ತುಳುನಾಡಿನ, ತುಳು ಮಣ್ಣಿನ ಸೌಹಾರ್ದ ಪರಂಪರೆಯನ್ನು ಪಾಲಿಸುವುದು ಬದುಕಿನ ಕರ್ತವ್ಯ ಎಂಬಷ್ಟರ ಮಟ್ಟಿಗೆ ಪ್ರಜ್ಞಾಪೂರ್ವಕವಾಗಿ ಜಾಗರೂಕತೆಯ ನಡೆಯೊಂದಿಗೆ ಬಾಳಿ ಬದುಕಿದವರು ಹಿರಿಯ ವಿದ್ವಾಂಸರಾದ ಪ್ರೊ.ಅಮೃತ ಸೋಮೇಶ್ವರರು.
1935ರಲ್ಲಿ ಜನಿಸಿದ ಅಮೃತರು 89 ವರ್ಷಗಳ ತುಂಬು ಜೀವನವನ್ನು ಕಪಟವಿಲ್ಲದೆ ಬದುಕಿದವರು. ಕನ್ನಡ ಸಾಹಿತ್ಯ ಲೋಕದಲ್ಲಿ ತುಳು ಕನ್ನಡದ ಕೊಂಡಿಯಾಗಿದ್ದುಕೊಂಡು, ತುಳುವಿನ ಆಸ್ಮಿತೆಯನ್ನು ಎತ್ತಿ ತೋರಿದವರು. ಅಮೃತರ ಮನೆಮಾತು ಮಲಯಾಳಂ, ಶಿಕ್ಷಕರಾಗಿ ಕಲಿಸಿದ್ದು ಕನ್ನಡ, ಸಂಶೋಧನೆಯನ್ನೆಲ್ಲಾ ತುಳು ಭಾಷೆಗೆ ಧಾರೆ ಎರೆದರು.
ಹೈಸ್ಕೂಲಿನಲ್ಲಿ ಕವಿ ಅಮ್ಮೆಂಬಳ ಶಂಕರನಾರಾಯಣ ನಾವಡರ ಶಿಷ್ಯ, ಕಾಲೇಜಿನಲ್ಲಿ ಪಂಡಿತ ಸೇಡಿಯಾಪು ಕೃಷ್ಣ ಭಟ್ಟರು ಗುರುಗಳು , ಮುಂದುವರಿದ ಪರಂಪರೆಯಲ್ಲಿ ಅಮೃತರೆ ಗುರುಗಳಾದರು. ಪುತ್ತೂರು ವಿವೇಕಾನಂದ ಕಾಲೇಜಿನಲ್ಲಿ ಮೂರು ದಶಕಗಳ ಕನ್ನಡ ಅಧ್ಯಾಪನ. ಅಮೃತರ ಶಿಷ್ಯತ್ವ ನೂರಾರು, ಸಾವಿರಾರು ಸಾಹಿತ್ಯಾಸಕ್ತರಿಗೆ ಒದಗಿತು. ಅಗಣಿತ ಮಂದಿಗೆ ಅವರು ಪಾಠ ಮಾಡದೆಯೇ ಗುರುಗಳಾದರು. ನೆಚ್ಚಿನ ಮಾರ್ಗದರ್ಶಕರಾದರು.
ಅಮೃತರೆಂದರೆ ತುಳು ಜಾನಪದ, ಭೂತಾರಾಧನೆ, ಯಕ್ಷಗಾನದ ಬಗ್ಗೆ ಅಪಾರವಾದ, ಆಳವಾದ ಜ್ಞಾನ ಭಂಡಾರ. ಅವರು ಪಾಡ್ದನಗಳ ಸಂಗ್ರಹಕಾರ, ಯಕ್ಷಗಾನ ಕವಿ, ಯಕ್ಷಗಾನ ವಿಮರ್ಶಕ, ಭಾವಗೀತೆಯ ಕವಿ, ತುಳು ನಾಟಕಕಾರ, ಕನ್ನಡ ನಾಟಕಕಾರ, ಭಾಷಾ ಕೋಶ ರಚನೆಕಾರ, ಹೊಸ ಗಾದೆಗಳ ಜನಕ, ಕಾದಂಬರಿಕಾರ ಜೊತೆಗೆ ಮಾನವೀಯ ಅಂತಕರಣದ ಸರಳ ಸಜ್ಜನ ಚಿಂತಕ.
