ಇತೀಚಿನ ದಿನಗಳಲ್ಲಿ ರಾಜ್ಯ ರಾಜಧಾನಿ ಬೆಂಗಳೂರಿನ ‘ನಮ್ಮ ಮೆಟ್ರೋ’ ಒಂದಿಲ್ಲೊಂದು ವಿಚಾರಗಳಿಂದ ಸುದ್ದಿಯಲ್ಲಿದೆ. ಈ ಹಿಂದೆ, ನಿಯಮ ಉಲ್ಲಂಘನೆ, ಲೈಂಗಿಕ ಕಿರುಕುಳ ಆರೋಪಗಳು ಕೇಳಿಬರುತ್ತಿದ್ದರೆ, ಮೊದಲ ಬಾರಿಗೆ ಯುವಕನೊಬ್ಬ ಮೆಟ್ರೋ ಹಳಿ ಮೇಲೆ ಜಿಗಿದು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ವರದಿಯಾಗಿದೆ.
ಬೆಂಗಳೂರಿನ ಜಾಲಹಳ್ಳಿ ಮೆಟ್ರೋ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಕೇರಳ ಮೂಲದ 23 ವರ್ಷದ ಯುವಕ ಶ್ಯಾರೋನ್ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ. ಈತ ಬೆಂಗಳೂರಿನ ಅಬ್ಬಿಗೆರೆ ಬಳಿಯ ಐಟಿಐ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದನು. ಕಂಪನಿಯವರೇ ಈತನಿಗೆ ರೂಮ್ ಸಹ ಮಾಡಿಕೊಟ್ಟಿದ್ದರು.
ಡಿ.5ರ ಸಾಯಂಕಾಲ ಶ್ಯಾರೋನ್ ತನ್ನ ಸ್ನೇಹಿತರ ಜತೆಗೆ ಜಾಲಹಳ್ಳಿ ಮೆಟ್ರೋ ನಿಲ್ದಾಣಕ್ಕೆ ಬಂದಿದ್ದನು. ಜಾಲಹಳ್ಳಿಯಿಂದ ಮೆಜೆಸ್ಟಿಕ್ ಕಡೆಗೆ ತೆರಳಲು ಟಿಕೆಟ್ ಸಹ ಪಡೆದಿದ್ದನು. ರೈಲಿಗಾಗಿ ತನ್ನ ಸ್ನೇಹಿತರ ಜೆತೆಗೆ ಮೆಟ್ರೋ ಪ್ಲಾಟ್‌ಫಾರಂನಲ್ಲಿ ನಿಂತು ಕಾಯುತ್ತಿದ್ದನು. ರೈಲು ಪ್ಲಾಟ್‌ಫಾರಂ ಬಳಿ ಬರುವುದನ್ನು ಕಂಡು 7.12 ರ ಸುಮಾರಿಗೆ ಏಕಾಏಕಿ ರೈಲು ಹಳಿಗೆ ಶ್ಯಾರೋನ್ ಧುಮುಕಿದ್ದಾನೆ. ಈ ವೇಳೆ, ಮೆಟ್ರೋ ರೈಲು ಡಿಕ್ಕಿ ಹೊಡೆದಿದೆ.
