ಶಹಾಬಾದ್ ತಾಲ್ಲೂಕಿನ ಹೊನಗುಂಟ ಗ್ರಾಮಕ್ಕೆ ಸರಿಯಾದ ಸಮಯಕ್ಕೆ ಬಸ್ ಸೌಲಭ್ಯ ಒದಗಿಸಲು ಆಗ್ರಹಿಸಿ ವಿದ್ಯಾರ್ಥಿಗಳು ಎಐಡಿಎಸ್‌ಓ ವಿದ್ಯಾರ್ಥಿ ಸಂಘಟನೆ ನೇತ್ರತ್ವದಲ್ಲಿ ಶಹಬಾದ್‌ನಲ್ಲಿ ಪ್ರತಿಭಟನೆ ನಡೆಸಿದರು.
ಶಹಾಬಾದ್ ಪಟ್ಟಣದ ನೆಹರು ವೃತ್ತದಲ್ಲಿ ನಡೆದ ಪ್ರತಿಭಟನಾ ಸ್ಥಳಕ್ಕೆ ಶಹಾಬಾದ ಬಸ್ ನಿಲ್ದಾಣ ನಿಯಂತ್ರಣಾಧಿಕಾರಿಗಳು ಬಂದು ಹಕ್ಕೊತ್ತಾಯ ಪತ್ರ ಸ್ವೀಕರಿಸಿದರು, ಮೇಲಾಧಿಕಾರಿಗಳ ಗಮನಕ್ಕೆ ತಂದು ಕೂಡಲೇ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದರು.
ಎಐಡಿಎಸ್‌ಓ ಜಿಲ್ಲಾ ಕಾರ್ಯದರ್ಶಿ ತುಳಜರಾಮ ಎನ್.ಕೆ. ಮಾತನಾಡಿ, “ಶಹಾಬಾದ್ ತಾಲೂಕಿನಲ್ಲಿ ಬರುವ ಹೊನಗುಂಟ ಗ್ರಾಮದಿಂದ ಪ್ರತಿನಿತ್ಯ ನೂರಾರು ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕಾಗಿ ಶಹಾಬಾದ್, ಕಲಬುರಗಿ ಜೇವರ್ಗಿ ಹಾಗೂ ಚಿತ್ತಾಪುರದ ಶಾಲಾ-ಕಾಲೇಜುಗಳಿಗೆ ತೆರಳುತ್ತಾರೆ. ಆದರೆ ಸೂಕ್ತ ಸಮಯಕ್ಕೆ ಬಸ್ ಬಾರದ ಹಿನ್ನಲೆ ವಿದ್ಯಾರ್ಥಿಗಳು ತರಗತಿಗೆ ಹಾಜರಾಗಲು ತೊಂದರೆಯಾಗುತ್ತಿದೆ. ಈ ಬಗ್ಗೆ ಹಲವು ಬಾರಿ ಅಧಿಕಾರಿಗಳ ಗಮಕ್ಕೆ ತಂದರೂ ಯಾವುದೇ ಪ್ರಯೋಜನೆಯಾಗಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಬಸ್ ಅವ್ಯವಸ್ಥೆಯಿಂದ ವಿದ್ಯಾರ್ಥಿಗಳ ಶೈಕ್ಷಣಿಕ ವಿದ್ಯಾಭ್ಯಾಸಕ್ಕೆ ಹಿನ್ನಡೆಯಾಗುತ್ತಿದೆ, ಸರಿಯಾದ ಸಮಯಕ್ಕೆ ಬಸ್ ಗಳ ಅವಶ್ಯಕತೆ ಇದೆ. ಆದರೆ ನಿಗದಿತ ಸಮಯಕ್ಕೆ ಬಸ್ ಇಲ್ಲದ ಕಾರಣ ವಿದ್ಯಾರ್ಥಿಗಳು ಖಾಸಗಿ ವಾಹನಗಳ ಮೂಲಕ ತೆರಳಬೇಕಾದ ಪರಿಸ್ಥಿತಿ ಎದುರಾಗಿದೆ. ವಿದ್ಯಾರ್ಥಿಗಳ ಬಳಿ ಉಚಿತ ಬಸ್ ಪಾಸ್ ಇದ್ದರೂ ಉಪಯೋಗವಾಗುತ್ತಿಲ್ಲ. ಸಾರಿಗೆ ಇಲಾಖೆ ಅಧಿಕಾರಿಗಳು ಕೂಡಲೇ ಎಚ್ಚೆತುಕೊಂಡು ಶಾಲಾ-ಕಾಲೇಜಿನ ಸಮಯಕ್ಕೆ ಬಸ್ ಸೌಲಭ್ಯ ಕಲ್ಪಿಸಿ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡಿಕೊಡಬೇಕು. ಇಲ್ಲವಾದಲ್ಲಿ ಮುಂದಿನ ದಿಗಳಲ್ಲಿ ಉನ್ನತ ಹಂತದ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಈ ಸುದ್ದಿ ಓದಿದ್ದೀರಾ? ಶತಾಯುಷಿ ಅಜ್ಜಿಗೆ ಭಾರವಾಯ್ತಾ ವಯಸ್ಸು?; ವೃದ್ದಾಪ್ಯ ವೇತನಕ್ಕೆ ಅಧಿಕಾರಿಗಳ ಕತ್ತರಿ
ಈ ಹೋರಾಟದಲ್ಲಿ ಜಿಲ್ಲಾ ಸಮಿತಿ ಸದಸ್ಯರಾದ ದೇವರಾಜ ಎಸ್ ರಂಗನಾಥ ಮಾನೆ ವಿದ್ಯಾರ್ಥಿಗಳಾದ ಭಾಗ್ಯಶ್, ರೇಖಾ, ಸ್ನೇಹ,ಇಶ್ರತ್ ಬೇಗಂ, ಮಲ್ಲಮ್ಮ,ಜ್ಯೋತಿ,ಭಾಗೇಶ್, ಮನು,ಸಂತೋಷ,ಭರತ್, ಮಲ್ಲು,ಪ್ರಜ್ವಲ್, ಸಿದ್ದು ಉಪಸ್ಥಿತರಿದ್ದರು.