ಕೆರೆಯಲ್ಲಿ ಕುರಿಗಳ ಮೈತೊಳೆಯಲು ತೆರಳಿದ್ದ ತಂದೆ-ಮಗ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ರಾಮನಗರ ಜಿಲ್ಲೆಯ ಕನಕಪುರ ತಾಲುಕಿನಲ್ಲಿ ನಡೆದಿದೆ.
ತಾಲೂಕಿನ ಕುರುಬಳ್ಳಿ ಗ್ರಾಮದಲ್ಲಿ ಶುಕ್ರವಾರ ಸಂಜೆ ಘಟನೆ ನಡೆದಿದೆ. ಗ್ರಾಮದ ರಾಜು ಮತ್ತು ಅವರ ಮಗ ಪ್ರಸನ್ನ ಸಾವಿಗೀಡಾದ ದುರ್ದೈವಿಗಳು.
ರಾಜು ಕುಟುಂಬಸ್ಥರು ಕುರಿ ಸಾಕಾಣಿಕೆ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಎಂದಿನಂತೆ ಶುಕ್ರವಾರವೂ ಕುರಿ ಮೇಯಿಸಲು ತೆರಳಿದ್ದ ಅಪ್ಪ-ಮಗ, ಕುರಿಗಳ ಮೈತೊಳೆಯಲು ಕೆರೆಗೆ ಇಳಿದಿದ್ದಾರೆ. ಈ ವೇಳೆ, ಕಾಲು ಜಾರಿ ಆಳವಾಗಿದ್ದ ಜಾಗಕ್ಕೆ ಬಿದಿದ್ದಾರೆ. ಇಬ್ಬರೂ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಅಕ್ಕಪಕ್ಕದಲ್ಲಿ ಕುರಿ ಮೇಯಿಸುತ್ತಿದ್ದವರು ಕುರಿಗಳ ಬಳಿ ರಾಜು ಮತ್ತು ಪ್ರಸನ್ನ ಕಾಣದೇ ಇದ್ದದ್ದನ್ನು ಕಂಡು, ಅನುಮಾನದಿಂದ ಪರಿಶೀಲಿಸಿದ್ದಾರೆ. ಆಗ, ಇಬ್ಬರೂ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವುದು ಗೊತ್ತಾಗಿದೆ.
ಘಟನಾ ಸ್ಥಳಕ್ಕೆ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಬಂದಿದ್ದು, ಮೃತದೇಹಗಳನ್ನು ಹೊರ ತೆಗೆದಿದ್ದಾರೆ. ಕನಕಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.