ಯುವಕ ಸ್ನೇಹಿತರ ಜತೆಗೆ ಬಂದು ಉದ್ದೇಶಪೂರ್ವಕವಾಗಿ ಹಳಿಗೆ ಧುಮುಕಿದ್ದಾನೆ. ಯುವಕನ ಸ್ಥಿತಿ ಗಂಭೀರವಾಗಿದ್ದು, ಮೆಟ್ರೋ ಸಿಬ್ಬಂದಿ ಆ್ಯಂಬುಲೆನ್ಸ್ನಲ್ಲಿ ಕರೆದೊಯ್ದು ಯಶವಂತಪುರದ ಸಂಜೀವಿನಿ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ಈ ಸುದ್ದಿ ಓದಿದ್ದೀರಾ? ಡಿ.5ರಂದು ರಾಜ್ಯದಲ್ಲಿ 328 ಮಂದಿಗೆ ಕೊರೋನಾ ದೃಢ
ಮೆಟ್ರೋ ಸಂಚಾರ ವ್ಯತ್ಯಯ
ಘಟನೆ ಹಿನ್ನೆಲೆ, ನಮ್ಮ ಮೆಟ್ರೋ ಹಸಿರು ಮಾರ್ಗದಲ್ಲಿ ಕೆಲಕಾಲ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಸುಮಾರು 15 ನಿಮಿಷಗಳ ಕಾಲ ಮೆಟ್ರೋ ನಿಲ್ದಾಣದಲ್ಲಿ ಪ್ರಯಾಣಿಕರು ಪರಾಡುವಂತಾಯಿತು. ಇನ್ನು ಘಟನೆಯ ಸಮಯದಲ್ಲಿ ನಾಲ್ಕು ರೈಲುಗಳನ್ನು ಇತರೆ ನಿಲ್ದಾಣದ ಪ್ಲಾಟ್‌ಫಾರ್ಮ್‌ಗಳಲ್ಲಿ ಸ್ಥಗಿತಗೊಳಿಸಿ ಎಲ್ಲ ಪ್ರಯಾಣಿಕರನ್ನು ರೈಲಿನಿಂದ ಸುರಕ್ಷಿತವಾಗಿ ಹೊರಗಿಳಿಸಲಾಗಿದೆ.
ಮೆಟ್ರೋ ಹಳಿಗಳಲ್ಲಿ 750 ವೋಲ್ಟ್ ಹೆವಿ ಪವರ್ ಕರೆಂಟ್ ಹಾದು ಹೋಗಿರುತ್ತದೆ. ಹಾಗಾಗಿ, ಮತ್ತೆ ಪವರ್ ಜನರೇಟ್ ಮಾಡಲು ಅರ್ಧ ಗಂಟೆ ಸಮಯ ಬೇಕಾಗುತ್ತದೆ.
ಈ ಘಟನೆಯಿಂದ ಸುಮಾರು 45 ನಿಮಿಷಗಳ ಕಾಲ ಯಶವಂತಪುರ ಮತ್ತು ರೇಷ್ಮೆ ಸಂಸ್ಥೆ ಮೆಟ್ರೋ ನಿಲ್ದಾಣಗಳ ನಡುವೆ ಮಾತ್ರ ಹಸಿರು ಮಾರ್ಗದ ಕಾರ್ಯಾಚರಣೆ ನಡೆಸಲಾಯಿತು. ರಾತ್ರಿ 8 ಗಂಟೆಯಿಂದ ಸಂಪೂರ್ಣ ಹಸಿರು ಮಾರ್ಗದಲ್ಲಿ ಕಾರ್ಯಾಚರಣೆ ಪುನರಾರಂಭಿಸಲಾಗಿದೆ ಎಂದು ನಮ್ಮ ಮೆಟ್ರೋ ಸಾರ್ವಜನಿಕ ಸಂಪರ್ಕಾಧಿಕಾರಿ ಯಶವಂತ್ ಚೌಹಾಣ್ ಹೇಳಿದ್ದಾರೆ.
ಮೆಟ್ರೋ ಸಿಬ್ಬಂದಿ ಸ್ಥಳೀಯ ಪೊಲೀಸರಿಗೆ ಘಟನೆಯ ಬಗ್ಗೆ ಮಾಹಿತಿ ನೀಡಿದ್ದು, ಯಾವ ಕಾರಣಕ್ಕೆ ವ್ಯಕ್ತಿ ಹಳಿಗೆ ಜಿಗಿದಿದ್ದಾನೆ. ಆತನ ಹಿನ್ನೆಲೆ ಏನು ಎಂಬುದು ಪೊಲೀಸ್ ತನಿಖೆ ನಂತರ ತಿಳಿದುಬರಬೇಕಿದೆ. ಪೀಣ್ಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.