ಕರ್ನಾಟಕ ರಕ್ಷಣಾ ವೇದಿಕೆ(ಕರವೇ) ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಹಾಗೂ 29 ಕಾರ್ಯಕರ್ತರನ್ನು ಕೂಡಲೇ ಬಂಧನದಿಂದ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿ ಕರವೇ ಕಾರ್ಯಕರ್ತರು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಡಿ.6ರಂದು ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಸಿದರು.
“ಕನ್ನಡ ನಾಮಫಲಕ ಅಭಿಯಾನ ಕೈಗೊಂಡ ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಅವರು ಸೇರಿದಂತೆ ಹಲವು ಮುಖಂಡರನ್ನು ಸಂಬಂಧಪಡದ ಸುಳ್ಳು ಮೊಕದ್ದಮೆ ಹೂಡಿ ಜೈಲಿಗೆ ಕಳಿಸಿದ್ದಾರೆ. ವೇದಿಕೆ ಮುಖಂಡರ ಮನೆಗಳಿಗೆ ಪೊಲೀಸರು ನುಗ್ಗಿ ಕುಟುಂಬದವರಿಗೆ ಬೆದರಿಕೆ ಒಡ್ಡುತ್ತಿದ್ದಾರೆ. ಬಂಧಿತರನ್ನು ಕೂಡಲೇ ಬಿಡುಗಡೆ ಮಾಡಬೇಕು ಮತ್ತು ಕರವೇ ಮುಖಂಡರು, ಕಾರ್ಯಕರ್ತರ ಮೇಲಿನ ಪೊಲೀಸ್ ದಬ್ಬಾಳಿಕೆಯನ್ನು ಕೂಡಲೇ ನಿಲ್ಲಿಸಬೇಕು” ಎಂದು ಕರವೇ ಆಗ್ರಹಿಸಿದೆ.
ಈ ಧರಣಿಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಮುಖಂಡರಾದ ಸತೀಶ್ ಗೌಡ, ಗೊಮೂರ್ತಿ ಯಾದವ್, ಮೋಹನ್ ಗೌಡ, ಶ್ವೇತಾ ಗೌಡ, ಸಂಗೀತ ಶೆಟ್ಟಿ, ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರಾದ ನಲ್ಲೂರು ಪ್ರಸಾದ್, ಬೆಂಗಳೂರು ನಗರ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಎಂ.ಪ್ರಕಾಶ್ ಮೂರ್ತಿ, ಮಾಜಿ ಅಧ್ಯಕ್ಷರು ತಿಮ್ಮೆಶ್, ಸುಗಮ ಸಂಗೀತಾ ಗಾಯಕರಾದ ಆನಂದ್ ಮಾದಳೆಗೆರೆ ಮತ್ತು ವೆಂಕಟೇಶ್ ಮೂರ್ತಿ ಶಿರೂರ್ ಭಾಗವಹಿಸಿದ್ದರು.
ಏನಿದು ಪ್ರಕರಣ?
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿರುವ ವಾಣಿಜ್ಯ ಮಳಿಗೆಗಳ ನಾಮಫಲಕಗಳಲ್ಲಿ ಶೇ.60 ಕನ್ನಡ ಇರಬೇಕು ಎಂದು ಆಗ್ರಹಿಸಿ ಡಿ.27ರಂದು ನಗರದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಬೃಹತ್ ಪ್ರತಿಭಟನೆ ನಡೆಸಿತ್ತು. ಈ ವೇಳೆ, ಬೇರೆ ಬೇರೆ ಭಾಷೆಗಳಲ್ಲಿದ್ದ ಬೋರ್ಡ್ಗಳನ್ನು ಒಡೆದು ಹಾಕಲಾಗಿತ್ತು. ಜತೆಗೆ ಬೋರ್ಡ್‌ಗಳಿಗೆ ಕಪ್ಪು ಮಸಿ ಬಳಿದು ಕಾರ್ಯಕರ್ತರು ಆಕ್ರೋಶ ಹೊರಹಾಕಿದ್ದರು. ಈ ಘಟನೆಗೆ ಸಂಬಂಧಿಸಿದಂತೆ, ಕರವೇ ಅಧ್ಯಕ್ಷ ನಾರಾಯಣಗೌಡ ಅವರು ಸೇರಿದಂತೆ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ನಮ್ಮ ಮೆಟ್ರೋ ಹಳಿ ಮೇಲೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಯುವಕ
ಪ್ರಕರಣಕ್ಕೆ ಸಂಬಂಧಿಸಿ ಡಿ.28ರಂದು ನಾರಾಯಣಗೌಡ ಸೇರಿದಂತೆ ಕರವೇಯ 29 ಜನ ಕಾರ್ಯಕರ್ತರನ್ನು ಬಂಧಿಸಿದ್ದ ಚಿಕ್ಕಜಾಲ ಪೊಲೀಸರು, ದೇವನಹಳ್ಳಿಯ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದರು. ನ್ಯಾಯಾಧೀಶರು ಜನವರಿ 10ರವರೆಗೆ ನ್ಯಾಯಾಂಗ ಬಂಧನ ವಿಧಿಸಿ, ಆದೇಶಿಸಿದ್ದರು. ಬಂಧಿತರನ್ನು ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ಇರಿಸಲಾಗಿದೆ.
ಈ ನಡುವೆ ನಾರಾಯಣಗೌಡ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶರು, ಜಾಮೀನು ನೀಡಲು ನಿರಾಕರಿಸಿದ್ದರು. ಅರ್ಜಿಯ ಮುಂದಿನ ವಿಚಾರಣೆಯನ್ನು ಜ.6ಕ್ಕೆ ಮುಂದೂಡಿದ್ದರು.