ನಿಲ್ದಾಣದಿಂದ ಟೇಕ್ಆಫ್ ಆದ ಕೆಲವೇ ನಿಮಿಷಗಳಲ್ಲಿ ವಿಮಾನದ ಬಾಗಿಲು ಕಳಚಿಕೊಂಡ ಘಟನೆ ಅಮೆರಿಕದ ಪೋರ್ಟ್ಲ್ಯಾಂಡ್ ನಗರದಲ್ಲಿ ನಡೆದಿದೆ.
ಪೋರ್ಟ್ಲ್ಯಾಂಡ್ನಿಂದ ಒಂಟಾರಿಯೋ ನಗರಕ್ಕೆ ತೆರಳುತ್ತಿದ್ದ ಅಲಾಸ್ಕಾ ಬೋಯಿಂಗ್ 737-9 ಮ್ಯಾಕ್ಸ್ ವಿಮಾನದ ಮುಖ್ಯ ದ್ವಾರ ಟೇಕ್ ಆಫ್ ಆದ ಕೆಲ ನಿಮಿಷಗಳಲ್ಲಿ ಕಿತ್ತುಕೊಂಡು ಹೋಯಿತು. ಅದೃಷ್ಟವಶಾತ್ ದ್ವಾರದ ಪಕ್ಕದ ಆಸನಗಳಲ್ಲಿ ಯಾರು ಕುಳಿತಿರಲಿಲ್ಲ.
ಕ್ಯಾಲಿಫೋರ್ನಿಯಾದ ಪೋರ್ಟ್ಲ್ಯಾಂಡ್ನಿಂದ ಒಂಟಾರಿಯೋ ನಗರಕ್ಕೆ ತೆರಳುತ್ತಿದ್ದ ಎಎಸ್1282 ವಿಮಾನದಲ್ಲಿ ಇಂದು ಮಧ್ಯಾಹ್ನ ಈ ಘಟನೆ ಸಂಭವಿಸಿದೆ. ವಿಮಾನದಲ್ಲಿದ್ದ 171 ಪ್ರಯಾಣಿಕರು ಹಾಗೂ 6 ಸಿಬ್ಬಂದಿಯಿದ್ದ ವಿಮಾನ ಸುರಕ್ಷಿತವಾಗಿ ಪೋರ್ಟ್ಲ್ಯಾಂಡ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದಿದೆ. ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿದ್ದು, ಮಾಹಿತಿ ಲಭ್ಯವಾಗುತ್ತಿದ್ದಂತೆ ಹಂಚಿಕೊಳ್ಳುತ್ತೇವೆ ಎಂದು ಅಲಾಸ್ಕಾ ಏರ್ಲೈನ್ಸ್ ಎಕ್ಸ್ನಲ್ಲಿ ಮಾಹಿತಿ ಹಂಚಿಕೊಂಡಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಶಾಲಾ ಸಿಬ್ಬಂದಿಗೆ ‘ನಡತೆ ಸರ್ಟಿಫಿಕೇಟ್ʼ ಮಕ್ಕಳೇ ಕೊಡುವಂತಾಗಬೇಕು
ಅಲಾಸ್ಕಾ ಏರ್ಲೈನ್ಸ್ ವಿಮಾನದ ಘಟನೆಯ ಬಗ್ಗೆ ಅಮೆರಿಕದ ರಾಷ್ಟ್ರೀಯ ಸಾರಿಗೆ ಸುರಕ್ಷಾ ಮಂಡಳಿ ಕೂಡ ತನಿಖೆಗೆ ಆದೇಶಿಸಿದೆ.
ವಿಮಾನವು ಟೇಕ್ ಆಫ್ ನಂತರ 16,325 ಅಡಿ ಎತ್ತರಕ್ಕೆ ಹಾರಿತ್ತು. ನಂತರ ಸುರಕ್ಷಿತವಾಗಿ ಲ್ಯಾಂಡ್ ಆಯಿತು. ಬಾಗಿಲು ಕಿತ್ತು ಹೋದ ವಿಡಿಯೋಗಳನ್ನು ವಿಮಾನದಲ್ಲಿದ್ದ ಪ್ರಯಾಣಿಕರು ಸಾಮಾಜಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ.
ದ್ವಾರ ಕಳಚಿಕೊಂಡ ನಂತರ ವಿಮಾನದಲ್ಲಿದ್ದ ಕೆಲವು ಪ್ರಯಾಣಿಕರು ತಮ್ಮ ಮೊಬೈಲ್ ಫೋನ್ಗಳನ್ನು ಕಳೆದುಕೊಂಡರು. ಘಟನೆ ತುರ್ತು ಸ್ವರೂಪ ಪಡೆದ ಕಾರಣ ಆಕ್ಸಿಜನ್ ಮಾಸ್ಕ್ಗಳು ಕೂಡ ತೆರೆದುಕೊಂಡವು. ಬಹುತೇಕ ಪ್ರಯಾಣಿಕರು ವಿಮಾನ ಸುರಕ್ಷಿತವಾಗಿ ಲ್ಯಾಂಡ್ ಆಗುವವರೆಗೂ ಮಾಸ್ಕ್ ಧರಿಸಿದ್ದರು.