಡ ವಿದ್ಯಾರ್ಥಿಗಳ ಉನ್ನತ ವ್ಯಾಸಂಗಕ್ಕೆ ಇದು ಹೊರೆಯನ್ನು ಉಂಟು ಮಾಡುತ್ತಿರುವ ಕಾರಣ, ಎಲ್ಲಾ ಸರ್ಕಾರಿ ವಿವಿಗಳ ಪದವಿ ಹಾಗೂ ಸ್ನಾತಕೋತ್ತರ ಪದವಿಗಳ ಶುಲ್ಕದಲ್ಲಿ ಏಕರೂಪತೆ ತರಬೇಕೆಂದು ರೂ. 11,500ರಿಂದ ಆರಂಭವಾಗುವಂತೆ ವಿವಿಧ ವಿಭಾಗಗಳಿಗೆ ಸಮಿತಿಯು ಶುಲ್ಕ ವಿಧಿಸಿ ತನ್ನ ಪ್ರಸ್ತಾವವನ್ನು ರಾಜ್ಯ ಸರ್ಕಾರದ ಮುಂದಿರಿಸಿದೆ.
ವಿವಿಗಳಲ್ಲಿನ ಪದವಿ ಶುಲ್ಕ ಈಗಾಗಲೇ, ಸರ್ಕಾರಿ ಪದವಿ ಕಾಲೇಜುಗಳ ಶುಲ್ಕಕ್ಕಿಂತ ಶೇ.300ರಷ್ಟು ಹೆಚ್ಚಿದ್ದು, ಇಲ್ಲಿನ ದಾಖಲಾತಿ ಪ್ರಮಾಣ ಅತ್ಯಂತ ಕೆಳ ಮಟ್ಟಕ್ಕೆ ಕುಸಿದಿದೆ. ಹಲವು ಸರ್ಕಾರಿ ಪದವಿ ಕಾಲೇಜುಗಳು ಈಗಾಗಲೇ ಕ್ಲಸ್ಟರ್ ವಿವಿಗಳಾಗಿ ಪರಿವರ್ತನೆಗೊಂಡಿದ್ದು, 3500ರಿಂದ ಆರಂಭವಾಗುವ ಸರ್ಕಾರಿ ಕಾಲೇಜು ಪದವಿ ಶುಲ್ಕ, ಇಲ್ಲಿ ಇದೀಗ ಹತ್ತು ಸಾವಿರದಿಂದ ಆರಂಭವಾಗುತ್ತದೆ. ಈ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ, ಬಡ ವಿದ್ಯಾರ್ಥಿಗಳ ದೃಷ್ಟಿಯಿಂದ, ಸರ್ಕಾರಿ ವಿವಿಗಳಿಗೆ ಹೆಚ್ಚುವರಿ ಅನುದಾನವನ್ನು ನೀಡಿ, ಇಲ್ಲಿನ ಪದವಿ ಕೋರ್ಸ್‌ಗಳಿಗೆ ಸರ್ಕಾರಿ ಪದವಿ ಕಾಲೇಜಿನ ಶುಲ್ಕವನ್ನು ನಿಗದಿ ಮಾಡಬೇಕಿದೆ ಎಂದರು.
ಅಷ್ಟೇ ಅಲ್ಲದೆ, ಸಮಿತಿಯು ವಿವಿಗಳು ಸಿಂಡಿಕೇಟ್ ಅನುಮತಿ ಪಡೆದು ಪ್ರತೀ ವರ್ಷ ಶೇ.10ರಷ್ಟು ಶುಲ್ಕ ಏರಿಸಬಹುದು ಎಂದು ಹೇಳಿದೆ. ಇದು ಅನುಷ್ಠಾನಕ್ಕೆ ಬಂದಲ್ಲಿ ಇನ್ನೆರಡು ವರ್ಷಗಳಲ್ಲಿ ಸರ್ಕಾರಿ ವಿವಿಗಳ ಪದವಿ ಶುಲ್ಕವು ಖಾಸಗಿ ಪದವಿ ಕಾಲೇಜುಗಳ ಶುಲ್ಕದ ಮಟ್ಟವನ್ನು ತಲುಪುತ್ತದೆ. ಪದೇ ಪದೇ ಅನುದಾನ ಕೊರತೆಯ ನೆಪವೊಡ್ಡಿ ಹಲವು ವಿವಿಗಳ ಶುಲ್ಕ ಏರಿಕೆ ಮಾಡುತ್ತಿವೆ. ಹಾಗಾಗಿಯೇ ಸರ್ಕಾರಿ ಪದವಿ ಕಾಲೇಜುಗಳ ಶುಲ್ಕಕ್ಕೂ, ಸರ್ಕಾರಿ ವಿವಿಗಳ ಶುಲ್ಕಕ್ಕೂ ಅಜಗಜಾಂತರ ವ್ಯತ್ಯಾಸವಿದೆ.
ಹಾಗಾಗಿ, ಏಕರೂಪ ಶುಲ್ಕ ವಿಧಾನ ತರುವುದೇ ಸರ್ಕಾರದ ಉದ್ದೇಶವಾದಲ್ಲಿ, ಸರ್ಕಾರಿ ಪದವಿ ಕಾಲೇಜುಗಳ ಶುಲ್ಕ ಪ್ರಮಾಣವನ್ನೇ ಸರ್ಕಾರಿ ವಿವಿಗಳ ಪದವಿ ಕೋರ್ಸ್ಗಳಲ್ಲಿ ಸರ್ಕಾರ ಅನುಷ್ಠಾನಗೊಳಿಸಬೇಕು. ಹಾಗಾದಲ್ಲಿ ಮಾತ್ರ ಬಡ ವಿದ್ಯಾರ್ಥಿಗಳು, ಅವರ ವ್ಯಾಸಂಗಕ್ಕೆಂದೇ ಆರಂಭವಾಗಿರುವ ಸರ್ಕಾರಿ ವಿಶ್ವ ವಿದ್ಯಾಲಯಗಳಲ್ಲಿ ಅಧ್ಯಯನ ನಡೆಸಬಹುದು. ಈ ನಿಟ್ಟಿನಲ್ಲಿ ವಿವಿಗಳ ಆರ್ಥಿಕ ಜವಾಬ್ದಾರಿಯನ್ನು ಸರ್ಕಾರ ವಹಿಸಿಕೊಳ್ಳಬೇಕೆಂದು ಎಐಡಿಎಸ್‌ಒ ಜಿಲ್ಲಾ ಸಮಿತಿ ಪರವಾಗಿ ಆಗ್ರಹಿಸಿದರು.