ಭಕ್ತಿ ಪಂಥದ ಚಳುವಳಿಗಳನ್ನು ಕೇವಲ ಧಾರ್ಮಿಕ ದೃಷ್ಟಿಕೋನದಿಂದ ನೋಡದೆ ಅವುಗಳ ಹಿಂದಿನ ಬಂಡಾಯವನ್ನು ಅರಿತುಕೊಳ್ಳಬೇಕು ಎಂದು ಚಿಂತಕ ಬಂಜಗೆರೆ ಜಯಪ್ರಕಾಶ ಕರೆ ನೀಡಿದರು.
ಬೆಂಗಳೂರು ವಿಶ್ವವಿದ್ಯಾಲಯದ ಡಾ. ಬಿ.ಆರ್. ಅಂಬೇಡ್ಕರ್ ಅಧ್ಯಯನ ಹಾಗೂ ಸಂಶೋಧನಾ ಕೇಂದ್ರದಲ್ಲಿ ಶನಿವಾರ ನಡೆದ ‘ಬೇಗಂಪುರ- ಜಾತಿ ವಿರೋಧಿ ಬುದ್ಧಿಜೀವಿಗಳ ಸಾಮಾಜಿಕ ದೃಷ್ಟಿಕೋನ’ ಕೃತಿ ಕುರಿತ ಸಂವಾದ ಮತ್ತು ಮಾತುಕತೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕೃಷ್ಣನ ಪರಮಭಕ್ತೆಯಾಗಿದ್ದ ಮೀರಾಬಾಯಿ ತನ್ನ ಭಜನೆಗಳಲ್ಲಿ ಕೇವಲ ಭಕ್ತಿ ಮಾತ್ರ ಪ್ರಕಟಿಸಿಲ್ಲ. ಪುರುಷ ಪ್ರಧಾನ ವ್ಯವಸ್ಥೆಯನ್ನು ಪ್ರಶ್ನಿಸಿದಳು. ಇದೇ ಕಾರಣಕ್ಕೆ ರಾಜಸ್ಥಾನದ ರಜಪೂತರ ವೇದಿಕೆಗಳಲ್ಲಿ ಮೀರಬಾಯಿಯ ಭಜನೆಗಳನ್ನು ಹಾಡುವುದಿಲ್ಲ. ಅಕ್ಕಮಹಾದೇವಿ ಲೌಕಿಕ ಜಗತ್ತನ್ನು ತ್ಯಜಿಸಿ ಚನ್ನಮಲ್ಲಿಕಾರ್ಜುನನ್ನ ಪತಿ ಎಂದು ಸ್ವೀಕರಿಸಿದಳು. ತನ್ನ ಪತಿ ಯಾರಾಗಬೇಕು ಎಂಬುದನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯವನ್ನು ಅಕ್ಕಮಹಾದೇವಿ ಪ್ರತಿಪಾದಿಸಿದಳು ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಶಾಲಾ ಸಿಬ್ಬಂದಿಗೆ ‘ನಡತೆ ಸರ್ಟಿಫಿಕೇಟ್ʼ ಮಕ್ಕಳೇ ಕೊಡುವಂತಾಗಬೇಕು
ರವಿದಾಸ್, ಕಬೀರ, ನಾಮದೇವ ಸೇರಿದಂತೆ ಹಲವಾರು ಸಂತರು ಮೇಲ್ಜಾತಿ ದಬ್ಬಾಳಿಕೆಯಿಲ್ಲದ ಸಮಾಜದ ಕನಸು ಕಂಡರು. ಭಕ್ತಿಪಂಥದೊಳಗಿನ ಪ್ರತಿಯೊಂದು ವಿವರದೊಳಗೂ ಕೂಡ ಚರಿತ್ರೆಯ ಪಾತ್ರವನ್ನು ನೋಡುವುದಕ್ಕೆ ನಮಗೆ ಅವಕಾಶ ಇದೆ. ಅದಕ್ಕಾಗಿ ಆಗಿನ ಸಾಮಾಜಿಕ, ಆರ್ಥಿಕ ಮತ್ತು ಸಾಂಸ್ಕೃತಿಕ ಇತಿಹಾಸವನ್ನು ಪರಿಶೀಲನೆ ಮಾಡಬೇಕು. ಆಗ ಪ್ರತಿಯೊಂದು ಪಂಥದ ಯಥಾರ್ಥತೆ ಏನು ಅನ್ನುವುದರ ಗ್ರಹಿಕೆ ನಮಗೆ ಲಭ್ಯವಾಗುತ್ತದೆ ಎಂದು ಬಂಜಗೆರೆ ಜಯಪ್ರಕಾಶ ಹೇಳಿದರು.
