ರಾಜ್ಯದಲ್ಲಿ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ವಿದ್ಯಾರ್ಥಿ ವೇತನ ನೀಡಲು ಅಗತ್ಯ ಅನುದಾನ ನೀಡುವಂತೆ ಒತ್ತಾಯಿಸಿ ಇಸ್ಲಾಮಿಕ್ ಸ್ಟೂಡೆಂಟ್ ಅರ್ಗನೈಜೇಷನ್ ಅಫ್ ಇಂಡಿಯಾ ಒತ್ತಾಯಿಸಿದೆ. ಸಂಘಟನೆಯ ಮುಖಂಡರು ತುಮಕೂರು ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಹಕ್ಕೊತ್ತಾಯ ಸಲ್ಲಿಸಿದ್ದಾರೆ.
“ರಾಜ್ಯದ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗಾಗಿ ಅಲ್ಪಸಂಖ್ಯಾತರ ನಿರ್ದೇಶನಾಲಯದಿಂದ ಜಾರಿಗೊಳ್ಳುತ್ತಿರುವ ವಿವಿಧ ರೀತಿಯ ವಿದ್ಯಾರ್ಥಿವೇತನ, ಶಿಷ್ಯವೇತನ, ಪ್ರೋತ್ಸಾಹ ಧನ, ಉತ್ತೇಜನದಂತಹ ಕಾರ್ಯಕ್ರಮ, ಯೋಜನೆಗಳಿಗೆ ಸೂಕ್ತ ಅನುದಾನ ಸಿಗದೆ ಸಮರ್ಪಕವಾಗಿ ಜಾರಿಯಾಗುತ್ತಿಲ್ಲ” ಎಂದು ಸಂಘಟನೆ ಮುಖಂಡರು ವಿವರಿಸಿದ್ದಾರೆ.
“2023-24ರ ಜುಲೈ ತಿಂಗಳಲ್ಲಿ ಮಂಡಿಸಿದ ಬಜೆಟ್‌ನಲ್ಲಿ ಅಲ್ಪಸಂಖ್ಯಾತರ ಸಮುದಾಯದ ಅಭಿವೃದ್ಧಿಗಾಗಿ ಸುಮಾರು 2100 ಕೋಟಿ ರೂಪಾಯಿ ಅನುದಾನವನ್ನು ಒದಗಿಸಲಾಗಿತ್ತು, ಇದರಲ್ಲಿ ಅಲ್ಪಸಂಖ್ಯಾತರ ನಿರ್ದೇಶನಾಲಯಕ್ಕೆ ಅಂದಾಜು 1700 ಕೋಟಿ ರೂಪಾಯಿ ಹಂಚಿಕೆ ಮಾಡಿತ್ತು,ಈ ಅನುದಾನದಲ್ಲಿ ಮೆಟ್ರಿಕ್ ಪೂರ್ವ,ಮೆಟ್ರಿಕ್ ನಂತರ,ಮೆರಿಟ್ ಕಮ್ ಮೀನ್ಸ್(ಎಂಸಿಎಂ),ನ್ಯಾಷನಲ್ ಓವರ್ಸೀಸ್ ಸ್ಕಾಲರ್ಶಿಪ್(ಎನ್‌ಒಎಸ್) ಹಾಗೂ ಎಂ.ಫಿಲ್ ಮತ್ತುಪಿ.ಎಚ್.ಡಿ ಫೆಲೋಶಿಪ್ ಅನ್ನು ನೀಡಲು 160 ಕೋಟಿ ರೂಪಾಯಿ ನಿಯೋಜಿಸಲಾಗಿದೆ.ಆದರೆ ಕಳೆದ 6 ತಿಂಗಳ ಅವಧಿಯಲ್ಲಿ ನಿರ್ದೇಶನಾಲಯಕ್ಕೆ ಬಿಡುಗಡೆಗೊಂಡಿದ್ದು ಕೇವಲ 73.32 ಕೋಟಿ.ಇದರಲ್ಲಿವೆಚ್ಚವಾದದ್ದು,ಖರ್ಚಾದದ್ದು7.23 ಕೋಟಿ ಮಾತ್ರ.ಇದು ಒಟ್ಟು ಮೀಸಲಿದ್ದ ಅನುದಾನದ ಪೈಕಿ ಶೇ. 1ನಷ್ಟು ಮಾತ್ರ ಅನುದಾನ ಬಳಕೆಯಾಗಿದೆ” ಎಂದು ಪತ್ರದಲ್ಲಿ ಹೇಳಲಾಗಿದೆ.
