- ಕೇರಳದ ತ್ರಿಶೂರ್ನಲ್ಲಿ ಮೊಬೈಲ್ ಅಂಗಡಿ ಇಟ್ಟುಕೊಂಡಿದ್ದ ವ್ಯಕ್ತಿ
- ಅಸ್ವಾಭಾವಿಕ ಸಾವು ಎಂದು ಪ್ರಕರಣ ದಾಖಲಿಸಿಕೊಂಡ ಪೊಲೀಸರು
ರಾಜಧಾನಿಗೆ ಮೊಬೈಲ್ ಬಿಡಿಭಾಗಗಳನ್ನು ಖರೀದಿ ಮಾಡಲು ಬಂದಿದ್ದ ಅಕ್ಬರ್ ಅಲಿ(36) ವಿದ್ಯುತ್ ಕಂಬದಿಂದ ವಿದ್ಯುತ್ ಪ್ರವಹಿಸಿ ಸಾವನ್ನಪ್ಪಿದ್ದಾರೆ.
ಬೆಂಗಳೂರಿನ ಮಡಿವಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಅಕ್ಬರ್ ಅಲಿ ಮೂಲತಃ ಕೇರಳದ ತ್ರಿಶೂರ್ ನವರು. ಅವರು ತಮ್ಮ ಊರಿನಲ್ಲಿ ಮೊಬೈಲ್ ಅಂಗಡಿ ನಡೆಸುತ್ತಿದ್ದರು. ಮೊಬೈಲ್ ಫೋನ್ ಬಿಡಿಭಾಗಗಳನ್ನು ಖರೀದಿಸಲು ಅಕ್ಬರ್ ಅಲಿ ಏಪ್ರಿಲ್ 10 ರಂದು ನಗರಕ್ಕೆ ಬಂದಿದ್ದರು. ಮಡಿವಾಳ ಸಮೀಪದ ಲಾಡ್ಜ್ನಲ್ಲಿ ಉಳಿದುಕೊಂಡಿದ್ದರು.
ಮಂಗಳವಾರ ನಗರದ ಎಸ್ಪಿ ರಸ್ತೆಯಲ್ಲಿ ಮೊಬೈಲ್ ಫೋನ್ ಬಿಡಿ ಭಾಗಗಳನ್ನು ಖರೀದಿ ಮಾಡಿ, ಮಧ್ಯ ಸೇವನೆ ಮಾಡಿ ಲಾಡ್ಜ್ ಕಡೆಗೆ ಪ್ರಯಾಣ ಬೆಳೆಸಿದ್ದರು. ಲಾಡ್ಜ್ಗೆ ತೆರಳುವಾಗ ಹೊಸೂರು ರಸ್ತೆಯ ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್ ಬಳಿ ಓರ್ವ ವ್ಯಕ್ತಿ ವಿದ್ಯುತ್ ಕಂಬದಿಂದ ವಿದ್ಯುತ್ ಪ್ರವಹಿಸಿ ಕೆಳಗೆ ಬಿದ್ದಿದ್ದನು. ಇದನ್ನು ಕಂಡ ಅಲಿ ಆ ವ್ಯಕ್ತಿಯ ರಕ್ಷಣೆಗೆ ಧಾವಿಸಿದ್ದು, ಕಟ್ಟಿಗೆಯ ಸಹಾಯದಿಂದ ವ್ಯಕ್ತಿಯನ್ನು ರಕ್ಷಿಸಿದ್ದಾರೆ. ಆದರೆ, ರಕ್ಷಣೆ ವೇಳೆ, ಲೈಟ್ ಕಂಬಕ್ಕೆ ಕಟ್ಟಿಗೆ ತಾಕಿ ಅಲಿ ಮೃತಪಟ್ಟಿದ್ದಾನೆ ಎನ್ನಲಾಗಿದೆ.
ಈ ಸುದ್ದಿ ಓದಿದ್ದೀರಾ? ರಾಜಧಾನಿಯಲ್ಲಿ ದೇಶದ ಮೊದಲ 3‘ಡಿ’ ತಂತ್ರಜ್ಞಾನದ ಅಂಚೆ ಕಚೇರಿ
ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ಪೊಲೀಸರು ಸ್ಥಳಕ್ಕೆ ಆಗಮಿಸಿ, ಪರಿಶೀಲನೆ ನಡೆಸಿದ್ದಾರೆ. ಪೊಲೀಸರು ಅಸ್ವಾಭಾವಿಕ ಸಾವು ಎಂದು ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸುತ್ತಿದ್ದಾರೆ.