ಪ್ರೊ.ಸಿ.ಜಿ.ಲಕ್ಷ್ಮಿಪತಿ ಮಾತನಾಡಿ, ‘ಬೇಗಂಪುರ’ ಇಂಗ್ಲಿಷ್‌ನ ಗೇಲ್ ಓಮ್ವೆಟ್ ಅವರ ಕೃತಿಯ ಕನ್ನಡಾನುವಾದ. ಈ ಕೃತಿಯನ್ನು ಡಾ.ಬಂಜಗೆರೆ ಜಯಪ್ರಕಾಶ್ ಕನ್ನಡೀಕರಿಸಿದ್ದಾರೆ. ಗೇಲ್ ಓಮ್ವೆಟ್ ಅವರು ಐದು ಶತಮಾನಗಳ ಅವಧಿಯಲ್ಲಿ ವ್ಯಾಪಿಸಿಕೊಂಡಿರುವ ತಳಸ್ತರದ ದಾರ್ಶನಿಕರ ವಿಶ್ವ ದೃಷ್ಟಿಕೋನವನ್ನು ಒಟ್ಟುಗೂಡಿಸಿ ಇಲ್ಲಿ ನೀಡಿದ್ದಾರೆ ಎಂದರು.
ಚೋಖಾಮೇಳ, ಜನಾಬಾಯಿ, ಕಬೀರ್, ರವಿದಾಸ್, ತುಕಾರಾಂ, ಕರ್ತಾಭಜ, ಫುಲೆ, ಅಯೋತಿ ದಾಸ್, ಪಂಡಿತಾ ರಮಾಬಾಯಿ, ಪೆರಿಯಾರ್ , ಅಂಬೇಡ್ಕರ್ ಇವರ ದೃಷ್ಟಿಕೋನವು ಗಾಂಧಿಯವರ ರಾಮರಾಜ್ಯ ಆದರ್ಶದ ಗ್ರಾಮರಾಜ್ಯ, ನೆಹರು ಅವರ ಹಿಂದೂತ್ವ-ಲೇಪಿತ ಬ್ರಾಹ್ಮಣೀಯ ಸಮಾಜವಾದ ಮತ್ತು ಸಾವರ್ಕರ್ ಅವರ ಪ್ರಾದೇಶವಾದಿ ಹಿಂದೂ ರಾಷ್ಟ್ರ ಪರಿಕಲ್ಪನೆಗಳಿಗೆ ವ್ಯತಿರಿಕ್ತವಾಗಿದೆ ಎಂಬುದನ್ನು ಗೇಲ್ ಓಮ್ವೆಟ್ ಈ ಕೃತಿಯಲ್ಲಿ ಪ್ರಸ್ತುತ ಪಡಿಸಿದ್ದಾರೆ ಎಂದು ಪ್ರೊ.ಸಿ.ಜಿ.ಲಕ್ಷ್ಮಿಪತಿ ತಿಳಿಸಿದರು.
ಸಂಶೋಧನಾ ಕೇಂದ್ರದ ನಿರ್ದೇಶಕ ಸಿ ಬಿ ಹೊನ್ನು ಸಿದ್ದಾರ್ಥ, ಪ್ರೊ ಟಿ ಹನುಮಂತರಾಯ ಹಾಗೂ ಸಂಶೋಧನಾ ವಿದ್ಯಾರ್ಥಿಗಳು ಹಾಜರಿದ್ದರು.