ತುಮಕೂರು ಜಿಲ್ಲೆಯ ತಿಪಟೂರು ತಾಲೂಕು ಕಾಂಗ್ರೆಸ್ನಲ್ಲಿ ಭಿನ್ನಮತ ಭುಗಿಲೆದ್ದಿದೆ. ನಗರದ ಗುರು ಲೀಲಾ ಕಲ್ಯಾಣ ಮಂಟಪದಲ್ಲಿ ಪಕ್ಷದ ನೊಂದ ಕಾರ್ಯಕರ್ತರು ಸಭೆ ನಡೆಸಿದ್ದಾರೆ. ಕಾಂಗ್ರೆಸ್ ಶಾಸಕ ಕೆ ಷಡಕ್ಷರಿ ವಿರುದ್ಧ ಆರೋಪಗಳ ಸುರಿಮಳೆಗೈದಿದ್ದಾರೆ.
“ಕಾಂಗ್ರೆಸ್ ಗೆಲುವಿಗೆ ಶ್ರಮಿಸಿದ ಕಾರ್ಯಕರ್ತರು ಮತ್ತು ಮುಖಂಡರನ್ನು ಶಾಸಕ ಷಡಕ್ಷರಿ ಅವರು ಕಡೆಗಣಿಸುತ್ತಿದ್ದಾರೆ. 2018ರ ಚುನವಣೆಯಲ್ಲಿ 35 ಸಾವಿರ ಮತಗಳ ಅಂತರದಲ್ಲಿ ಸೋತ ಷಡಕ್ಷರಿಯವರು ಈ ಬಾರಿ 71 ಸಾವಿರ ಮತಗಳ ಅಂತರದಲ್ಲಿ ಗೆಲುವು ಪಡೆಯಲು ಕಾರ್ಯಕರ್ತರು ಮತ್ತು ಮುಖಂಡರು ಕಾರಣ ಎಂಬುದನ್ನು ಶಾಸಕರು ಮರೆತಿದ್ದಾರೆ” ಎಂದು ಕಾರ್ಯಕರ್ತರು ಆರೋಪಿಸಿದ್ದಾರೆ.
ಸಭೆಯಲ್ಲಿ ಕಾಂಗ್ರೆಸ್ ಮುಖಂಡ ಲೋಕೇಶ್ವರ ಮಾತನಾಡಿ, “ತಾಲೂಕಿನಲ್ಲಿ ಅಭಿವೃದ್ಧಿ ಶೂನ್ಯವಾಗಿವೆ. ವೈಯಕ್ತಿಕ ಕಾಮಗಾರಿಗೆ ಆದ್ಯತೆ ನೀಡಿ ಕಾರ್ಯಕರ್ತರನ್ನು ಶಾಸಕ ಕೆ.ಷಡಕ್ಷರಿ ಕಡೆಗಣಿಸುತ್ತಿದ್ದಾರೆ. ಗೆದ್ದು ಎಂಟು ತಿಂಗಳಾದರೂ ಸೌಜನ್ಯಕ್ಕೂ ಕಾರ್ಯಕರ್ತರ ಸಮಸ್ಯೆ ಆಲಿಸುವ ಕೆಲಸ ಮಾಡಿಲ್ಲ” ಎಂದು ಆರೋಪಿಸಿದ್ದಾರೆ.
“ತಿಪಟೂರು ತಾಲ್ಲೂಕು ಆಡಳಿತ ಆಳಿ ತಪ್ಪಿದೆ. ಭ್ರಷ್ಟಾಚಾರ ಮಿತಿಮೀರಿದೆ. ಇದರಲ್ಲಿ ಶಾಸಕರ ಪಾಲು ಇದೆ ಎಂಬ ಆರೋಪಗಳು ಕೇಳಿಬರುತ್ತಿವೆ. ಲೋಕಸಭೆ ಮತ್ತು ತಾಪಂ,ಜಿಪಂ ಚುನಾವಣೆ ಮುಂಚಿತವಾಗಿ ಶಾಸಕರ ಜೊತೆ ರಾಜ್ಯದ ನಾಯಕರು ಮಾತುಕತೆ ನಡೆಸಿ ಕಾರ್ಯಕರ್ತರಿಗೆ ಶಾಸಕರು ಸ್ಪಂದಿಸುವಂತೆ ಮಾಡಬೇಕು” ಎಂದು ಆಗ್ರಹಿಸಿದರು.
ಸಭೆಯಲ್ಲಿ ಮಾಜಿ ನಗರಸಭಾ ಉಪಾಧ್ಯಕ್ಷ ಸೊಪ್ಪು ಗಣೇಶ್, ಭಾರತಿ ಮಂಜುನಾಥ್, ಮುನ್ನ, ಲೋಕೇಶ್ವರ್ ಬೆಂಬಲಿಗರಾದ ರಂಗಾಪುರ ದೇವರಾಜು, ರೇಣು ಪಟೇಲ್, ಹೊನ್ನವಳ್ಳಿ ಏಜೆಸ್, ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಲೋಕೇಶ್ವರ್ ಅಭಿಮಾನಿಗಳು, ನೊಂದ ಕಾಂಗ್ರೆಸ್ ಕಾರ್ಯಕರ್ತರು, ಸಭೆಯಲ್ಲಿ ಭಾಗವಹಿಸಿದರು.