ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇತ್ತೀಚೆಗೆ ಹುಸಿ ಬಾಂಬ್ ಬೆದರಿಕೆ ಕರೆಗಳು ಹೆಚ್ಚಳವಾಗಿವೆ. ಕಳೆದ ಕೆಲವು ದಿನಗಳ ಹಿಂದೆ ನಗರದಲ್ಲಿರುವ 65ಕ್ಕೂ ಹೆಚ್ಚು ಶಾಲೆಗಳಿಗೆ ಇಮೇಲ್ ಮೂಲಕ ಬಾಂಬ್ ಬೆದರಿಕೆ ಮೆಸೇಜ್ ಬಂದಿತ್ತು. ಇದೀಗ ಮತ್ತೊಂದು ಇಂತಹದೇ ಘಟನೆ ನಡೆದಿದ್ದು, ದುಷ್ಕರ್ಮಿಗಳು ಶುಕ್ರವಾರ ಸರ್.ಎಂ.ವಿಶ್ವೇಶ್ವರಯ್ಯ ಮ್ಯೂಸಿಯಂಗೆ ಇಮೇಲ್ ಮೂಲಕ ಬಾಂಬ್ ಬೆದರಿಕೆ ಹಾಕಿದ್ದಾರೆ.
ಬೆಂಗಳೂರಿನ ಕಸ್ತೂರಬಾ ರಸ್ತೆಯಲ್ಲಿರುವ ಸರ್.ಎಂ.ವಿಶ್ವೇಶ್ವರಯ್ಯ ಮ್ಯೂಸಿಯಂಗೆ ಶುಕ್ರವಾರ ಬೆಳಿಗ್ಗೆ 9 ಗಂಟೆಗೆ ಬೆದರಿಕೆ ಮೇಲ್ ಬಂದಿದೆ. ಎಂದಿನಂತೆ ಸಿಬ್ಬಂದಿ ಮೇಲ್ ಚೆಕ್ ಮಾಡುವ ಹಾಗೇ ಇಂದೂ ಕೂಡ ಮೇಲ್ ಚೆಕ್ ಮಾಡಿದ್ದಾರೆ. ಆಗ Morgue999lol ಎಂಬ ಇ–ಮೇಲ್ ಐಡಿಯಿಂದ ವಿಶ್ವೇಶ್ವರಯ್ಯ ಮ್ಯೂಸಿಯಂಗೆ ಬಾಂಬ್ ಇಟ್ಟಿರುವ ಬಗ್ಗೆ ಬೆದರಿಕೆ ಸಂದೇಶ ಬಂದಿದೆ.
ಮ್ಯೂಸಿಯಂ ಒಳಗೆ ಗೌಪ್ಯ ಸ್ಥಳದಲ್ಲಿ ಸ್ಫೋಟಕ ವಸ್ತು ಇಟ್ಟಿದ್ದೇವೆ. ಈ ಬಾಂಬ್ ಬೆಳಗ್ಗೆ ಸ್ಫೋಟಗೊಂಡು ಮ್ಯೂಸಿಯಂ ನಲ್ಲಿರುವ ಎಲ್ಲರೂ ಸಾವನ್ನಪ್ಪಲ್ಲಿದ್ದಾರೆ. ನಾವು ‘ಟೆರರಿಸರ್ಸ್ 111′ ಎಂಬ ಸಂಘಟನೆಗೆ ಸೇರಿದವರು. ನಮ್ಮ ಗ್ರೂಪ್ ಹೆಸರನ್ನ ಮಾಧ್ಯಮದವರಿಗೆ ನೀಡಿ ಎಂದು ಮೇಲ್ ಕಳಿಸಿದ್ದಾರೆ.
ಮೇಲ್ ನೋಡಿದ ಕೂಡಲೇ ಆಡಳಿತ ಮಂಡಳಿ ಕಬ್ಬನ್ ಪಾರ್ಕ್ ಪೊಲೀಸರಿಗೆ ಮಾಹಿತಿ ನೀಡಿತ್ತು. ಸ್ಥಳಕ್ಕಾಗಮಿಸಿದ ಪೊಲೀಸ್ ಸಿಬ್ಬಂದಿ, ಶ್ವಾನ ದಳ, ಬಾಂಬ್ ನಿಶ್ಕ್ರಿಯ ದಳದ ತಂಡ ಪರಿಶೀಲನೆ ನಡೆಸಿದೆ. ಈ ವೇಳೆ, ಇಲ್ಲಿ ಯಾವುದೇ ಸ್ಫೋಟಕ ವಸ್ತು ಕಂಡು ಬಂದಿಲ್ಲ. ಇದೊಂದು ಹುಸಿ ಬಾಂಬ್ ಬೆದರಿಕೆ ಎಂದು ತಿಳಿದುಬಂದಿದೆ.
ಈ ಸುದ್ದಿ ಓದಿದ್ದೀರಾ? ಮಾರ್ಚ್‌ನಲ್ಲಿ ಬಿಬಿಎಂಪಿ ಬಜೆಟ್ ಮಂಡನೆ ಸಾಧ್ಯತೆ
ಈ ಮ್ಯೂಸಿಯಂಗೆ ಪ್ರತಿ ದಿನ ಶಾಲಾ ಮಕ್ಕಳು ಸೇರಿದಂತೆ ಸಾವಿರಾರು ಜನ ಭೇಟಿ ನೀಡುತ್ತಾರೆ. ಈ ಘಟನೆಯಿಂದಾಗಿ ಕೆಲಕಾಲ ಮ್ಯೂಸಿಯಂ ಸುತ್ತ-ಮುತ್ತ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಸದ್ಯ ಘಟನೆ ಸಂಬಂಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಈ ಹಿಂದೆ, ಬೆಂಗಳೂರು ಹಾಗೂ ಆನೇಕಲ್‌ನ 65ಕ್ಕೂ ಹೆಚ್ಚು ಶಾಲೆಗಳಿಗೆ ಬಾಂಬ್ ಬೆದರಿಕೆಯ ಇ–ಮೇಲ್ ಬಂದಿತ್ತು. ಆದರೆ, ಶಾಲೆಗಳಿಗೆ ಬಾಂಬ್ ಮೇಲ್ ಕಳಿಸಿದ್ದವರ ಗುರುತು ಇನ್ನೂ ಪತ್ತೆಯಾಗಿಲ್ಲ.