ಬೆಂಗಳೂರಿನ ಪ್ರತಿಷ್ಠಿತ ಹೋಟೆಲ್‌ವೊಂದಕ್ಕೆ ಊಟಕ್ಕೆ ತೆರಳಿದ ವಕೀಲರೊಬ್ಬರಿಗೆ ನೀಡಿದ ಆಹಾರದಲ್ಲಿ ಜಿರಳೆ ಕಾಣಿಸಿಕೊಂಡಿದ್ದು, ಈ ಬಗ್ಗೆ ಪ್ರಶ್ನಿಸಿದ್ದಕ್ಕೆ ಹೋಟೆಲ್ ಸಿಬ್ಬಂದಿ ಹಲ್ಲೆ ನಡೆಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಶೀಲಾ ದೀಪಕ್ ವಕೀಲೆ. ಗುರುವಾರ ಸಂಜೆ ಬೆಂಗಳೂರಿನ ರಾಜಭವನ ರಸ್ತೆಯಲ್ಲಿರುವ ಕ್ಯಾಪಿಟಲ್ ಹೋಟೆಲ್‌ಗೆ ಊಟಕ್ಕೆಂದು ತೆರಳಿದ್ದಾರೆ. ಊಟಕ್ಕೆಂದು ರೋಟಿ ಹಾಗೂ ಪನ್ನೀರ್ ಗ್ರೇವಿ ಆರ್ಡರ್ ಮಾಡಿದ್ದರು. ಒಂದೆರಡು ತುತ್ತು ತಿಂದ ಬಳಿಕ ಪನ್ನೀರ್ ಗ್ರೇವಿಯಲ್ಲಿ ಸತ್ತ ಜಿರಳೆ ಪತ್ತೆಯಾಗಿದೆ.
ಜಿರಳೆ ಪತ್ತೆಯಾದ ಕೂಡಲೇ ಹೋಟೆಲ್ ಸಿಬ್ಬಂದಿಯನ್ನ ವಕೀಲೆ ತರಾಟೆಗೆ ತೆಗೆದುಕೊಂಡಿದ್ದರು. ಹೋಟೆಲ್ ಸಿಬ್ಬಂದಿ ‘ಬೇರೆ ಊಟ ನೀಡುವುದಾಗಿ’ ಗ್ರಾಹಕರಿಗೆ ಮನವರಿಕೆ ಮಾಡಿಕೊಂಡಿದ್ದಾರೆ.
ವಕೀಲೆ, ತಮ್ಮ ಮೊಬೈಲ್ ಫೋನ್‌ನಲ್ಲಿ ಜಿರಳೆ ಫೋಟೋ ಸೆರೆ ಹಿಡಿದಿದ್ದಾರೆ. ನಂತರ, ಅಡುಗೆ ಮನೆಯ ವಿಡಿಯೋ ರೆಕಾರ್ಡ್ ಮಾಡಲು ಮುಂದಾದಾಗ ಇಬ್ಬರು ಮಹಿಳಾ ಸಿಬ್ಬಂದಿ ಮತ್ತು ಒಬ್ಬ ಪುರುಷ ಕೆಲಸಗಾರ ಆಕೆಯ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಆಹಾರ ಅಧಿಕಾರಿಗೆ ಕರೆ ಮಾಡಿ ತಮಗೆ ನೀಡಿದ ಆಹಾರದ ಬಗ್ಗೆ ದೂರು ನೀಡಿದ್ದಾರೆ. ಟ್ರಾಫಿಕ್ನಿಂದಾಗಿ ಅದೇ ದಿನ ಹೋಟೆಲ್ ತಲುಪಲು ಸಾಧ್ಯವಾಗದ ಕಾರಣ ಮರುದಿನ ಹೋಟೆಲ್ ಪರಿಶೀಲನೆ ನಡೆಸುವುದಾಗಿ ಆಹಾರ ಅಧಿಕಾರಿ ಶೀಲಾ ಅವರಿಗೆ ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ದೆಹಲಿ, ಪಂಜಾಬ್ ಮಾದರಿಯಲ್ಲಿ ಅತಿಥಿ ಉಪನ್ಯಾಸಕರ ಸೇವೆ ಕಾಯಂಗೊಳಿಸಿ: ಸಿದ್ದರಾಮಯ್ಯಗೆ ಎಎಪಿ ಪತ್ರ
ಆಹಾರ ಅಧಿಕಾರಿ ಹೋಟೆಲ್‌ಗೆ ಭೇಟಿ ನೀಡಿ ಪರಿಶೀಲನೆ ನಡೆಸುವವರೆಗೂ ಅಡುಗೆ ಕೋಣೆಯನ್ನು ಸ್ವಚ್ಛಗೊಳಿಸದಂತೆ ಸಿಬ್ಬಂದಿಗೆ ಶೀಲಾ ಮನವಿ ಮಾಡಿದ್ದರು. ಆದರೆ, ಶೀಲಾ ಅವರು ಆಹಾರ ಅಧಿಕಾರಿಗೆ ದೂರು ನೀಡಿದ ನಂತರ ಹೋಟೆಲ್ ಸಿಬ್ಬಂದಿ ಅಡುಗೆ ಕೋಣೆಯನ್ನು ಸ್ವಚ್ಛಗೊಳಿಸಲು ಆರಂಭಿಸಿದರು ಎಂದು ಹೇಳಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ವಕೀಲೆ ವಿಧಾನಸೌಧ ಠಾಣೆಗೆ ದೂರು ನೀಡಿದ್ದಾರೆ. ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಪರಿಶೀಲನೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.