‘ಭಗವತಿ ಆರಾಧನೆ, ‘ಯಕ್ಷಾಂದೋಳ’ ‘ಕರೆಗಾಳಿ, ‘ತುಳು ಬದುಕು , ‘ಭ್ರಮಣ, ‘ತೀರದ ತೆರೆ, ‘ಹೃದಯ ವಚನಗಳು, ‘ಅವಿಲು, ‘ಯಕ್ಷಗಾನ ಕೃತಿ ಸಂಪುಟ, ‘ಮೋಯ ಮಲಯಾಳ -ಕನ್ನಡ ಕೋಶ, ‘ಅಪಾರ್ಥಿನೀ, ‘ಮೋಕೆದ ಬೀರೆ ಲೆಮಿಂಕಾಯೆ, ‘ತುಳು ಜೋಕುಮಾರಸ್ವಾಮಿ, ‘ತೆರಿನಾಯ ವಚನೊಲು, ‘ಯಕ್ಷಗಾನ ಛಾಯಾವತರಣ, ‘ಗೋಂದೊಲು ,ಇವೆಲ್ಲವೂ ಅಮೃತರು ಮಥಿಸಿದ ಎಂದೂ ತೀರದ ಅಮೃತಗಳು .
ಫಿನ್ಲ್ಯಾಂಡ್ ದೇಶದ ಜನಪದ ಮಹಾಕಾವ್ಯ ‘ಕಲೇವಾಲ’ದ ಒಂದು ಭಾಗವನ್ನು ‘ಮೋಕೆದ ಬೀರೆ ಲೆಮಿಂಕಾಯೆ’ ಎಂಬುದಾಗಿ ತುಳು ಭಾಷೆಗೆ ಅಮೃತರು ಅನುವಾದಿಸಿದ್ದರು.
ಡಾ.ಚಂದ್ರಶೇಖರ ಕಂಬಾರರ ‘ಜೋಕುಮಾರಸ್ವಾಮಿ’ ನಾಟಕವನ್ನು ತುಳುವಿಗೆ ಅನುವಾದಿಸಿದಾಗ ಇದರ ಪ್ರಥಮ ಪ್ರದರ್ಶನ ಉಡುಪಿ ರಂಗಭೂಮಿ ತಂಡವರು ಪ್ರಸ್ತುತ ಪಡಿಸಿದ್ದರು. ‘ಗೋಂದೊಲು’ ತುಳುನಾಡಿನಲ್ಲಿ ಕ್ರಾಂತಿಯ ಅಲೆ ಎಬ್ಬಿಸಿದ ನಾಟಕ. ಹೆಣ್ಣಿನ ಸ್ವಾಭಿಮಾನ, ಆತ್ಮಸ್ಥೈರ್ಯದ ಪ್ರತೀಕವಾಗಿ ಇವತ್ತಿಗೂ ಬಲು ಶಕ್ತಿಶಾಲಿ ನಾಟಕ.
ಅಮೃತರಿಗೆ 60 ತುಂಬಿದಾಗ ‘ಯಕ್ಷಾಂದೋಳ’ ಅಮೃತರ ಯಕ್ಷಗಾನ ವಿಮರ್ಶಾ ಲೇಖನಗಳ ಕೃತಿಯನ್ನು ಉಚ್ಚಿಲ ಕಲಾಗಂಗೋತ್ರಿ ಅಮೃತ ಸೋಮೇಶ್ವರ ಅಭಿನಂದನಾ ಸಮಿತಿ ಪ್ರಕಟಿಸಿ ಗೌರವ ಸಮರ್ಪಣೆ ಸಲ್ಲಿಸಿತ್ತು.
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ತುಳು ಅಕಾಡೆಮಿ ಪ್ರಶಸ್ತಿ, ಪ್ರತಿಷ್ಠಿತ ಕೇಂದ್ರ ಭಾಷಾ ಸಮ್ಮಾನ್ ಪುರಸ್ಕಾರದಿಂದ ಗೌರವಿಸಲ್ಪಟ್ಟವರು ಅಮೃತರು.
ನುಡಿದಂತೆ ನಡೆದ, ಬರೆದಂತೆ ಬದುಕಿದ, ಸತ್ಯವನ್ನು ಸತ್ಯವೆಂದೇ ಪ್ರತಿಪಾದಿಸಿದ, ಆಸೆ, ಆಮಿಷಗಳಿಗೆ ಬೆನ್ನು ಹತ್ತದ ಬರಹಗಾರರು ಅಮೃತರು. ಅವರದೆಂದೂ ಗಟ್ಟಿ ಏರು ಧ್ವನಿಯಾಗಿರಲಿಲ್ಲ, ಆದರೆ ಸ್ಪಷ್ಟವಾದ ನಿಖರ ಧ್ವನಿಯಾಗಿತ್ತು. ತನ್ನ ಹೆಸರಿನಿಂದಲೆ ಸೋಮೇಶ್ವರ ಎಂಬ ಊರಿಗೆ ಕೀರ್ತಿ ಕಲಶರಾದವರು ಅಮೃತರು.
