ಕಟ್ಟಡ ನಿರ್ಮಾಣ ಕಾಮಗಾರಿ ವೇಳೆ ಕಾರ್ಮಿಕನ ತಲೆಗೆ ಕಬ್ಬಿಣದ ರಾಡ್ ಹೊಕ್ಕಿದ್ದು, ಕಾರ್ಮಿಕ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಆನೇಕಲ್ ತಾಲೂಕಿನಲ್ಲಿ ನಡೆದಿದೆ.
ಮೃತ ಕಾರ್ಮಿಕನನ್ನು ತ್ರಿಪುರಾ ರಾಜ್ಯದ ಅಗರ್ತಲಾ ಮೂಲದ ದೀಪಾಂಕರ್ ಚಾಸ ಎಂದು ಹೇಳಲಾಗಿದೆ.
ಆನೇಕಲ್ ತಾಲೂಕಿನ ಕೆ.ಜಿ.ವೀರಸಂದ್ರದಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿ ನಡೆಯುತ್ತಿತ್ತು. ಆರು ತಿಂಗಳಿಂದ ದೀಪಾಂಕರ್ ಕೂಡ ಅಲ್ಲಿಯೇ ಕೆಲಸ ಮಾಡುತ್ತಿದ್ದರು.
100 ಅಡಿ ಎತ್ತರದಿಂದ ಕಬ್ಬಿಣದ ರಾಡ್ ಕಾರ್ಮಿಕನ ಮೇಲೆ ಬಿದ್ದಿದ್ದು, ತಲೆಗೆ ಹೊಕ್ಕಿದೆ. ತೀವ್ರ ರಕ್ತಸ್ರಾವವಾಗಿದ್ದು, ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ.
ದೀಪಾಂಕರ್ ಇತ್ತೀಚೆಗಷ್ಟೇ ಕೆಲಸಕ್ಕಾಗಿ ಬೆಂಗಳೂರಿಗೆ ಬಂದಿದ್ದರು. ದುರದೃಷ್ಟವಶಾತ್ ದಾರುಣ ಅಂತ್ಯ ಕಂಡಿದ್ದಾರೆ. ಕಾಮಗಾರಿ ವೇಳೆ ಕಾರ್ಮಿಕರು ಯಾವುದೇ ರಕ್ಷಣಾ ಉಪಕರಣಗಳನ್ನೂ ಬಳಸುತ್ತಿರಲಿಲ್ಲ ಎಂದು ಹೇಳಲಾಗಿಲಾಗಿದೆ.
ದುರಂತ ಘಟನೆ ಸಂಬಂಧ ಮೃತನ ಚಿಕ್ಕಪ್ಪ ಅಭಿಮನ್ಯು ಕೈರಾ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸಿದ್ದಾರೆ.
ಮೇಸ್ತ್ರಿ ಮೊಹಮ್ಮದ್ ಅತ್ತಾವುಲ್ಲಾ ಮತ್ತು ಇತರರ ವಿರುದ್ಧ ಐಪಿಸಿ ಸೆಕ್ಷನ್ 304 ಎ ಅಡಿಯಲ್ಲಿ ಪ್ರಕರಣ ದಾಖಲಿಸಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.