ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಿಸಲು ತುಮಕೂರು ಬಳಿ ಎಂಟು ಸಾವಿರ ಎಕರೆ ಭೂಮಿ ಗುರುತಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ ಪರಮೇಶ್ವರ್ ಹೇಳಿದರು.
ತುಮಕೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಎಂಟು ಸಾವಿರ ಎಕರೆ ಜಮೀನು ಗುರುತಿಸಿ ಕೆಐಎಡಿಬಿಗೆ ಪ್ರಸ್ತಾವ ಸಲ್ಲಿಸಲಾಗಿದೆ. ಕೆಐಎಡಿಬಿ ಮುಂದಿನ ನಿರ್ಧಾರ ಕೈಗೊಳ್ಳಬೇಕಿದೆ. ಹಿಂದಿನ ಸರ್ಕಾರದ ಸಮಯದಲ್ಲೇ ಪ್ರಾಥಮಿಕ ಹಂತದ ಚರ್ಚೆ ನಡೆದಿತ್ತು. ಈಗ ಭೂಮಿ ಗುರುತಿಸುವ ಕೆಲಸ ಮಾಡಲಾಗಿದೆ” ಎಂದು ಹೇಳಿದರು.
“ನವದೆಹಲಿ, ಮುಂಬೈ, ಕೊಲ್ಕತ್ತದಂತಹ ಮಹಾನಗರಗಳಲ್ಲಿ ಎರಡು ವಿಮಾನ ನಿಲ್ದಾಣಗಳಿವೆ. ದೇವನಹಳ್ಳಿಯ ಕೆಂಪೇಗೌಡ ವಿಮಾನ ನಿಲ್ದಾಣದ ಮೇಲಿನ ಒತ್ತಡ ಕಡಿಮೆ ಮಾಡಲು ನಮ್ಮಲ್ಲೂ ಮತ್ತೊಂದು ನಿಲ್ದಾಣ ಅಗತ್ಯವಿದೆ” ಎಂದು ಹೇಳಿದರು.
“ದೇವನಹಳ್ಳಿ ಬಳಿ ಇರುವ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಎರಡು ರನ್ ವೇ ನಿರ್ಮಾಣ ಮಾಡಿದ್ದರೂ ಸಾಲದಾಗಿದೆ. ಸಂಚಾರ ದಟ್ಟನೆ ಹೆಚ್ಚಾಗಿದ್ದು, ಇಲ್ಲಿಂದ ಪ್ರತಿ ವರ್ಷ ಒಂದು ಕೋಟಿಗೂ ಹೆಚ್ಚು ಜನರು ಪ್ರಯಾಣ ಮಾಡುತ್ತಿದ್ದಾರೆ. ಜನದಟ್ಟಣೆ, ಒತ್ತಡ ಹೆಚ್ಚಾಗಿದ್ದರಿಂದ ಮತ್ತೊಂದು ವಿಮಾನ ನಿಲ್ದಾಣ ನಿರ್ಮಿಸುವುದು ಅನಿವಾರ್ಯವಾಗಿದೆ” ಎಂದರು.
“ಇನ್ನೂ ಪ್ರಾಥಮಿಕ ಹಂತದ ಚಟುವಟಿಕೆಗಳಷ್ಟೇ ನಡೆದಿದ್ದು , ಮುಂದಿನ ದಿನಗಗಳಲ್ಲಿ ಸ್ಪಷ್ಟ ರೂಪ ಸಿಗಲಿದೆ. ಎಲ್ಲ ರೀತಿಯಲ್ಲೂ ಚರ್ಚಿಸಿದ ನಂತರ ಒಂದು ನಿರ್ಧಾರಕ್ಕೆ ಬರಲಾಗುವುದು” ಎಂದು ಪರಮೇಶ್ವರ್ ಹೇಳಿದರು