“ಇನ್ನೊಂದೆಡೆ ರಾಜ್ಯದ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಸಂಶೋಧನಾ ವಿದ್ಯಾರ್ಥಿಗಳಿಗೆ ಜೆ.ಆರ್.ಎಫ್ ಮಾದರಿಯಲ್ಲಿ ನೀಡಲಾಗುತ್ತಿದ್ದ ಮಾಸಿಕ 25,000 ಮೊತ್ತವನ್ನು 2022-23 ನೇ ಸಾಲಿನ ವಿದ್ಯಾರ್ಥಿಗಳಿಗೆ ಅನ್ವಯವಾಗುವಂತೆ ಕಡಿತಗೊಳಿಸಿ 10,000 ಕ್ಕೆ ಇಳಿಸಿ,2020-21ನೇ ಸಾಲಿನ ವಿದ್ಯಾರ್ಥಿಗಳಿಗೆ ಮೂರು ವರ್ಷವಿದ್ದ ಪಿ.ಎಚ್.ಡಿ ಫೆಲೋಶಿಪ್ ಅವಧಿಯನ್ನು ಎರಡು ವರ್ಷಕ್ಕೆ ಕಡಿತಗೊಳಿಸುವ ಮೂಲಕ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ಕೊಡಲಿ ಪೆಟ್ಟು ನೀಡಿದೆ, ಇದರಿಂದ ಬಹುತೇಕ ವಿದ್ಯಾರ್ಥಿಗಳು ಸಂಶೋಧನೆಯನ್ನು ಅರ್ಧಕ್ಕೆ ನಿಲ್ಲಿಸುವ ದುಸ್ಥಿತಿ ಎದುರಾಗಿದೆ, ಆದ್ದರಿಂದ ಸರಕಾರ 2016-17ರ ಫೆಲೋಶಿಪ್ ಅಧಿಸೂಚನೆಯನ್ನೇ ಯಥಾವತ್ತಾಗಿ ಜಾರಿಗೊಳಿಸಬೇಕೆಂಬುದು ವಿದ್ಯಾರ್ಥಿಗಳ ಆಗ್ರಹವಾಗಿದೆ” ಎಂದು ಮನವಿಯಲ್ಲಿ ತಿಳಿಸಿದ್ದಾರೆ.
“ಕಳೆದ ವರ್ಷ ಕೇಂದ್ರ ಸರಕಾರವು ಎನ್.ಎಸ್.ಪಿ ಅಡಿಯಲ್ಲಿ ಒಂದರಿಂದ ಎಂಟನೇ ತರಗತಿಯ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದ್ದ ಮೆಟ್ರಿಕ್ ಪೂರ್ವ ವಿದ್ಯಾರ್ಥಿವೇತನವನ್ನು ನಿಲ್ಲಿಸಿ ಆದೇಶ ಹೊರಡಿಸಿತು.ಇದಕ್ಕಾಗಿ ಆರ್.ಟಿ.ಇ ಕಾಯ್ದೆಯನ್ನು ತಪ್ಪಾಗಿ ವ್ಯಾಖ್ಯಾನಿಸಿತ್ತು, ಅರ್ಜಿ ಸಲ್ಲಿಸಿದ್ದಲಕ್ಷಾಂತರ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ನೀಡಲು ಸುಮಾರು 110 ಕೋಟಿ ರೂ.ಗಳ ಅಗತ್ಯತೆಯಿತ್ತು.ಈ ಬಾರಿಯ ಜುಲೈ ಬಜೆಟ್ ನಲ್ಲಿಮುಖ್ಯಮಂತ್ರಿ ಸಿದ್ದರಾಮಯ್ಯನವರು 60 ಕೋಟಿ ರೂಪಾಯಿ ನೀಡಿ ಎಸ್ ಎಸ್ ಪಿ ಅಡಿಯಲ್ಲಿ ನೀಡಲು ಸಂಪೂರ್ಣ ರಾಜ್ಯ ಪ್ರಾಯೋಜಿತ ಕಾರ್ಯಕ್ರಮವನ್ನಾಗಿ ಮುಂದುವರಿಸುವುದಾಗಿ ಘೋಷಿಸಿದರು, ಆದರೆ ಕಳೆದ ವರ್ಷ ಅರ್ಜಿ ಸಲ್ಲಿಸಿದ್ದ ವಿದ್ಯಾರ್ಥಿಗಳಿಗೆ ಇಲ್ಲಿಯವರೆಗೂ ಸ್ಕಾಲರ್ಶಿಪ್ ತಲುಪಿಸುವಲ್ಲಿ ರಾಜ್ಯ ಸರಕಾರ ವಿಫಲವಾಗಿದೆ.” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
“ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗಾಗಿ ಚಾಲ್ತಿಯಲ್ಲಿರುವ ವಿವಿಧ ವಿದ್ಯಾರ್ಥಿ ವೇತನದ ಕಾರ್ಯಕ್ರಮಗಳಿಗೆ ಅಗತ್ಯ ಮತ್ತು ತುರ್ತು ಅನುದಾನ ಬಿಡುಗಡೆ ಮಾಡಿ, ವಿದ್ಯಾರ್ಥಿಗಳ ಕಲಿಕೆಗೆ ಸಹಕರಿಸಬೇಕು” ಎಂದು ಮನವಿಯಲ್ಲಿ ಕೋರಿದ್ದಾರೆ.
ಹಕ್ಕೊತ್ತಾಯ ಸಲ್ಲಿಸಿದ ನಿಯೋಗದಲ್ಲಿ ಇಸ್ಲಾಮಿಕ್ ಸ್ಟೂಡೆಂಟ್ ಅರ್ಗನೈಜೇಷನ್ ಅಫ್ ಇಂಡಿಯಾದ ತುಮಕೂರು ಜಿಲ್ಲಾಧ್ಯಕ್ಷ ಮೊಹಮದ್ ಖಲೀಲ್ ಖಾನ್, ಕಾರ್ಯದರ್ಶಿ ಮೊಹಮದ್ ಕೈಫ್, ಪದಾಧಿಕಾರಿಗಳಾದ ಜೈದ್ ಅಹಮದ್, ಇಬ್ರಾಹಿಂ ಸಯೀದ್ ಅವರುಗಳ ನಿಯೋಗವೂ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಈ ಸಂಬಂಧ ಮನವಿಯನ್ನು ಜಿಲ್ಲಾಧಿಕಾರಿ ಶುಭಾ ಕಲ್ಯಾಣ್ ಅವರಿಗೆ ಸಲ್ಲಿಸಿದರು.